ರಾಯಚೂರು: ಅಡುಗೆ ಮಾಡದೆ ಹಾಸ್ಟೆಲ್ ಸಿಬ್ಬಂದಿ ನಾಪ್ಪತ್ತೆ, ಊಟ ರೆಡಿ ಮಾಡಿ ಬಡಿಸಿದ ಪೊಲೀಸ್ ಇನ್​ಸ್ಪೆಕ್ಟರ್

ರಾಯಚೂರು, ನ.23: ವಾರ್ಡನ್, ಅಡುಗೆ ಸಿಬ್ಬಂದಿ ನಿರ್ಲಕ್ಷಕ್ಕೆ ಹಾಸ್ಟೆಲ್ ಹುಡುಗರು ಊಟ ಇಲ್ಲದೆ ಪರದಾಟ ನಡೆಸಿದ ಘಟನೆ ರಾಯಚೂರು ಜಿಲ್ಲೆಯ ಲಿಂಗಸುಗೂರು ತಾಲ್ಲೂಕಿನ ಹಟ್ಟಿ ಪಟ್ಟಣದಲ್ಲಿ ನಿನ್ನೆ ತಡರಾತ್ರಿ ನಡೆದಿದೆ. ಸಂಜೆಯಿಂದ ತಡರಾತ್ರಿ ವರೆಗೂ ಅಡುಗೆ ಮಾಡದೇ ಸಿಬ್ಬಂದಿ ಹಾಸ್ಟೆಲ್ ಬಿಟ್ಟಿದ್ದಾರೆ. ಹೊಟ್ಟೆ ಹಸಿದು ವಾರ್ಡನ್​ಗೆ ಕರೆ ಮಾಡಿದರೆ ಸೂಕ್ತ ಪ್ರತಿಕ್ರಿಯೆ ನೀಡಿಲ್ಲ ಎಂದು ಆರೋಪಿಸಲಾಗಿದೆ.

ಹಟ್ಟಿ ಪಟ್ಟಣದಲ್ಲಿರೊ ಡಾ.ಬಿಆರ್ ಅಂಬೇಡ್ಕರ್ ಮೆಟ್ರಿಕ್ ನಂತರದ ಹಾಸ್ಟೆಲ್​​ನಲ್ಲಿ ತಡ ರಾತ್ರಿವರೆಗೂ ಅಡುಗೆ ಮಾಡದೇ ವಾರ್ಡನ್ ಪ್ರಕಾಶ್ ಹಾಗೂ ಅಡುಗೆ ಸಿಬ್ಬಂದಿ ನಾಪತ್ತೆಯಾಗಿದ್ದರು. ಹೊಟ್ಟೆ ಹಸಿವು ತಾಳಲಾಗದೆ ವಿದ್ಯಾರ್ಥಿಗಳು ವಾರ್ಡನ್ ಪ್ರಕಾಶ್ ಅವರಿಗೆ ದೂರವಾಣಿ ಮೂಲಕ ಕರೆ ಮಾಡಿದರೆ ಅವರ ಕೂಡ ಸೂಕ್ತ ಪ್ರತಿಕ್ರಿಯೆ ನೀಡಿಲ್ಲ ಎಂಬ ಆರೋಪ ಕೇಳಿಬಂದಿದೆ.

ಕೊನೆಗೆ ಹಟ್ಟಿ ಪೊಲೀಸರಿಗೆ ವಿದ್ಯಾರ್ಥಿಗಳು ದೂರು ನೀಡಿದ್ದಾರೆ. ಆಗಲೂ ಪೊಲೀಸರಿಗೆ ಸಿಬ್ಬಂದಿ ಸಮರ್ಪಕ ಉತ್ತರ ನೀಡಿಲ್ಲ. ಕೊನೆಗೆ ಸ್ಥಳಕ್ಕೆ ಆಗಮಿಸಿದ ಪೊಲೀಸ್ ಇನ್​ಸ್ಪೆಕ್ಟರ್ ಹೊಸ್ಕೇರಪ್ಪ ಅವರು, ತಾವೇ ಅಡುಗೆ ಮಾಡಿ ವಿದ್ಯಾರ್ಥಿಗಳಿಗೆ ಊಟ ಬಡಿಸಿದ್ದಾರೆ. ಪೊಲೀಸರ ಮಾನವೀಯತೆಗೆ ವಿದ್ಯಾರ್ಥಿಗಳು ಅಭಿನಂದನೆ ಸಲ್ಲಿಸಿದ್ದು, ನಿರ್ಲಕ್ಷ್ಯ ತೋರಿದ ವಾರ್ಡನ್ ಹಾಗೂ ಅಡುಗೆ ಸಿಬ್ಬಂದಿ ವಿರುದ್ಧ ಸೂಕ್ತ ಕ್ರಮಕ್ಕೆ ಆಗ್ರಹಿಸಿದ್ದಾರೆ.