ನವದೆಹಲಿ, ಡಿಸೆಂಬರ್ 3: ಐದು ರಾಜ್ಯಗಳಿಗೆ ನಡೆದ ವಿಧಾನಸಭೆ ಚುನಾವಣೆಯ ಪೈಕಿ ನಾಲ್ಕು ರಾಜ್ಯಗಳ ಫಲಿತಾಂಶ ಭಾನುವಾರ ಬಹುತೇಕ ಪ್ರಕಟವಾಗಿದ್ದು, ಮೂರು ರಾಜ್ಯಗಳಲ್ಲಿ ಬಿಜೆಪಿ ಭರ್ಜರಿ ಗೆಲುವಿನತ್ತ ಮುಂದಡಿಯಿಟ್ಟಿದೆ. ರಾಜಸ್ಥಾನ, ಮಧ್ಯಪ್ರದೇಶ ಹಾಗೂ ಛತ್ತೀಸ್ಗಢಗಳಲ್ಲಿ ಬಿಜೆಪಿ ಗೆಲುವಿನತ್ತ ಸಾಗಿದ್ದರೆ, ತೆಲಂಗಾಣದಲ್ಲಿ ಮಾತ್ರ ಕಾಂಗ್ರೆಸ್ ಬಹುಮತದತ್ತ ಸಾಗಿದೆ. ರಾಜಸ್ಥಾನ ಹಾಗೂ ಛತ್ತೀಸ್ಗಢದಲ್ಲಿ ಆಡಳಿತದಲ್ಲಿದ್ದ ಕಾಂಗ್ರೆಸ್ ಅಧಿಕಾರ ಕಳೆದುಕೊಂಡಿದೆ. ಕಾಂಗ್ರೆಸ್ ಪಕ್ಷದ ಈ ಸೋಲಿಗೆ ಸನಾತನ ಧರ್ಮವನ್ನು ವಿರೋಧಿಸಿದ್ದೇ ಕಾರಣ ಎಂದು ಅದೇ ಪಕ್ಷದ ಹಿರಿಯ ನಾಯಕ ಆಚಾರ್ಯ ಪ್ರಮೋದ್ ಕೃಷ್ಣಂ ಅಭಿಪ್ರಾಯಪಟ್ಟಿದ್ದಾರೆ.
ಸನಾತನ ಧರ್ಮವನ್ನು ವಿರೋಧಿಸುವುದನ್ನು ದೇಶದಲ್ಲಿ ಯಾರೂ ಒಪ್ಪಲು ಸಾಧ್ಯವಿಲ್ಲ. ಸನಾತನ ಧರ್ಮವನ್ನು ವಿರೋಧಿಸುತ್ತಲೇ ಬಂದರೆ ಕಾಂಗ್ರೆಸ್ ಸೋಲುತ್ತಲೇ ಹೋಗುತ್ತದೆ. ಸನಾತನ ಧರ್ಮವನ್ನು ಕಾಂಗ್ರೆಸ್ ನಿರಂತರವಾಗಿ ವಿರೋಧಿಸುತ್ತಿದೆ. ಚುನಾವಣಾ ಕಣದಲ್ಲಿ ಜಾತಿ ರಾಜಕಾರಣದ ಮಾಡುವುದನ್ನು ದೇಶದ ಜನತೆ ಸ್ವೀಕರಿಸುವುದಿಲ್ಲ ಎಂದು ಕಾಂಗ್ರೆಸ್ ಮುಖಂಡ ಆಚಾರ್ಯ ಪ್ರಮೋದ್ ಕೃಷ್ಣಂ ಹೇಳಿದ್ದಾರೆ.