ಬರದಿಂದ ತತ್ತರಿಸಿದ ಬಳ್ಳಾರಿ ರೈತರಿಗೆ ಮತ್ತೊಂದು ಸಂಕಷ್ಟ; ಮೆಣಸಿನಕಾಯಿಗೆ ರೋಗ, ಅನ್ನದಾತ ಕಂಗಾಲು

ಬಳ್ಳಾರಿ, ನ.23: ಬರದಿಂದ ತತ್ತರಿಸಿದ ಬಳ್ಳಾರಿ ರೈತರಿಗೆ ಮತ್ತೊಂದು ಸಂಕಷ್ಟ ಎದುರಾಗಿದೆ. ಮೆಣಸಿನಕಾಯಿ ಬೆಳೆ ಅನ್ನದಾತರಿಗೆ ಗಾಯದ ಮೇಲೆ ಬರೆ ಎಳೆದಿದೆ. ಫಸಲು ಬರುವ ಹಂತದಲ್ಲಿ ಮೆಣಸಿನಕಾಯಿ ಬೆಳೆಗಳಿಗೆ ರೋಗದ ಕಾಟ ಶುರುವಾಗಿದೆ. ಹೀಗಾಗಿ ಬಳ್ಳಾರಿಯಲ್ಲಿ ಅನೇಕ ರೈತರು ಮೆಣಸಿನಕಾಯಿ ರೋಗದಿಂದ ಸಂಕಷ್ಟ ಎದುರಿಸುತ್ತಿದ್ದಾರೆ. ಎಷ್ಟೇ ರಾಸಾಯನಿಕ ಸಿಂಪಡಣೆ ಮಾಡಿದರೂ ಯಾವುದೇ ಪ್ರಯೋಜನವಾಗುತ್ತಿಲ್ಲ ಎಂದು ಅಳಲು ತೋಡಿಕೊಂಡಿದ್ದಾರೆ. ಲಕ್ಷಾಂತರ ರೂ ಖರ್ಚು ಮಾಡಿ ಬೆಳೆದ ಬೆಳೆ ಕೈಗೊಡುತ್ತಿದ್ದು ರೈತರು ಕಣ್ಣೀರಿನಲ್ಲಿ ಕೈ ತೊಳೆಯುವ ಪರಿಸ್ಥಿತಿ ಇದೆ.

ತಲಾ ಎಕರೆಗೆ 1 ಲಕ್ಷವರಿಗೂ ಖರ್ಚು ಮಾಡಿ ಮೆಣಸಿನಕಾಯಿ ಬೆಳೆಯಲಾಗಿದೆ. ಆದರೆ ಮೆಣಸಿನಕಾಯಿ ಬೆಳೆಗೆ ರಸ ಹಿರುವ ರೋಗ ಕಾಡುತ್ತಿದೆ. ಮೆಣಸಿನಕಾಯಿ ಬೆಳೆಗೆ ಕಪ್ಪು ಥ್ರಿಪ್ಸ್, ನುಸಿ, ಮುಟುರು ರೋಗಗಳು ತಗುಲುತ್ತಿದ್ದು ಮೆಣಸಿನಕಾಯಿ ಕೆಂಪು ಬಣ್ಣಕ್ಕೆ ತಿರುಗುತ್ತಿದೆ. ಒಣಗುವ ಹಂತಕ್ಕೆ ತಲುಪಿವೆ. ಗಿಡದಲ್ಲಿಯೇ ಮೆಣಸಿನಕಾಯಿ ಸತ್ವ ಕಳೆದುಕೊಂಡು ಒಣಗುತ್ತಿದೆ. ಎಲೆಗಳು ಉದರುತ್ತಿವೆ. ಕೀಟ ಬಾಧೆಗೆ ಬಳ್ಳಾರಿ ಜಿಲ್ಲೆ ರೈತರು ಹೈರಾಣಾಗಿದ್ದಾರೆ. ಬಳ್ಳಾರಿ, ಕುರುಗೋಡು, ಕಂಪ್ಲಿ, ಸಂಡೂರು ತಾಲೂಕಿನ‌ಲ್ಲಿ ಎಷ್ಟೇ ಕೀಟ ನಾಶಕ ರಾಸಾಯನಿಕ ಬಳಕೆ ಮಾಡಿದರೂ ರೋಗ ನಿಯಂತ್ರಣಕ್ಕೆ ಬರುತ್ತಿಲ್ಲ. ಬಳ್ಳಾರಿ ಜಿಲ್ಲೆಯಾದ್ಯಂತ 37 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಮೆಣಸಿನಕಾಯಿ ಬೆಳೆಯಲಾಗಿದೆ. ಫಸಲು ಕಳೆದುಕೊಳ್ಳುವ ಭೀತಿಯಲ್ಲಿ ಅನ್ನದಾತರಿದ್ದಾರೆ.

