ಮಂಡ್ಯ, ಡಿ.13: ಮೊಬೈಲ್ ರಿಚಾರ್ಜ್ ವಿಚಾರಕ್ಕೆ ಗಲಾಟೆಯಾಗಿ ಕೊಲೆಯಲ್ಲಿ ಅಂತ್ಯವಾದ ಘಟನೆ ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ದೇಶವಳ್ಳಿ ಗ್ರಾಮದಲ್ಲಿ ನಡೆದಿದೆ. ರಾಡ್ನಿಂದ ಹೊಡೆದು ಪತ್ನಿ ಮಧುಶ್ರೀ(32) ಅವರನ್ನು ಪತಿ ಮಹದೇವ್(38) ಕೊಲೆ ಮಾಡಿದ್ದಾರೆ. ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಇನ್ನು ಮೃತ ಮಧುಶ್ರೀ ಖಾಸಗಿ ಶಾಲೆಯಲ್ಲಿ ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದರೆ, ಇತ್ತ ಆರೋಪಿ ಮಹದೇವ್ ಚಾಲಕನಾಗಿ ಕೆಲಸ ಮಾಡುತ್ತಿದ್ದ. ಪತ್ನಿ ಮೇಲೆ ಅನುಮಾನ ಪಡುತ್ತಿದ್ದ ಇತ, ಇದೇ ವಿಚಾರಕ್ಕೆ ದಂಪತಿ ನಡುವೆ ಆಗಾಗ ಗಲಾಟೆ ಆಗುತ್ತಿತ್ತು.
ಪತಿಯ ಅನುಮಾನದ ಭೂತಕ್ಕೆ ತವರು ಸೇರಿದ್ದ ಪತ್ನಿ ಮಧುಶ್ರೀ
ಪತಿಯ ಅನುಮಾನದ ಹಿನ್ನಲೆ ಪತ್ನಿ ಮಧುಶ್ರೀ ತವರು ಮನೆ ಸೇರಿದ್ದಳು. ಬಳಿಕ ರಾಜಿ ಪಂಚಾಯಿತಿ ಮಾಡಿ 2 ತಿಂಗಳ ಹಿಂದೆ ಪತಿ ಮನೆಗೆ ಬಂದಿದ್ದಳು. ನಿನ್ನೆ(ಡಿ.12) ಮೊಬೈಲ್ ರಿಚಾರ್ಜ್ ವಿಚಾರಕ್ಕೆ ದಂಪತಿ ನಡುವೆ ಗಲಾಟೆ ಶುರುವಾಗಿದೆ. ಈ ವೇಳೆ ಜಗಳ ತಾರಕಕ್ಕೇರಿದ್ದು, ಕೋಪಗೊಂಡ ಪತಿ, ರಾಡ್ನಿಂದ ಹೊಡೆದು ಪತ್ನಿಯನ್ನು ಹತ್ಯೆ ಮಾಡಿದ್ದಾನೆ. ಘಟನೆ ಬಳಿಕ ಮಗು ಜೊತೆ ಪೊಲೀಸರ ಮುಂದೆ ಶರಣಾಗಿ, ತನ್ನ ತಪ್ಪನ್ನು ಒಪ್ಪಿಕೊಂಡಿದ್ದಾನೆ. ಈ ಕುರಿತು ಕಿರುಗಾವಲು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.