ಬೆಂಗಳೂರು, ಡಿಸೆಂಬರ್ 13: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಸೂಲಿಬೆಲೆ ಗ್ರಾಮದಲ್ಲಿ ನಡೆದ ವಯೋವೃದ್ಧ ದಂಪತಿಯ ಹತ್ಯೆ ಪ್ರಕರಣಕ್ಕೆ ಇದೀಗ ದೊಡ್ಡ ತಿರುವು ದೊರೆತಿದೆ. ಆಸ್ತಿ ವಿವಾದದ ಹಿನ್ನೆಲೆಯಲ್ಲಿ ದಂಪತಿಯನ್ನು ಸೊಸೆ ಮತ್ತು ಮೊಮ್ಮಕ್ಕಳೇ ಹತ್ಯೆ ಮಾಡಿರುವುದು ಪೊಲೀಸರು ನಡೆಸಿದ ತನಿಖೆಯಿಂದ ಬೆಳಕಿಗೆ ಬಂದಿದೆ. 70ರ ಹರೆಯದ ತಂದೆ ರಾಮಕೃಷ್ಣಪ್ಪ ಮತ್ತು 65 ವರ್ಷದ ತಾಯಿ ಮುನಿರಾಮಕ್ಕ ಅವರ ಕೊಲೆ ಪ್ರಕರಣದ ಪ್ರಮುಖ ಆರೋಪಿ ನರಸಿಂಹ ಎಂಬಾತ ಡಿಸೆಂಬರ್ 10ರಂದು ತನ್ನ ಪತ್ನಿ ಭಾಗ್ಯ ಮತ್ತು ಮಕ್ಕಳು ಸೇರಿ ಇಬ್ಬರನ್ನು ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ.
ಪೋಲೀಸರ ಪ್ರಕಾರ, ನಾಲ್ಕು ಹೆಣ್ಣುಮಕ್ಕಳು ಸೇರಿದಂತೆ ತಮ್ಮೆಲ್ಲಾ ಐದು ಮಕ್ಕಳಿಗೆ ಆಸ್ತಿಯನ್ನು ಹಂಚಲು ವೃದ್ಧ ದಂಪತಿ ನಿರ್ಧರಿಸಿದ ನಂತರ ತನ್ನ ಅತ್ತೆಯ ಕೊಲೆಗೆ ಭಾಗ್ಯ ಸಂಚು ಹೂಡಿದ್ದಳು. ಇತ್ತೀಚಿಗೆ ನರಸಿಂಹ ವ್ಯಾಪಾರದಲ್ಲಿ ಅಪಾರ ನಷ್ಟ ಅನುಭವಿಸಿದ್ದರು. ತಂದೆ-ತಾಯಿಯಿಂದ ಆಸ್ತಿ ಪಡೆದು ಸಾಲ ತೀರಿಸುವಂತೆ ಪತಿಗೆ ಭಾಗ್ಯ ಸೂಚಿಸಿದ್ದಾಳೆ. ಇದೇ ವೇಳೆ ನರಸಿಂಹ ಅವರ ಪೋಷಕರು ಆಸ್ತಿಯನ್ನು ಅವರ ನಾಲ್ವರು ಸಹೋದರಿಯರಿಗೂ ನೀಡಲು ಯೋಜಿಸಿದ್ದರು.
ಡಿಸೆಂಬರ್ 10 ರಂದು ಸಂಜೆ ಭಾಗ್ಯ, ಆಕೆಯ ಮಗಳು ವರ್ಷಾ ಮತ್ತು ಆಕೆಯ ಅಪ್ರಾಪ್ತ ಮಗ ವೃದ್ಧ ದಂಪತಿಯ ಮನೆಗೆ ಭೇಟಿ ನೀಡಿ ಅವರನ್ನು ಹತ್ಯೆ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಸೂಲಿಬೆಲೆಯ ವಾಲ್ಮೀಕಿ ನಗರದಲ್ಲಿ ವೃದ್ಧ ದಂಪತಿಯನ್ನು ಹತ್ಯೆ ಮಾಡಲಾಗಿತ್ತು. ಪ್ರಕರಣದಲ್ಲಿ ಕೊಲೆಯಾದ ದಂಪತಿಯ ಪುತ್ರ ನರಸಿಂಹ ಪ್ರಮುಖ ಆರೋಪಿಯಾಗಿದ್ದು, ಆತನನ್ನು ಬಂಧಿಸಲಾಗಿತ್ತು. ತನ್ನ ಪತ್ನಿ ಮತ್ತು ಮಕ್ಕಳು ದಂಪತಿಯನ್ನು ಕೊಲೆ ಮಾಡಿರುವುದಾಗಿ ವಿಚಾರಣೆ ವೇಳೆ ನರಸಿಂಹ ಒಪ್ಪಿಕೊಂಡಿದ್ದಾರೆ.
ಪತಿ ತನ್ನ ವ್ಯಾಪಾರದಲ್ಲಿ ಅಪಾರ ನಷ್ಟ ಅನುಭವಿಸಿದ ಹಿನ್ನೆಲೆಯಲ್ಲಿ ನರಸಿಂಹ ಪತ್ನಿ ಭಾಗ್ಯ ಕೊಲೆಗೆ ಸಂಚು ಹೂಡಿದ್ದಳು. ಭಾಗ್ಯ, ಆಕೆಯ ಮಗಳು ವರ್ಷಾ ಮತ್ತು ಆಕೆಯ ಅಪ್ರಾಪ್ತ ಪುತ್ರ ವೃದ್ಧ ದಂಪತಿಯನ್ನು ಕೊಲೆ ಮಾಡಲು ಮನೆಗೆ ಭೇಟಿ ನೀಡಿದ್ದರು ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ್ ಬಲದಂಡಿ ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಅಪ್ರಾಪ್ತ ಬಾಲಕ ಸೇರಿದಂತೆ ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.