ಮುಂಡಗೋಡ: ಅಪ್ರಾಪ್ತ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದ 60 ವರ್ಷದ ವೃದ್ಧನಿಗೆ ಕಾರವಾರದ ಜಿಲ್ಲಾ ನ್ಯಾಯಾಲಯವು 20 ವರ್ಷ ಕಾರಾಗೃಹ ಶಿಕ್ಷೆ ಹಾಗೂ 1.20 ಲಕ್ಷ ರೂ. ದಂಡ ವಿಧಿಸಿ ಗುರುವಾರ ತೀರ್ಪು ನೀಡಿದೆ.
ಮುಂಡಗೋಡ ತಾಲೂಕಿನ ಓರಲಗಿ ಗ್ರಾಮದ ಶಿವಾನಂದ ಉಮ್ಮಣ್ಣ ಗೌಳಿ (60) ಶಿಕ್ಷೆಗೊಳಗಾದ ಆರೋಪಿಯಾಗಿದ್ದಾನೆ. ಈತನ ವಿರುದ್ಧ ಮುಂಡಗೋಡ ಓರಲಗಿಯ ಮಹಿಳೆಯೋರ್ವಳು ತನ್ನ ಅಪ್ರಾಪ್ತ ಮಗಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವ ಕುರಿತು ಮುಂಡಗೋಡ ಪೊಲೀಸ್ ಠಾಣೆಯಲ್ಲಿ 2021 ರ ಸೆಪ್ಟೆಂಬರ್ 21 ರಂದು ದೂರು ನೀಡಿದ್ದರು. ಈ ಬಗ್ಗೆ ಮುಂಡಗೋಡ ಪಿಎಸ್‌ಐ ಬಸವರಾಜ ಮಬನೂರು ಪೊಕ್ಸೊ ಪ್ರಕರಣ ದಾಖಲಿಸಿಕೊಂಡಿದ್ದರು. ಪಿಎಸ್‌ಐ ಸಿದ್ದಪ್ಪ ಎಸ್. ಸಿಮಾನಿ ತನಿಖೆ ಕೈಗೊಂಡು ಆರೋಪಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದರು.
ಬಳಿಕ ದೋಷಾರೋಪಣೆ ಪಟ್ಟಿಯನ್ನು ಕಾರವಾರದ ಜಿಲ್ಲಾ ಮತ್ತು ಸೆಶನ್ಸ್ ನ್ಯಾಯಾಲಯಕ್ಕೆ ಸಲ್ಲಿಸಲಾಗಿತ್ತು. ದೀರ್ಘ ವಿಚಾರಣೆಯ ಬಳಿಕ ಗುರುವಾರ ನ್ಯಾಯಾಧೀಶ ಶಿವಾಜಿ ನಲವಾಡೆ ಆರೋಪಿಗೆ 20 ವರ್ಷ ಕಾರಾಗೃಹ ಶಿಕ್ಷೆ ಹಾಗೂ 1.20 ಲಕ್ಷ ರೂ. ದಂಡ ವಿಧಿಸಿ ತೀರ್ಪು ನೀಡಿದ್ದಾರೆ.
ಇನ್ನು ಈ ಆರೋಪಿಯನ್ನು ಬಂಧಿಸಿ ಕಠಿಣ ಶಿಕ್ಷೆಗೆ ಒಳಪಡಿಸಲು ಕಾರಣರಾದ ಎಲ್ಲ ಪೊಲೀಸ್ ಅಧಿಕಾರಿ ಹಾಗೂ ಸಿಬ್ಬಂದಿಗಳಿಗೆ ಎಸ್ಪಿ ಡಾ. ಸುಮನ್ ಪೆನ್ನೇಕರ ಶ್ಲಾಘಿಸಿದ್ದಾರೆ.