ಕಾರವಾರ: ಪ್ರವೀಣ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಾಥಮಿಕ ಕುರುಹು ಸಿಕ್ಕಿದ ಬಳಿಕ ಸಾಕಷ್ಟು ಆರೋಪಿಗಳ ಬಂಧನವಾಗಿದ್ದು ಮಿಕ್ಕ ಎಲ್ಲ ಆರೋಪಿಗಳನ್ನು ಶೀಘ್ರದಲ್ಲಿ ಬಂಧಿಸಲಾಗುವುದು ಎಂದು ಉತ್ತರ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವರೂ ಆದ ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದ್ದಾರೆ.
ಕಾರವಾರದಲ್ಲಿ ಶುಕ್ರವಾರ ಮಾತನಾಡಿ ತನಿಖೆಯನ್ನು ದಿಕ್ಕು ತಪ್ಪಿಸುವ, ಒಬ್ಬ ಆರೋಪಿಯ ಬದಲು ಇನ್ನೊಬ್ಬ ಆರೋಪಿಯನ್ನು ಬಂಧಿಸುವ ತಂತ್ರಗಾರಿಕೆ ನಡೆಯಬಹುದು. ಆದರೆ ಗೃಹ ಇಲಾಖೆ ಮತ್ತು ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳದಲ್ಲೇ ಮೊಕ್ಕಾಂ ಹೂಡಿ ಇಂತಹ ದುರಂತಗಳಿಗೆ ಕಡಿವಾಣ ಹಾಕುವ ತೀರ್ಮಾನ ಮಾಡಿದ್ದಾರೆ. ಎಂಥಹ ಕಠಿಣ ಪರಿಸ್ಥಿತಿ ಇದ್ದರೂ ಆರೋಪಿಗಳನ್ನು ಬಂಧಿಸಲಾಗುತ್ತದೆ ಎಂದು ಹೇಳಿದರು.
ಹರ್ಷ ಹತ್ಯೆ ಪ್ರಕರಣದಲ್ಲಿ ಎಲ್ಲ ಆರೋಪಿಗಳನ್ನು ಬಂಧಿಸಲಾಗಿದೆ. ಈಗ ಪ್ರವೀಣ ಹತ್ಯೆ ಪ್ರಕರಣದ ಎಲ್ಲ ಆರೋಪಿಗಳನ್ನೂ ಬಂಧಿಸುವ ಕೆಲಸ ಆಗುತ್ತಿದೆ. ಜೊತೆಗೆ ಈ ಪ್ರಕರಣಕ್ಕೆ ಪೂರಕವಾಗಿ ಅಕ್ಕ ಪಕ್ಕದಲ್ಲಿ ನಡೆದಿರುವ ಇತರ ಕೊಲೆ ಪ್ರಕರಣಗಳಲ್ಲಿಯೂ ಯಾವ ವರ್ಗವನ್ನೂ ಗಮನಿಸದೆ ನಿರ್ದಾಕ್ಷಿಣ್ಯವಾಗಿ ಎಲ್ಲ ಆರೋಪಿಗಳನ್ನು ಬಂಧಿಸಲಾಗುತ್ತದೆ ಎಂದು ಸಿಎಂ ಹೇಳಿದ್ದು ಅದರಂತೆ ನಡೆದುಕೊಳ್ಳಲಾಗುತ್ತಿದೆ.
ಕಾಂಗ್ರೆಸ್ ನವರು ನಮ್ಮನ್ನು ದೂರುವುದಕ್ಕಾಗಿಯೇ ಇದ್ದಾರೆ. 23 ಕೊಲೆಗಳಾದಾಗ ನೀವೇನು ಮಾಡುತ್ತಿದ್ದಿರಿ? ಎಂದು ಸಿದ್ದರಾಮಯ್ಯನವರನ್ನು ಪ್ರಶ್ನಿಸುತ್ತೇನೆ. ಅವರ ಅವಧಿಯಲ್ಲಿ ಆರೋಪಗಳಿರುವ ಹಲವರನ್ನು ಬಿಡುಗಡೆ ಮಾಡಲಾಗಿದೆ. ಅಂಥವರಿಂದ ನಡೆದ ಘಟನೆಗಳೇ ಈಗ ಮುಂದುವರಿದಿವೆ ಎಂದು ಆರೋಪಿಸಿದರು.
ಗುಪ್ತಚರ ಮಾಹಿತಿಯನ್ನು ಯಾವ ರೀತಿ ತೆಗೆದುಕೊಳ್ಳಬೇಕೋ ಆ ರೀತಿ ತೆಗೆದುಕೊಳ್ಳಲಾಗಿದೆ. ಗುಪ್ತಚರ ಮಾಹಿತಿ ಎಲ್ಲವನ್ನೂ ಬಹಿರಂಗಗೊಳಿಸುವ ಅಗತ್ಯ ಇಲ್ಲ. ಜಿಲ್ಲಾಡಳಿತ ಈ ಬಗ್ಗೆ ಮಾಹಿತಿ ಪಡೆದು ಅಗತ್ಯ ಇರುವುದನ್ನು ಮಾತ್ರ ರಾಜ್ಯಕ್ಕೆ ರವಾನಿಸುತ್ತದೆ. ಸಾಮಾನ್ಯವಾಗಿ ನಡೆಯುವ ಹಲ್ಲೆ ಪ್ರಕರಣಗಳಿಗೂ ಕಡಿವಾಣ ಹಾಕಲಾಗುತ್ತದೆ ಮತ್ತು ಗುಪ್ತಚರ ಇಲಾಖೆಯನ್ನು ಮತ್ತಷ್ಟು ಬಲಪಡಿಸಲಾಗುತ್ತದೆ ಎಂದರು.