ಕಲೆಗೆ ಯವುದೇ ಚೌಕಟ್ಟಿಲ್ಲ. ಕಲಾವಿದನ ಸೃಜನಶೀಲತೆ ಮತ್ತು ಕೈಚಳಕದಿಂದ ಹೊಸ ಹೊಸ ಬಗೆಯ ಕಲೆಗಳು ಹುಟ್ಟಿಕೊಳ್ಳಲು ಸಾಧ್ಯ. ಕಲೆಗಾರನಿಗೆ ಯಾವುದೇ ಕಲೆ ಕೂಡ ಅಸಾಧ್ಯವಾದುದಲ್ಲ. ಛಲವಿದ್ದ ಕೈಗಳಲ್ಲಿ ಕಸವು ರಸವಾಗುತ್ತೆ ಅನ್ನೋ ಮಾತು ಅಕ್ಷರಶಃ ಸತ್ಯ ಎನ್ನುವುದಕ್ಕೆ ಉತ್ತಮ ನಿದರ್ಶನವೇ ಧರ್ಮಸ್ಥಳ ಮೂಲದ ಪ್ರವೀಣ್.
ಹೌದು.! ಸಾಮಾನ್ಯವಾಗಿ ಕಾರ್ಯಕ್ರಮ ಉದ್ಘಾಟನೆಗೆ ಬಳಸುವ ದೀಪಗಳನ್ನು ಹೂವಿನಿಂದ ಸಿಂಗರಿಸುತ್ತಾರೆ. ಆದರೆ, ಪ್ರವೀಣ್ ತೆಂಗಿನ ಗರಿಯಿಂದ ತಮ್ಮ ಕೈಚಳಕ ಮೂಡಿಸಿ ವಿವಿಧ ರೀತಿಯ ಅಲಂಕಾರ ಮಾಡುವ ಮೂಲಕ ಎಲ್ಲರ ಗಮನ ಸೆಳೆಯುತ್ತಿದ್ದಾರೆ.
ಅಲಂಕಾರಿಕ ವಸ್ತುಗಳಿಗೆ ಭಾರೀ ಬೇಡಿಕೆ.!
ವೃತ್ತಿಯಲ್ಲಿ ಮೇಸ್ತಿçಯಾಗಿರುವ ಪ್ರವೀಣ್ ತೆಂಗಿನ ಗರಿಯಿಂದ ವಿವಿಧ ರೀತಿಯ ಅಲಂಕಾರಿಕ ವಸ್ತುಗಳನ್ನು ತಯಾರಿಸುತ್ತಾರೆ. ಅದರಲ್ಲೂ ಪ್ರಮುಖವಾಗಿ ಹಳೆಯ ದೀಪಗಳಿಗೆ ಮಾಡುವ ಅಲಂಕಾರಕ್ಕೆ ಇದೀಗ ತುಂಬಾ ಬೇಡಿಕೆ ಇದೆ.
ತೆಂಗಿನ ಗರಿಯ ಗಣೇಶ ಆಕೃತಿಗೆ ಮೆಚ್ಚುಗೆ.!
ಕಳೆದ 6 ವರ್ಷಗಳಿಂದ ಇದನ್ನೇ ವೃತ್ತಿಯಾಗಿಸಿಕೊಂಡು ನಿಸರ್ಗದತ್ತವಾಗಿ ಸಿಗುವ ತೆಂಗಿನ ಗರಿ, ಬಾಳೆ ದಿಂಡನ್ನು ಬಳಸಿ ಮದುವೆ-ಮುಂಜಿ, ಭಜನೆ, ಪೂಜಾ ಕಾರ್ಯಕ್ರಮ ಹಾಗೂ ವಿವಿಧ ಸಂಘ ಸಂಸ್ಥೆಗಳ ಕಾರ್ಯಕ್ರಮಗಳಿಗೆ ಅಲಂಕಾರ ಮಾಡುತ್ತಾರೆ. ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದ ಉತ್ಸವವೊಂದರಲ್ಲಿ ತೆಂಗಿನ ಗರಿಯಿಂದ ಇವರು ತಯಾರಿಸಿದ ಗಣೇಶನ ಆಕೃತಿಗೆ ಬಾರೀ ಮೆಚ್ಚುಗೆ ದೊರೆತಿದೆ. ಇವರು ತೆಂಗಿನ ಗರಿಯಲ್ಲಿ ಮಾಡುವ ವಿನ್ಯಾಸಗಳನ್ನು ಗಮನಿಸಿ ದಕ್ಷಿಣ ಕನ್ನಡ ಅಷ್ಟೇ ಅಲ್ಲದೆ ಬೆಂಗಳೂರು ಮೈಸೂರಿಗರೂ ಇವರನ್ನು ಹುಡುಕಿಕೊಂಡು ಬರುತ್ತಾರೆ.
ನನಗೆ ಟೈಲರಿಂಗ್, ಮೇಸ್ತ್ರಿ ಕೆಲಸಗಳು ತಿಳಿದಿರುವುದರಿಂದ ಹೊಸ ಬಗೆಯ ವಿನ್ಯಾಸ ತಯಾರಿಸುವುದು ಸುಲಭವಾಗುತ್ತದೆ. ಬಟ್ಟೆಗಳಲ್ಲಿ, ಚಿತ್ರಗಳಲ್ಲಿ ನೋಡಿದ ಡಿಸೈನ್ಗಳನ್ನು ಆಧಾರವಾಗಿಟ್ಟುಕೊಂಡು ನನ್ನದೇ ರೀತಿಯಲ್ಲಿ ಅಲಂಕಾರ ಮಾಡುತ್ತೇನೆ ಮೊದಲು ಊರಿನಲ್ಲಿ ಮಾತ್ರ ಕೆಲಸ ಮಾಡುತ್ತಿದ್ದೆ ಈಗ ಬೇರೆ ಬೇರೆ ಊರಿನವರು ಕರೆಸಿಕೊಳ್ಳುತ್ತಾರೆ.
– ಪ್ರವೀಣ್, ಕಲಾವಿದ