ಜೈಪುರ್(ಡಿ.03) ಪಂಚ ರಾಜ್ಯಗಳ ಪೈಕಿ ನಾಲ್ಕು ರಾಜ್ಯಗಳ ಚುನಾವಣಾ ಫಲಿತಾಂಶ ಹೊರಬಿದ್ದಿದೆ. ಬಿಜೆಪಿ ಮೂರು ರಾಜ್ಯಗಳಲ್ಲಿ ಜಯಭೇರಿ ಬಾರಿಸಿದೆ. ಇತ್ತ ಕಾಂಗ್ರೆಸ್ ತೆಲಂಗಾಣದಲ್ಲಿ ಗೆಲುವಿನ ನಗೆ ಬೀರಿದೆ. ರಾಜಸ್ಥಾನದಲ್ಲಿ ಕಾಂಗ್ರೆಸ್ ಅಧಿಕಾರ ಉಳಿಸಿಕೊಳ್ಳುವ ವಿಶ್ವಾಸದಲ್ಲಿತ್ತು. ಜಿದ್ದಾಜಿದ್ದಿನ ಸ್ಪರ್ದೆ ಎರ್ಪಟ್ಟರೂ ಕಾಂಗ್ರೆಸ್ ಗೆಲುವು ದಾಖಲಿಸಲಿದೆ ಅನ್ನೋದು ಕಾಂಗ್ರೆಸ್ ನಾಯಕರ ಮಾತಾಗಿತ್ತು. ಆದರೆ ರಾಜಸ್ಥಾನದಲ್ಲಿ ಕಾಂಗ್ರೆಸ್ ನೆಲಕಚ್ಚಿದೆ. ಈ ಹೀನಾಯ ಸೋಲಿನ ಬೆನ್ನಲ್ಲೇ ಮುಖ್ಯಮಂತ್ರಿ ಸ್ಥಾನಕ್ಕೆ ಅಶೋಕ್ ಗೆಹ್ಲೋಟ್ ರಾಜೀನಾಮೆ ನೀಡಲು ಸಜ್ಜಾಗಿದ್ದಾರೆ. ಇಂದು ಸಂಜೆ 5.30ಕ್ಕೆ ಅಶೋಕ್ ಗೆಹ್ಲೋಟ್ ರಾಜೀನಾಮೆ ಸಲ್ಲಿಸಲಿದ್ದಾರೆ.
ಅಧಿಕಾರದಲ್ಲಿರುವ ಪಕ್ಷ ಚುನಾವಣೆ ಸೋಲು ಅನುಭವಿಸುತ್ತಿದ್ದಂತೆ ಸಿಎಂ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ಹೊಸ ಸರ್ಕಾರ ರಚನೆಗೆ ಅನುವು ಮಾಡಿಕೊಡುತ್ತಾರೆ. ಇದರಂತೆ ಅಶೋಕ್ ಗೆಹ್ಲೋಟ್ ಇಂದು ಸಂಜೆ 5.30ಕ್ಕೆ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲಿದ್ದಾರೆ. ರಾಜಸ್ಥಾನ ರಾಜ್ಯಪಾಲ ಕಾಲ್ರಾಜ್ ಮಿಶ್ರಾ ಭೇಟಿಯಾಗಿ ರಾಜೀನಾಮೆ ಪತ್ರ ಸಲ್ಲಿಸಲಿದ್ದಾರೆ. ಹೊಸ ಸರ್ಕಾರ ರಚನೆ ಆಗುವ ವರೆಗೆ ಅಶೋಕ್ ಗೆಹ್ಲೋಟ್ ಹಂಗಾಮಿ ಮುಖ್ಯಮಂತ್ರಿಯಾಗಿ ಮುಂದುವರಿಯಲಿದ್ದಾರೆ.
