2024ರಲ್ಲಿ ರಾಜ್ಯದಲ್ಲಿ ಬೋರ್​​ವೆಲ್​ ಸೆನ್ಸಸ್: ಅನಧಿಕೃತ ಕೊಳವೆ ಬಾವಿಗಳಿಗೆ ಬೀಳಲಿದೆ ಬೀಗ!

ಬೆಂಗಳೂರು, ಡಿಸೆಂಬರ್ 13: ಕೊಳವೆ ಬಾವಿಗಳಿಗೆ ಸಂಬಂಧಿಸಿ ಈ ಹಿಂದೆ 2019ರಲ್ಲಿ ರಾಜ್ಯದಲ್ಲಿ ಗಣತಿ ನಡೆಸಲಾಗಿತ್ತು. ಇದೀಗ 2024ರಲ್ಲೂ ಕೊಳವೆ ಬಾವಿ ಗಣತಿ ನಡೆಸಲು ರಾಜ್ಯ ಮುಂದಾಗಿದೆ. 2019 ರ ಬೋರ್‌ವೆಲ್ ಸೆನ್ಸಸ್ ವರದಿಯ ಪ್ರಕಾರ, ಕರ್ನಾಟಕದಲ್ಲಿ 14 ಲಕ್ಷ ಅಧಿಕೃತ ಬೋರ್‌ವೆಲ್‌ಗಳಿವೆ. ಆದರೆ, ಅನಧಿಕೃತ ಕೊಳವೆ ಬಾವಿಗಳ  ಬಗ್ಗೆ ಇನ್ನೂ ಯಾವುದೇ ಲೆಕ್ಕಾಚಾರಗಳಿಲ್ಲ.

ಈಗ ಸರ್ಕಾರವು ಎಷ್ಟು ಅಧಿಕೃತ ಮತ್ತು ಅನಧಿಕೃತ ಬೋರ್‌ವೆಲ್‌ಗಳಿವೆ ಎಂಬುದನ್ನು ತಿಳಿದುಕೊಳ್ಳುವ ಕೆಲಸ ಮಾಡಲು ಮುಂದಾಗಿದೆ. ಇದು 2024 ರಲ್ಲಿ ಎಲ್ಲಾ ರಾಜ್ಯಗಳ ಅಂತರ್ಜಲ ಮಂಡಳಿಗಳ ಸಮನ್ವಯದೊಂದಿಗೆ ಕೇಂದ್ರ ಅಂತರ್ಜಲ ಮಂಡಳಿಯಿಂದ ಕೈಗೊಳ್ಳಲಾಗುವ ಅಖಿಲ ಭಾರತ ಬೋರ್‌ವೆಲ್ ಗಣತಿಯ ಭಾಗವಾಗಿರಲಿದೆ.

ಕಳೆದ ಐದು ವರ್ಷಗಳಲ್ಲಿ ಬೋರ್‌ವೆಲ್‌ಗಳ ಸಂಖ್ಯೆಯಲ್ಲಿ ಶೇ 20- 25 ರಷ್ಟು ಹೆಚ್ಚಳವಾಗಿತ್ತು. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಬೋರ್‌ವೆಲ್‌ಗಳ ಸಂಖ್ಯೆಯನ್ನು ನಿಯಂತ್ರಿಸುತ್ತಿದ್ದರೂ, ಅನಧಿಕೃತ ಬೋರ್‌ವೆಲ್‌ಗಳು ಸಾಕಷ್ಟು ಇವೆ. ಗಣತಿ ಮುಗಿದ ನಂತರ, ಅಂತಹ ಎಷ್ಟು ಬೋರ್​ವೆಲ್ ಇವೆ ಎಂದು ನಮಗೆ ತಿಳಿಯಲಿದೆ. ಅವುಗಳನ್ನು ಮುಚ್ಚಲಾಗುವುದು ಎಂದು ಸಣ್ಣ ನೀರಾವರಿ ಸಚಿವ ಎನ್‌ಎಸ್ ಬೋಸರಾಜು ತಿಳಿಸಿರುವುದಾಗಿ ‘ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್‌’ ವರದಿ ಮಾಡಿದೆ.“

ಈ 14 ಲಕ್ಷ ಬೋರ್‌ವೆಲ್‌ಗಳು ಖಾಸಗಿ, ವಾಣಿಜ್ಯ ಮತ್ತು ನೀರಾವರಿಗೆ ಬಳಸುವ ಕೊಳವೆ ಬಾವಿಗಳನ್ನು ಒಳಗೊಂಡಿವೆ ಎಂದು ಅಂತರ್ಜಲ ಮಂಡಳಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಕರ್ನಾಟಕದಲ್ಲಿ 2021 ರವರೆಗೆ ಉತ್ತಮ ಮಳೆಯಾಗಿ ಅಂತರ್ಜಲ ಪರಿಸ್ಥಿತಿ ಸುಧಾರಿಸಿದ್ದರೆ, 2023 ರಲ್ಲಿ ಬರಗಾಲದಿಂದಾಗಿ ಮತ್ತೆ ಕುಸಿತ ಕಂಡಿದೆ. ಇದು ಮತ್ತೆ ಅಂತರ್ಜಲದ ಮೇಲೆ ಅವಲಂಬನೆಯನ್ನು ಹೆಚ್ಚಿಸುತ್ತದೆ. ಅಲ್ಲದೆ, ಅಂತರ್ಜಲದ ಮಟ್ಟ ಕಡಿಮೆಯಾಗಿದೆ ಎಂದು ಅಧಿಕಾರಿಯೊಬ್ಬರು ವಿವರಿಸಿದ್ದಾರೆ.