ಶಿರಸಿ: ಬೇಡ್ತಿ ಅಘನಾಶಿನಿ ಕೊಳ್ಳ ಸಂರಕ್ಷಣೆಗೆ ಕಂಕಣ ಕಟ್ಟಿರುವ, ‘ಹಸಿರು ಸ್ವಾಮೀಜಿ’ ಎಂದೇ ಹೆಸರಾದ ಸೋಂದಾ ಸ್ವರ್ಣವಲ್ಲೀ ಮಠಾಧೀಶರು ಶಿಷ್ಯರಲ್ಲಿ ಸದ್ದಿಲ್ಲದೆ ಪರಿಸರ ಜಾಗೃತಿ ಮೂಡಿಸುವ ಕಾರ್ಯ ಮಾಡುತ್ತಿದ್ದಾರೆ. ವನಸ್ಪತಿ ಗಿಡಗಳ ಮಹತ್ವ, ಅವುಗಳ ಸಂರಕ್ಷಣೆ ಕುರಿತು ಶಿಷ್ಯರು ಹಾಗೂ ಭಕ್ತರಿಗೆ ಸಂದೇಶ ನೀಡುವ ಜೊತೆಗೆ ಮುತುವರ್ಜಿ ವಹಿಸಲು ಸೂಚಿಸುತ್ತಿದ್ದಾರೆ. ಆ ಮೂಲಕ ತಮಗಿರುವ ಪರಿಸರ ಪ್ರೇಮವನ್ನು ಭಕ್ತರಿಗೂ ಧಾರೆಯೆರೆಯುತ್ತಿದ್ದಾರೆ.
ಕೇವಲ ಪ್ರವಚನಗಳಲ್ಲಿ ಮಾತ್ರ ಪರಿಸರ ಉಳಿಸಿ ಎಂದು ಹೇಳದೇ ಪವಿತ್ರ ಚಾತುರ್ಮಾಸ್ಯದ ಅವಧಿಯಲ್ಲಿ ಶ್ರೀಗಳು ಸ್ವತಃ ಗಿಡಗಳನ್ನು ನೀಡಿ ‘ಸಸ್ಯ ಪ್ರೀತಿ’ ತೋರಿಸುತ್ತಿದ್ದಾರೆ. ಆ ಮೂಲಕ ಪರಿಸರ ಸಂರಕ್ಷಣೆಯ ಯಜ್ಞದ ವಿಸ್ತಾರ ನಡೆಸಿದ್ದಾರೆ.
ಏನಿದು ವೃಕ್ಷ ಮಂತ್ರಾಕ್ಷತೆ.?
ಚಾತುರ್ಮಾಸ್ಯ ಸಂಕಲ್ಪದ ಬಳಿಕ ಶ್ರೀಮಠಕ್ಕೆ ಬರುವ ಶಿಷ್ಯರು ಹಾಗೂ ಸೀಮೆಯ ಭಕ್ತರು ಪಾದಪೂಜೆ, ಕುಂಕುಮಾರ್ಚನೆ ಹಾಗೂ ಇನ್ನಿತರ ಸೇವೆಗಳನ್ನು ಸಲ್ಲಿಸುತ್ತಾರೆ. ಹೀಗೆ ಸೇವೆ ಸಲ್ಲಿಸಿದ ಶಿಷ್ಯರಿಗೆ ಗುರುಗಳು ಪವಿತ್ರ ಸಂದೇಶ ಕೂಡ ನೀಡುತ್ತಾರೆ. ಸಂದೇಶ ಪಡೆದ ಶಿಷ್ಯರಿಗೆ ಶ್ರೀಗಳು ಮಂತ್ರಾಕ್ಷತೆ ನೀಡುವಾಗ ‘ವೃಕ್ಷ ಮಂತ್ರಾಕ್ಷತೆ’ ಕೂಡಾ ನೀಡುತ್ತಾರೆ. ಹೀಗೆ ಶಿಷ್ಯರಿಗೆ ಮಂತ್ರಾಕ್ಷತೆಯ ರೂಪದಲ್ಲಿ ನೀಡಲಾದ ಗಿಡಗಳನ್ನು ಬೆಳೆಸಿ ರಕ್ಷಿಸಲೂ ಶ್ರೀಗಳು ಸೂಚಿಸುತ್ತಾರೆ.
