ಕಲಬುರಗಿ: 11 ತಿಂಗಳು ಶಾಲೆಗೆ ಗೈರಾಗಿದ್ದರೂ ಶಿಕ್ಷಕನಿಗೆ ವೇತನ ಬಿಡುಗಡೆ: ಮೂವರಿಗೆ ಕಡ್ಡಾಯ ನಿವೃತ್ತಿ

ಕಲಬುರಗಿ, ನವೆಂಬರ್​ 26: 11 ತಿಂಗಳು ಶಾಲೆಗೆ ಗೈರಾಗಿದ್ದರೂ ಶಿಕ್ಷಕನಿಗೆ ವೇತನ ಬಿಡುಗಡೆ ಮಾಡಿರುವ ಬಿಇಒ ಹಾಗೂ ಇಬ್ಬರು ಎಫ್‌ಡಿಎಗಳನ್ನು ಕಡ್ಡಾಯ ನಿವೃತ್ತಿಗೊಳಿಸಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯಿಂದ ಆದೇಶ ಹೊರಡಿಸಲಾಗಿದೆ. ಬಿಇಒ ಆಗಿದ್ದ ಚಿತ್ರಶೇಖರ ದೇಗುಲಮಡಿ, ಎಫ್​ಡಿಎಗಳಾದ ಲೋಕಪ್ಪ ಜಾಧವ್, ಗುರುರಾಜರಾವ್ ಕುಲಕರ್ಣಿಯನ್ನ ಕಡ್ಡಾಯ ನಿವೃತ್ತಿಗೊಳಿಸಿ ಆದೇಶಿಸಲಾಗಿದೆ.

2011ರ ಅಕ್ಟೋಬರ್‌ನಿಂದ 2012ರ ಆಗಸ್ಟ್‌ವರೆಗೂ ಶಾಲೆಗೆ ಗೈರಾಗಿದ್ದರು. ಶಾಲೆಗೆ ಸತತ ಗೈರಾಗಿದ್ದ ಶಿಕ್ಷಕ ರೇಣುಕಾಚಾರ್ಯಗೆ ವೇತನ ನೀಡಲಾಗಿತ್ತು. ಶಿಕ್ಷಕ ರೇಣುಕಾಚಾರ್ಯ ಬಸವಕಲ್ಯಾಣ ಬಿಜೆಪಿ ಶಾಸಕ ಶರಣು ಸಲಗರ್ ಸಹೋದರಾಗಿದ್ದು, ಜಿಲ್ಲೆಯ ಆಳಂದ ತಾಲೂಕಿನ ಅಂಬಲಗಾ ಪ್ರಾಥಮಿಕ ಶಾಲೆ ಶಿಕ್ಷಕ. ಇಲಾಖಾ ತನಿಖೆಯಲ್ಲಿ ಆರೋಪ ಸಾಬೀತಾದ ಹಿನ್ನೆಲೆ ಮೂವರ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ.