ಸ್ಟೋಕ್ಸ್ ಬಳಿಕ ಸಿಎಸ್​ಕೆ ತಂಡದಿಂದ ಮತ್ತೊಬ್ಬ ವಿದೇಶಿ ಪ್ಲೇಯರ್ ಔಟ್..!

ಇಂಡಿಯನ್ ಪ್ರೀಮಿಯರ್ ಲೀಗ್ 17 ನೇ ಆವೃತ್ತಿಯ ಆಟಗಾರರ ಮಿನಿ ಹರಾಜು ಡಿಸೆಂಬರ್ 19 ರಂದು ನಡೆಯಲಿದೆ. ಅದಕ್ಕೂ ಮೊದಲು, ಎಲ್ಲಾ 10 ಫ್ರಾಂಚೈಸಿಗಳು ತಮ್ಮ ಉಳಿಸಿಕೊಂಡಿರುವ ಆಟಗಾರರ ಪಟ್ಟಿಯನ್ನು ನವೆಂಬರ್ 26 ರಂದು ಸಂಜೆ 4 ಗಂಟೆಯೊಳಗೆ ಸಲ್ಲಿಸಬೇಕು. ಸದ್ಯಕ್ಕೆ ಕೇಳಿಬಂದಿರುವ ಮಾಹಿತಿ ಪ್ರಕಾರ ಹಲವು ಫ್ರಾಂಚೈಸಿಗಳು ತಮ್ಮ ತಂಡದ ಸ್ಟಾರ್ ಆಟಗಾರರನ್ನೇ ತಂಡದಿಂದ ಕೈಬಿಡಲು ಮುಂದಾಗಿವೆ. ಇದರೊಂದಿಗೆ ಕೆಲವು ಆಟಗಾರರನ್ನು ಫ್ರಾಂಚೈಸಿಗಳು ಪ್ಲೇಯರ್ಸ್ ಟ್ರೇಡಿಂಗ್ ವಿಂಡೋ ನಿಯಮದ ಮೂಲಕ ಈಗಾಗಲೇ ತಮ್ಮ ತಂಡಕ್ಕೆ ಸೇರಿಸಿಕೊಂಡಿವೆ. ಇದೀಗ ಹೊರಬಿದ್ದಿರುವ ಖಚಿತ ಮಾಹಿತಿ ಪ್ರಕಾರ ಐಪಿಎಲ್ 16ನೇ ಆವೃತ್ತಿಯ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ತಂಡ, ದಕ್ಷಿಣ ಆಫ್ರಿಕಾದ ಆಲ್ ರೌಂಡರ್ ಡ್ವೇನ್ ಪ್ರಿಟೋರಿಯಸ್ ಅವರನ್ನು ತಂಡದಿಂದ ಕೈಬಿಡಲು ಮಾಡಲು ನಿರ್ಧರಿಸಿದೆ.

ಮಾಹಿತಿ ತಿಳಿಸಿದ ಪ್ರಿಟೋರಿಯಸ್

ಐಪಿಎಲ್‌ನ 16ನೇ ಸೀಸನ್‌ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಪರ ಡ್ವೇನ್ ಪ್ರಿಟೋರಿಯಸ್ ಕೇವಲ ಒಂದೇ ಒಂದು ಪಂದ್ಯವನ್ನು ಆಡಿದ್ದರು. ಸಿಕ್ಕ ಅವಕಾಶವನ್ನು ಬಳಸಿಕೊಳ್ಳುವಲ್ಲಿ ಪ್ರಿಟೋರಿಯಸ್ ಎಡವಿದ್ದರು. ಇದೀಗ ತಂಡದಿಂದ ಹೊರಬಿದ್ದಿರುವ ಬಗ್ಗೆ ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿರುವ ಪ್ರಿಟೋರಿಯಸ್, ಈ ಅವಧಿಯಲ್ಲಿ ತಮ್ಮನ್ನು ಪ್ರೋತ್ಸಾಹಿಸಿದ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಆಡಳಿತ, ಕೋಚ್, ಆಟಗಾರರು ಮತ್ತು ಅಭಿಮಾನಿಗಳಿಗೆ ಧನ್ಯವಾದ ತಿಳಿಸಿದ್ದಾರೆ.

2022 ರಲ್ಲಿ ನಡೆದ ಹರಾಜಿನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಈ ಆಟಗಾರನನ್ನು 50 ಲಕ್ಷಕ್ಕೆ ಖರೀದಿಸಿತ್ತು. ಚೆನ್ನೈ ತಂಡವನ್ನು ಸೇರಿಕೊಂಡ ಬಳಿಕ ಪ್ರಿಟೋರಿಯಸ್​ಗೆ ಕೇವಲ 7 ಐಪಿಎಲ್ ಪಂದ್ಯಗಳಲ್ಲಿ ಆಡುವ ಅವಕಾಶ ಸಿಕ್ಕಿತ್ತು. ಅದರಲ್ಲಿ ಅವರು ಬೌಲಿಂಗ್‌ನಲ್ಲಿ ಕೇವಲ 6 ವಿಕೆಟ್‌ಗಳನ್ನು ಪಡೆದರೆ, ಬ್ಯಾಟಿಂಗ್‌ನಲ್ಲಿ 11 ರ ಸರಾಸರಿಯಲ್ಲಿ ಕೇವಲ 44 ರನ್ ಬಾರಿಸುವಲ್ಲಿ ಯಶಸ್ವಿಯಾಗಿದ್ದರು.

ಐಪಿಎಲ್​ನಿಂದ ಹಿಂದೆ ಸರಿದ ಬೆನ್ ಸ್ಟೋಕ್ಸ್

ಮುಂದಿನ ಆವೃತ್ತಿಯ ಆಟಗಾರರ ಹರಾಜಿಗೂ ಮೊದಲು ಬೆನ್ ಸ್ಟೋಕ್ಸ್ ಅವರು ಐಪಿಎಲ್​ನಿಂದ ಹಿಂದೆ ಸರಿಯುವುದಾಗಿ ಈಗಾಗಲೇ ಹೇಳಿಕೆ ನೀಡಿದ್ದಾರೆ. ಹೀಗಾಗಿ ಸ್ಟೋಕ್ಸ್ ಅವರನ್ನು ಸಹ ಚೆನ್ನೈ ಬಿಡುಗಡೆ ಮಾಡುವ ಸಾಧ್ಯತೆಗಳಿವೆ. ಏಕೆಂದರೆ ಬೆನ್ ಸ್ಟೋಕ್ಸ್ ಅವರನ್ನು ತಂಡದಿಂದ ಕೈಬಿಟ್ಟರೆ ಸಿಎಸ್​ಕೆ ಖಾತೆಗೆ ಬರೋಬ್ಬರಿ 16.25 ಕೋಟಿ ರೂ ಸೇರಲಿದೆ. ಈ ಮೊತ್ತ ಹರಾಜಿನಲ್ಲಿ ತಮ್ಮ ತಂಡಕ್ಕೆ ಅವಶ್ಯಕ ಆಟಗಾರನನ್ನು ಖರೀದಿಸಲು ನೆರವಾಗಲಿದೆ.