ಬೆಳಗಾವಿ, (ಡಿಸೆಂಬರ್ 13): ಲೋಕಸಭಾ ಕಲಾಪದ ವೇಳೆ ಭಾರೀ ಭದ್ರತಾ ಲೋಪವಾಗಿದೆ. ಪ್ರೇಕ್ಷಕರ ಗ್ಯಾಲರಿಯಿಂದ ಇಬ್ಬರು ಏಕಾಏಕಿ ಸದನದೊಳಗೆ ನುಗ್ಗಿ ಬಂದಿದ್ದಾರೆ. ಅಲ್ಲದೇ ಕಲರ್ ಸ್ಮೋಕ್ ಹರಡಿ ಆತಂಕ ಮೂಡಿಸಿದ್ದಾರೆ. ಇದರ ಬೆನ್ನಲ್ಲೇ ಇತ್ತ ಬೆಳಗಾವಿಯ ಸುವರ್ಣಸೌಧದಲ್ಲೂ ಸಹ ಭದ್ರತಾ ಪರಿಶೀಲನೆ ನಡೆಸಲಾಗಿದೆ. ಖುದ್ದು ಸ್ಪೀಕರ್ ಯುಟಿ ಖಾದರ್ ಅವರು ಸುವರ್ಣಸೌಧದ ಭದ್ರತೆ ಬಗ್ಗೆ ಮಾಹಿತಿ ಪಡೆದುಕೊಂಡರು.
ಬೆಳಗಾವಿ ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹಾಗೂ ಸುವರ್ಣ ಸೌಧದ ಮಾರ್ಷಲ್ಗಳಿಂದ ಮಾಹಿತಿ ಪಡೆದುಕೊಂಡರು. ಅಲ್ಲದೇ ಸಭಾಂಗಣದ ಸುತ್ತ ರೌಂಡ್ ಹಾಕಿ ಭದ್ರತಾ ವ್ಯವಸ್ಥೆ ಪರಿಶೀಲಿಸಿದ್ದು, ಶಾಸಕರು, ಸಚಿವರ ಆಪ್ತ ಸಹಾಯಕರು(ಪಿಎ) ಎಂದು ಹೇಳಿಕೊಂಡು ಬರುವವರ ಬಗ್ಗೆ ನಿಗಾ ವಹಿಸುವಂತೆ ಭದ್ರತಾ ಸಿಬ್ಬಂದಿ, ಅಧಿಕಾರಿಗಳಿಗೆ ಸ್ಪೀಕರ್ ಖಡಕ್ ಸೂಚನೆ ನೀಡಿದ್ದಾರೆ.
ಸ್ಪೀಕರ್ ಸೂಚನೆ ಬೆನ್ನಲ್ಲೇ ಎಚ್ಚೆತ್ತ ಮಾರ್ಷಲ್ಗಳು. ವಿಧಾನಸಭೆ ಸಭಾಂಗಣ ಪ್ರವೇಶಿಸುವ ಪತ್ರಕರ್ತರು, ಅಧಿಕಾರಿಗಳು ಹಾಗೂ ಇತರೆ ಸಿಬ್ಬಂದಿ ಪಾಸ್ ಮಾದರಿ ಸಂಗ್ರಹಿಸಿ ಪರಿಶೀಲನೆ ನಡೆಸಿದ್ದಾರೆ.
ಲೋಕಸಭೆಯ ಒಳಗೆ ನುಗ್ಗಿದ ಇಬ್ಬರ ಸದ್ಯಕ್ಕೆ ಪೊಲೀಸರು ವಶಕ್ಕೆ ಪಡೆದುಕೊಂಡು ವಿಚಾರಣೆಗೊಳಪಡಿಸಿದ್ದಾರೆ. ಸದನದೊಳಗೆ ನುಗ್ಗಿದವರನ್ನು ಸಾಗರ್ ಶರ್ಮಾ ಹಾಗೂ ಮೈಸೂರು ಮೂಲದ ಇಂಜಿನಿಯರಿಂಗ್ ವಿದ್ಯಾರ್ಥಿ ಮನೋರಂಜನ್ ಎಂದು ಗುರುತಿಸಲಾಗಿದೆ. ಮೈಸೂರು ಸಂಸದ ಪ್ರತಾಪ್ ಸಿಂಹ ಅವರ ಪಾಸ್ ಪಡೆದುಕೊಂಡು ಲೋಕಸಭೆ ಒಳಗೆ ಪ್ರವೇಶಿಸಿದ್ದರು ಎಂದು ತಿಳಿದುಬಂದಿದ್ದು, ಈ ಬಗ್ಗೆ ಸೂಕ್ತ ನಡೆಸುವಂತೆ ಲೋಕಸಭಾ ಸ್ಪೀಕರ್ ಒಂ ಬಿರ್ಲಾ ಸೂಚಿಸಿದ್ದಾರೆ.