ಮೇಣಸಿನಕಾಯಿಗೆ ರೋಗ ತಗುಲದಿರಲು ನಿರ್ವಾಹಣೆ ಹೀಗಿರಲಿ

ಬಿತ್ತಿದ 8 ರಿಂದ 12 ದಿನದೊಳಗೆ ಸಸಿ ಕಾಂಡ ಕೊಳೆ ರೋಗ ಕಂಡು ಬಂದರೆ 2 ಗ್ರಾಂ ರಿಡೋಮಿಲ್ ಎಂ ಝಢ್. ಅಥವಾ 2 ಗ್ರಾಂ ಥೈರಾಮ್ ಅಥವಾ 2 ಗ್ರಾಂ ಕ್ಯಾಪ್ಟಾನನ್ನು ಪ್ರತಿ ಲೀಟರ್ ನೀರಿಗೆ ಬೆರೆಸಿ ಶಿಲೀಂದ್ರನಾಶಕ ದ್ರಾವಣವನ್ನು ಸಸಿ ಮಡಿಗಳಲ್ಲಿ ಹಾಕಬೇಕು. ಮೆಣಸಿನ ಸಸಿಗಳ ನಾಟಿಗೆ ಐದ ದಿನ ಮುಂಚೆ ಸಸಿ ಮಡಿಗಳಲ್ಲಿಯೇ ಚಿವುಟಿ ಹಾರೆ ನಂತರ ನಾಟಿ ಮಾಡುವುದರಿಂದ ಮುಟುರುರೋಗದ ಬಾದೆ ಕಡಿಮೆಯಾಗುವುದು ಮತ್ತು ಹೆಚ್ಚಿನ ಇಳುವರಿ ಪಡೆಯಬಹುದು. ಪ್ರತಿ ಅರ್ಧ ಎಕರೆ ಸುತ್ತಲೂ 3 ರಿಂದ 4 ಸಾಲು ಜೋಳ ಅಥವಾ ಗೋವಿನ ಜೋಳ 15 ರಿಂದ 20 ದಿನಗಳ ಮುಂಚೆ ಬಿತ್ತನೆ ಮಾಡಬೇಕು.ಬೆಳೆ ಪರಿವರ್ತನೆಯನ್ನು ಕೈಗೊಳ್ಳಬೇಕು, ಮೆಣಸಿನಕಾಯಿ, ಬದನೆ, ಆಲೂಗಡ್ಡೆ ಹಾಗೂ ಟೊಮ್ಯಾಟೊ ಬೆಳೆಗಳನ್ನು ಬಿಟ್ಟು ಇತರೆ ಬೆಳೆಗಳ ಕಾಲುಗೈ ಅನುಸರಿಸುವುದರಿಂದ ಸೊರಗು ರೋಗ ಹಾಗೂ ಬಾಡುರೋಗವನ್ನು ಹತೋಟಿಯಲ್ಲಿಡಬಹುದು.