ಸ್ವರ್ಣವಲ್ಲೀ ಪೀಠವೇ ‘ಪರಿಸರ ಸಂರಕ್ಷಣಾ ಪೀಠ’. ಹಿಂದಿನ ಯತಿಗಳಾದ ಶ್ರೀ ಸರ್ವಜ್ಞೇಂದ್ರ ಸರಸ್ವತೀ ಶ್ರೀಗಳೂ ಕೂಡಾ ಪರಿಸರ ಕಾಳಜಿ ಹೊಂದಿದ್ದರು. 32 ವರ್ಷಗಳ ಹಿಂದೆ ಪೀಠಾರೋಹಣರಾದ ಈಗಿನ ಶ್ರೀ ಗಂಗಾಧರೇಂದ್ರ ಸರಸ್ವತೀ ಶ್ರೀಗಳಿಗೆ ‘ಹಸಿರು’ ಎಂದರೆ ತುಂಬಾ ಕಾಳಜಿ. ಪರಿಸರ ರಕ್ಷಣೆಯ ಅನೇಕ ಹೋರಾಟಗಳಿಗೂ ಶ್ರೀಗಳು ನೇತೃತ್ವ ವಹಿಸಿದ್ದಾರೆ. ಇಲ್ಲಿ ವೃಕ್ಷಾರೋಪಣ, ಸಸ್ಯ ಲೋಕ ಸೃಷ್ಟಿಯ ಜೊತೆಗೆ 2006 ರಿಂದ ಶ್ರೀಗಳು ವೃಕ್ಷ ಮಂತ್ರಾಕ್ಷತೆಯನ್ನೂ ನೀಡುತ್ತಿದ್ದಾರೆ. ಪ್ರತೀ ವರ್ಷ ಚಾತುರ್ಮಾಸ್ಯದಲ್ಲಿ ಶಿಷ್ಯರಿಗೆ ವನಸ್ಪತಿ ಸಸ್ಯಗಳನ್ನು ನೀಡಿ ಹರಸುತ್ತಿದ್ದಾರೆ.
75 ಸಹಸ್ರಕ್ಕೂ ಹೆಚ್ಚು ಸಸ್ಯಗಳ ವಿತರಣೆ.!
ಸ್ವರ್ಣವಲ್ಲೀ ಶ್ರೀಗಳ ಚಾತುರ್ಮಾಸ್ಯ, ಹಾಗೂ ಪೀಠಾರೋಹಣದ 25, 30 ವರ್ಷದ ಸಂದರ್ಭದಲ್ಲೂ ವೃಕ್ಷಾರೋಪಣವನ್ನು ಅಭಿಯಾನದ ಮಾದರಿಯಲ್ಲಿ ನಡೆಸಲಾಗಿತ್ತು. ಪ್ರತೀ ವರ್ಷದ ಚಾತುರ್ಮಾಸ್ಯದಲ್ಲೂ ಕನಿಷ್ಠ 5 ಸಾವಿರ ವನಸ್ಪತಿ ಗಿಡಗಳನ್ನು ನೀಡಲಾಗುತ್ತದೆ. ಬಸವನಪಾದ, ಅಶೋಕ, ಹಲಸು, ಮಾವು, ರಕ್ತ ಚಂದನ ಸೇರಿದಂತೆ ಒಳ್ಳೊಳ್ಳೆ ಜಾತಿಯ ಸಸಿಗಳನ್ನು ಮಠದ ಸಸ್ಯಲೋಕದಲ್ಲಿ ಬೆಳಸಿ, ಕಡಿಮೆ ಬಿದ್ದರೆ ಅರಣ್ಯ ಇಲಾಖೆಯಿಂದಲೂ ಪಡೆದು ಮಂತ್ರಾಕ್ಷತೆಯಾಗಿ ನೀಡಲಾಗುತ್ತಿದೆ ಎನ್ನುತ್ತಾರೆ ಸಸ್ಯ ಲೋಕದ ಉಸ್ತುವಾರಿ ಹೊತ್ತ ಮಹಾಬಲೇಶ್ವರ ಗುಮ್ಮಾನಿ.
ಶಿಷ್ಯರಲ್ಲಿ ವನಸ್ಪತಿ ಸಸ್ಯಗಳ ಕುರಿತು ಜಾಗೃತಿ ಮೂಡಿಸಲು ಈ ವೃಕ್ಷ ಮಂತ್ರಾಕ್ಷತೆ ಆರಂಭಿಸಿದ್ದು, ಕೊಟ್ಟ ಸಸಿಯನ್ನು ಶಿಷ್ಯರು ಪ್ರತೀ ವರ್ಷ ನೆಟ್ಟು ಬೆಳೆಸುತ್ತಿದ್ದಾರೆ. ಅದೇ ನಮಗೆ ಖುಷಿ.
ಶ್ರೀ ಗಂಗಾಧರೇಂದ್ರ ಸರಸ್ವತಿ ಸ್ವಾಮೀಜಿ
ಪೀಠವು ಶಿಷ್ಯರಲ್ಲಿ ಇಂತಹ ವೃಕ್ಷ ಮಂತ್ರಾಕ್ಷತೆ ಅಭಿಯಾನ ಮೂಲಕ ಪರಿಸರ ಜಾಗೃತಿ ಉಂಟು ಮಾಡುತ್ತಿರುವುದು ಶ್ರೀಗಳ ಪರಿಸರ ಕಾಳಜಿಯ ಬಿಂಬವೂ ಹೌದು.
ನಾರಾಯಣ ಹೆಗಡೆ ಗಡೀಕೈ