ಯಲ್ಲಾಪುರ: ಪಟ್ಟಣದ ಬಸ್ ನಿಲ್ದಾಣದಲ್ಲಿ ಒಂದು ತಿಂಗಳ ಒಳಗಾಗಿ ಪುಸ್ತಕ ಮಳಿಗೆಯ ವ್ಯವಸ್ಥೆ ಮಾಡುವದಾಗಿ
ವಾ.ಕ.ರ.ಸಾ. ಸಂಸ್ಥೆಯ ಹಿರಿಯ ಅಧಿಕಾರಿಗಳು ಭರವಸೆ ನೀಡಿದ್ದಾರೆ. ಈ ಕುರಿತು ಮಾತೃಭೂಮಿ ಸೇವಾ ಪ್ರತಿಷ್ಠಾನದ ಅಧ್ಯಕ್ಷ ಶ್ರೀರಂಗ ಕಟ್ಟಿಯವರನ್ನು ಭೇಟಿ ಮಾಡಿದ ಯಲ್ಲಾಪುರ ರಸ್ತೆ ಸಾರಿಗೆ ಘಟಕ ವ್ಯವಸ್ಥಾಪಕ ಸಂತೋಷ ವೆರ್ಣೇಕರ ಮತ್ತು ಸಿಬ್ಬಂದಿಗಳು ಪುಸ್ತಕ ಮಳಿಗೆ ಸ್ಥಾಪನೆಗೆ ಆಗ್ರಹಿಸಿ ಪ್ರತಿಭಟನೆಯನ್ನು ಕೈಬಿಡುವಂತೆ ವಿನಂತಿಸಿದರು.
ಶಿರಸಿ ವಿಭಾಗದ ನಿಯಂತ್ರಣಾಧಿಕಾರಿಗಳು ಸಂಸ್ಥೆಯ ಮುಖ್ಯ ಸಂಚಾರ ವ್ಯವಸ್ಥಾಪಕರಿಗೆ ಪತ್ರ ಬರೆದಿದ್ದು ಪುಸ್ತಕ ಮಳಿಗೆಗೆ ಮಾಸಿಕ ಕನಿಷ್ಠ ಶುಲ್ಕ ನಿಗದಿ ಪಡಿಸಿ ಇ ಟೆಂಡರ್ ಕರೆಯುವಂತೆ ತಿಳಿಸಿದ್ದಾರೆ. ಸಾರಿಗೆ ಸಂಸ್ಥೆಯ ಹಿರಿಯ ಅಧಿಕಾರಿಗಳ ಸಕಾರಾತ್ಮಕ ಸ್ಪಂದನೆಗೆ ಧನ್ಯವಾದ ಅರ್ಪಿಸಿರುವ ಮಾತೃಭೂಮಿ ಸೇವಾ ಪ್ರತಿಷ್ಠಾನದ ಅಧ್ಯಕ್ಷ ಶ್ರೀರಂಗ ಕಟ್ಟಿ, ಪ.ಪಂ.ಸದಸ್ಯ ಸೋಮು ನಾಯ್ಕ, ಸಾಮಾಜಿಕ ಕಾರ್ಯಕರ್ತರಾದ ಮಂಜುನಾಥ ಹಿರೇಮಠ, ಶಂಸುದ್ದೀನ ಮಾರ್ಕರ್, ನಿಗದಿತ ಪ್ರತಿಭಟನೆಯನ್ನು ತಾತ್ಕಾಲಿಕವಾಗಿ ಮುಂದೂಡಲಾಗಿದೆ ಎಂದು ತಿಳಿಸಿದ್ದಾರೆ. ಅಲ್ಲದೇ ಅಧಿಕಾರಿಗಳು ತಮ್ಮ ಮಾತಿಗೆ ತಪ್ಪಿದಲ್ಲಿ ಉಗ್ರ ಪ್ರತಿಭಟನೆ ಎದುರಿಸಬೇಕಾದೀತು ಎಂದೂ ಅವರು ಎಚ್ಚರಿಸಿದ್ದಾರೆ.
ಪುಸ್ತಕ ಮಳಿಗೆಗೆ ಆಗ್ರಹಿಸಿ ಮಾತೃಭೂಮಿ ಸೇವಾ ಪ್ರತಿಷ್ಠಾನ, ಜರ್ನಲಿಸ್ಟ್ ಯೂನಿಯನ್, ಕಾರ್ಯನಿರತ ಪತ್ರಕರ್ತರ ಸಂಘವು ಜಂಟಿಯಾಗಿ ಪ್ರತಿಭಟನೆಗೆ ಕರೆ ಕೊಟ್ಟತ್ತು.