ಹೊನ್ನಾವರದ ಮೂಡಗಣಪತಿ ಸಭಾಭವನದಲ್ಲಿ ನೀನಾಸಂನಿಂದ ಎರಡು ದಿನಗಳ ಕಾಲ ನಾಟಕ ಪ್ರದರ್ಶನ


ಹೊನ್ನಾವರದ ಮೂಡಗಣಪತಿ ಸಭಾಭವನದಲ್ಲಿ ಮಾತೃಛಾಯಾ ಟ್ರಸ್ಟ್ ವತಿಯಿಂದ ಎರಡು ದಿನಗಳ ಕಾಲ ನೀನಾಸಂನಿಂದ ನಾಟಕ ಪ್ರದರ್ಶನವನ್ನು ಹಮ್ಮಿಕೊಂಡಿದ್ದು, ಸೇಫ್ ಸ್ಟಾರ್ ಸಂಸ್ಥೆಯ ಅಧ್ಯಕ್ಷ ಜಿ.ಜಿ ಶಂಕರ್ ಚಾಲನೆ ನೀಡಿದ್ರು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಜಿ.ಜಿ.ಶಂಕರ್‌, ನಿನಾಸಂ ಸಂಸ್ಥೆ ಇಂದು ಹೆಮ್ಮರವಾಗಿ ಬೆಳೆದಿದೆ.ಇದು ಕೇವಲ ನಾಟಕವಲ್ಲ,ಇದು ಒಂದು ಬದ್ದತೆಯಾಗಿದೆ.ಇಂತಹ ಸಂಸ್ಥೆ ಹೆಚ್ಚು ಬೆಳೆಯಬೇಕು,ಎಲ್ಲರೂ ಪ್ರೋತ್ಸಾಹಿಸಬೇಕು ಎಂದು ಹೇಳಿದ್ರು.

ಬಳಿಕ ರಂಗಭೂಮಿ ನಟ ಕಿರಣ್ ನಾಯ್ಕ ಅವರನ್ನು ಸನ್ಮಾನಿಸಲಾಯ್ತು. ಸನ್ಮಾನ ಸ್ವೀಕರಿಸಿದ ಕಿರಣ್ ನಾಯ್ಕ ಮಾತನಾಡಿ, ನಾನು ರಂಗಭೂಮಿಗೆ ಪ್ರವೇಶಿಸಲು ನಿನಾಸಂ ಸಂಸ್ಥೆ ಸ್ಪೂರ್ತಿ ಎಂದು ಹೇಳಿದ್ರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ತಾಲೂಕಾಸ್ಪತ್ರೆಯ ಆಡಳಿತಾಧಿಕಾರಿ ಡಾ.ರಾಜೇಶ್ ಕಿಣಿ, ನಾಟಕಗಳನ್ನು ಕೇವಲ ವೀಕ್ಷಿಸುವುದು ಮಾತ್ರವಲ್ಲ,ಅದರಲ್ಲಿರುವ ಸಂದೇಶಗಳನ್ನು ನಾವು ಅರ್ಥೈಸಿಕೊಳ್ಳಬೇಕು.ಅನೇಕ ಕಲಾವಿದರನ್ನು ಪರಿಚಯಿಸಿದ ನಿನಾಸಂನಂತಹ ನಾಟಕ ತಂಡಗಳಿಗೆ ನಮ್ಮೆಲ್ಲರ ಪ್ರೋತ್ಸಾಹವಿದೆ ಎಂದು ಹೇಳಿದ್ರು.

ಮಾತೃಛಾಯಾ ಟ್ರಸ್ಟ್ ಅಧ್ಯಕ್ಷ ಅಶೋಕ ಕಾಸರಕೋಡ ಪ್ರಾಸ್ತಾವಿಕ ಮಾತನಾಡಿ,ನಮ್ಮ ಸಂಸ್ಥೆಯು ಕಳೆದ 13 ವರ್ಷಗಳಿಂದ ಶೈಕ್ಷಣಿಕ, ಸಾಮಾಜಿಕ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿರುವ ಸಮಾಜಮುಖಿ ಸಂಸ್ಥೆಯಾಗಿದೆ. ರಂಗಭೂಮಿಗೆ ಉತ್ತೇಜನ ನೀಡುವ ದೃಷ್ಟಿಯಿಂದ ನಾವು ನಾಟಗಳನ್ನು ಕೂಡ ಆಯೋಜಿಸುತ್ತಾ ಬಂದಿದ್ದೇವೆ. ಕಳೆದ ಹಲವಾರು ವರ್ಷಗಳಿಂದ ನೀನಾಸಂ ತಿರುಗಾಟ ನಾಟಕಗಳನ್ನು ತಮ್ಮ ಸಂಸ್ಥೆಯು ಯಶಸ್ವಿಯಾಗಿ ಹಮ್ಮಿಕೊಳ್ಳುತ್ತಾ ಬಂದಿದೆ ಎಂದು ವಿವರಿಸಿದ್ರು.

ವೇದಿಕೆಯಲ್ಲಿ ವಿಕೆರ್ ಬ್ಯಾಂಕ್ ಅಧ್ಯಕ್ಷ ಸ್ಟೇಫನ್ ರೊಡ್ರಗಿಸ್,ಅಖಿಲಭಾರತ ಕೊಂಕಣಖಾರ್ವಿ ಮಹಾಜನ ಸಂಘದ ಹಿರಿಯ ಉಪಾಧ್ಯಕ್ಷ ಸೂರ್ಯಕಾಂತ ಸಾರಂಗ,ರೋಟರಿ ಕ್ಲಬ್ ಅಧ್ಯಕ್ಷ ದೀಪಕ್ ಲೋಫಿಸ್ ಉಪಸ್ಥಿತರಿದ್ದರು. ನಂತರ ಹುಲಿಯ ನೆರಳು ನಾಟಕಗಳ ಪ್ರದರ್ಶನ ನಡೆದು ಜನಮನ ರಂಜಿಸಿತು.