ಐಪಿಎಲ್ 2024 ಹರಾಜಿಗೆ ದಿನಗಣನೆ ಆರಂಭವಾಗಿದೆ. ಈ ಬಾರಿಯ ಐಪಿಎಲ್ನ ಮಿನಿ ಹರಾಜು ಮುಂದಿನ ತಿಂಗಳು ಅಂದರೆ ಡಿಸೆಂಬರ್ 19 ರಂದು ದುಬೈನಲ್ಲಿ ನಡೆಸಲು ತೀರ್ಮಾನಿಸಲಾಗಿದೆ. ಇದಕ್ಕೂ ಮೊದಲು, ಎಲ್ಲಾ ಫ್ರಾಂಚೈಸಿಗಳು ನವೆಂಬರ್ 26 ರೊಳಗೆ ಉಳಿಸಿಕೊಂಡಿರುವ ಮತ್ತು ಬಿಡುಗಡೆಯಾದ ಆಟಗಾರರ ಪಟ್ಟಿಯನ್ನು ಸಲ್ಲಿಸಬೇಕಾಗಿದೆ. ಇದೆಲ್ಲದರ ನಡುವೆ ರಾಜಸ್ಥಾನ ರಾಯಲ್ಸ್ ಪಾಳಯದಿಂದ ದೊಡ್ಡ ಸುದ್ದಿಯೊಂದು ಹೊರಬಿದ್ದಿದ್ದು, ತಂಡದ ಸ್ಟಾರ್ ಬ್ಯಾಟರ್ ಜೋ ರೂಟ್ ಈ ಲೀಗ್‌ನಿಂದ ತಮ್ಮ ಹೆಸರನ್ನು ಹಿಂಪಡೆದಿದ್ದಾರೆ
3 ಪಂದ್ಯಗಳನ್ನಾಡಿದ್ದ ರೂಟ್
ಐಪಿಎಲ್ 2024ರ ಧಾರಣ ಅವಧಿಗೂ ಮುನ್ನವೇ ಈ ಸುದ್ದಿ ಬಂದಿದ್ದು, ಇದು ರಾಜಸ್ಥಾನ ರಾಯಲ್ಸ್ ತಂಡದಲ್ಲಿ ಭಾರೀ ಸಂಚಲನ ಮೂಡಿಸಲಿದೆ. 2023 ರ ಕಿರು-ಹರಾಜಿನಲ್ಲಿ ರಾಯಲ್ಸ್, ಜೋ ರೂಟ್ ಅವರನ್ನು ಖರೀದಿಸಿತ್ತು. ಇದರೊಂದಿಗೆ ರೂಟ್ ಮೊದಲ ಬಾರಿಗೆ ಐಪಿಎಲ್ ಆಡುವ ಅವಕಾಶ ಪಡೆದಿದ್ದರು. ಅದರಂತೆ ಕಳೆದ ಆವೃತ್ತಿಯಲ್ಲಿ ರಾಯಲ್ಸ್ ಪರ 3 ಪಂದ್ಯಗಳನ್ನಾಡಿದ್ದ ರೂಟ್, ವಿಶೇಷ ಪ್ರದರ್ಶನ ನೀಡುವಲ್ಲಿ ವಿಫಲರಾಗಿದ್ದರು. ಆ ಬಳಿಕ ಅವರನ್ನು ತಂಡದಿಂದ ಕೈಬಿಡಲಾಗಿತ್ತು.
ಮಾಹಿತಿ ನೀಡಿದ ಸಂಗಕ್ಕಾರ
ರಾಯಲ್ಸ್ ತಂಡದ ನಿರ್ದೇಶಕ ಕುಮಾರ್ ಸಂಗಕ್ಕಾರ ಮಾತನಾಡಿ, ನಮ್ಮ ಧಾರಣ ಮಾತುಕತೆಯ ಸಮಯದಲ್ಲಿ ಜೋ ರೂಟ್ ಅವರು ಐಪಿಎಲ್ 2024 ರಲ್ಲಿ ಭಾಗವಹಿಸದಿರುವ ನಿರ್ಧಾರದ ಬಗ್ಗೆ ನಮಗೆ ತಿಳಿಸಿದ್ದಾರೆ. ಜೋ ರೂಟ್ ಅವರು ಅತ್ಯಂತ ಕಡಿಮೆ ಅವಧಿಯಲ್ಲಿ ತಂಡದ ಮೇಲೆ ಅಂತಹ ಸಕಾರಾತ್ಮಕ ಪರಿಣಾಮ ಬೀರಲು ಸಮರ್ಥರಾಗಿದ್ದರು. ಫ್ರಾಂಚೈಸ್ ಮತ್ತು ತಂಡ ಅವರ ಅನುಭವವನ್ನು ಕಳೆದುಕೊಳ್ಳುತ್ತಿದೆ. ನಾವು ಅವರ ನಿರ್ಧಾರವನ್ನು ಸಂಪೂರ್ಣವಾಗಿ ಗೌರವಿಸುತ್ತೇವೆ ಎಂದಿದ್ದಾರೆ.
ಅವೇಶ್ ಖಾನ್ ತಂಡಕ್ಕೆ ಎಂಟ್ರಿ
ಐಪಿಎಲ್ ಹರಾಜಿಗೂ ಮೊದಲು, ರಾಜಸ್ಥಾನ್ ರಾಯಲ್ಸ್ ಮತ್ತು ಲಕ್ನೋ ಸೂಪರ್ ಜೈಂಟ್ಸ್ ನಡುವೆ ಆಟಗಾರರ ಟ್ರೆಡಿಂಗ್ ಕೂಡ ನಡೆದಿದ್ದು, ರಾಜಸ್ಥಾನ್ ರಾಯಲ್ಸ್ ಬ್ಯಾಟ್ಸ್‌ಮನ್ ದೇವದತ್ ಪಡಿಕ್ಕಲ್ ಮತ್ತು ಲಕ್ನೋ ಸೂಪರ್ ಜೈಂಟ್ಸ್ ಬೌಲರ್ ಅವೇಶ್ ಖಾನ್ ಅವರನ್ನು ಟ್ರೆಡಿಂಗ್ ಮಾಡಿಕೊಳ್ಳಲಾಗಿದೆ. ಹೀಗಾಗಿ ಅವೇಶ್ ಖಾನ್ ಈಗ ರಾಜಸ್ಥಾನ್ ರಾಯಲ್ಸ್ ಪರ ಆಡಲಿದ್ದಾರೆ.