ರಾಜಸ್ಥಾನ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ 115 ಸ್ಥಾನ ಗೆಲ್ಲುವ ಮೂಲಕ ಅಭೂತಪೂರ್ವ ಗೆಲುವು ದಾಖಲಿಸಿದೆ. ಕಾಂಗ್ರೆಸ್ 70 ಸ್ಥಾನಕ್ಕೆ ಕುಸಿದಿದೆ. ಇನ್ನು ಬಿಎಸ್‌ಪಿ 2 ಸ್ಥಾನಕ್ಕೆ ಕುಸಿದಿದ್ದರೆ, ಇತರರು 14 ಸ್ಥಾನ ಗೆಲ್ಲುವಲ್ಲಿ ಯಶಸ್ವಿಯಾಗಿದೆ. ರಾಜಸ್ಥಾನ ಚುನಾವಣಾ ಮತಎಣಿಕೆ ಬಹುತೇಕ ಪೂರ್ಣಗೊಂಡಿದೆ. ಶೀಘ್ರದಲ್ಲೇ ಚುನಾವಣಾ ಆಯೋಗ ಅಧಿಕೃತ ಘೋಷಣೆ ಮಾಡಲಿದೆ.
ರಾಜಸ್ಥಾನದಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ನಡುವೆ ಜಿದ್ದಾಜಿದ್ದಿನ ಪೈಪೋಟಿ ಇದೆ. ಆದರೆ ಕಾಂಗ್ರೆಸ್ ಪೂರ್ಣಬಹುಮತದೊಂದಿಗೆ ಸರ್ಕಾರ ರಚಿಸಲಿದೆ ಎಂದಿತ್ತು. ರಾಹುಲ್ ಗಾಂಧಿ ಜಾತಿ ಗಣತಿ ವಿಚಾರ ಮುಂದಿಟ್ಟು ಭಾರಿ ಪ್ರಚಾರ ಮಾಡಿದ್ದರು. ಇಷ್ಟೇ ಅಲ್ಲ ಐಸಿಸಿ ವಿಶ್ವಕಪ್ ಫೈನಲ್ ಪಂದ್ಯದ ಸೋಲಿಗೆ ಮೋದಿ ಉಪಸ್ಥಿತಿ ಕಾರಣ, ಮೋದಿ ಅಪಶಕುನ(ಪನೌತಿ) ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದರು. ಈ ಹೇಳಿಕೆಯನ್ನು ಕಾಂಗ್ರೆಸ್ ನಾಯಕರು ಮತ್ತಷ್ಟು ಪ್ರಚಾರ ಮಾಡಿದ್ದರು. ಆದರೆ ಫಲಿತಾಂಶ ಕಾಂಗ್ರೆಸ್‌ಗೆ ತೀವ್ರ ಮುಖಭಂಗ ತರಿಸಿದೆ.
ಮಧ್ಯಪ್ರದೇಶದಲ್ಲೂ ಬಿಜೆಪಿ ಭರ್ಜರಿ ಗೆಲುವು ದಾಖಲಿಸಿದೆ. ಇನ್ನು ಚತ್ತೀಸಘಡದಲ್ಲಿ ಕಾಂಗ್ರೆಸ್ ಅದಿಕಾರಕ್ಕೇರುವುದು ಬಹುತೇಕ ಖಚಿತ ಅನ್ನೋ ಮಾತುಗಳು ಕೇಳಿಬಂದಿತ್ತು. ಮತಗಟ್ಟೆ ಸಮೀಕ್ಷೆ ಕೂಡ ಇದನ್ನೇ ಹೇಳಿತ್ತು. ಆದರೆ ಫಲಿತಾಂಶ ಹೊರಬೀಳುತ್ತಿದ್ದಂತೆ ಕಾಂಗ್ರೆಸ್‌ಗೆ ಆಘಾತವಾಗಿದೆ. ಅಧಿಕಾರದಲ್ಲಿ ಚತ್ತೀಸಘಡವೂ ಕೈತಪ್ಪಿದೆ.