ಬ್ಯಾಟಿಂಗ್‌, ಬೌಲಿಂಗ್ ಎರಡು ವಿಭಾಗದಲ್ಲೂ ಭಾರತೀಯರದ್ದೇ ಪಾರುಪತ್ಯ..!

ಏಕದಿನ ವಿಶ್ವಕಪ್ ಫೈನಲ್​ನಲ್ಲಿ ಟೀಂ ಇಂಡಿಯಾ ಸೋತಿರಬಹುದು. ಆದರೆ ಐಸಿಸಿ ಏಕದಿನ ಶ್ರೇಯಾಂಕದಲ್ಲಿ ಟೀಂ ಇಂಡಿಯಾ ಆಟಗಾರರು ಭರ್ಜರಿ ಗೆಲುವು ಸಾಧಿಸಿದ್ದಾರೆ. ಐಸಿಸಿ ಬಿಡುಗಡೆ ಮಾಡಿರುವ ನೂತನ ಏಕದಿನ ಶ್ರೇಯಾಂಕದಲ್ಲಿ ಭಾರತದ ಆಟಗಾರರು ಪಾರುಪತ್ಯ ಸಾಧಿಸಿದ್ದಾರೆ. ವಿಶ್ವಕಪ್‌ನ ಎರಡು ಸೆಮಿಫೈನಲ್ ಮತ್ತು ಫೈನಲ್‌ ನಂತರ ಬಂದಿರುವ ಹೊಸ ಐಸಿಸಿ ಏಕದಿನ ಬ್ಯಾಟಿಂಗ್ ರ್ಯಾಂಕಿಂಗ್​ನಲ್ಲಿ ಟೀಂ ಇಂಡಿಯಾದ ಯುವ ಓಪನರ್ ಶುಭ್​ಮನ್​ ಗಿಲ್ ಅಗ್ರಸ್ಥಾನದಲ್ಲಿ ಮುಂದುವರೆದಿದ್ದರೆ, ಪಾಕಿಸ್ತಾನದ ಮಾಜಿ ನಾಯಕ ಬಾಬರ್ ಆಝಂ 2ನೇ ಸ್ಥಾನವನ್ನು ಕಾಯ್ದುಕೊಂಡಿದ್ದಾರೆ. ಹಾಗೆಯೇ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಅದ್ಭುತ ಪ್ರದರ್ಶನ ನೀಡುವ ಮೂಲಕ ಭರ್ಜರಿ ಮುಂಬಡ್ತಿ ಪಡೆದಿದ್ದಾರೆ.

ಐಸಿಸಿ ಇಂದು ಬಿಡುಗಡೆ ಮಾಡಿರುವ ನೂತನ ಏಕದಿನ ಶ್ರೇಯಾಂಕದಲ್ಲಿ ಭಾರತ ತಂಡದ ಆರಂಭಿಕ ಬ್ಯಾಟ್ಸ್‌ಮನ್ ಶುಭ್‌ಮನ್ ಗಿಲ್ 826 ರೇಟಿಂಗ್‌ನೊಂದಿಗೆ ನಂಬರ್ ಒನ್ ಸ್ಥಾನವನ್ನು ಅಲಂಕರಿಸಿದ್ದಾರೆ. 824 ರೇಟಿಂಗ್ ಪಡೆದಿರುವ ಪಾಕಿಸ್ತಾನದ ಮಾಜಿ ನಾಯಕ ಬಾಬರ್ ಆಝಂ ಎಂದಿನಂತೆ ಎರಡನೇ ಸ್ಥಾನವನ್ನು ತಮ್ಮಲ್ಲೇ ಉಳಿಸಿಕೊಂಡಿದ್ದಾರೆ.

ಕೊಹ್ಲಿ- ರೋಹಿತ್​ಗೆ ಮುಂಬಡ್ತಿ

ಏತನ್ಮಧ್ಯೆ, ಕಳೆದ ಬಾರಿಯ ಶ್ರೇಯಾಂಕ ಪಟ್ಟಿಯಲ್ಲಿ 4ನೇ ಸ್ಥಾನಕ್ಕೆ ಜಾರಿದ್ದ ವಿರಾಟ್ ಕೊಹ್ಲಿ, ತಮ್ಮ ಸ್ಫೋಟಕ ಪ್ರದರ್ಶನದೊಂದಿಗೆ 791 ರೇಟಿಂಗ್ ಪಡೆದು ಇದೀಗ ಮೂರನೇ ಸ್ಥಾನಕ್ಕೆ ಮುಂಬಡ್ತಿ ಪಡೆದಿದ್ದಾರೆ. ಹಾಗೆಯೇ ಈ ಹಿಂದೆ ಐದನೇ ಸ್ಥಾನದಲ್ಲಿದ್ದ ರೋಹಿತ್ ಶರ್ಮಾ 769 ರೇಟಿಂಗ್​ನೊಂದಿಗೆ ನಾಲ್ಕನೇ ಸ್ಥಾನಕ್ಕೇರಿದ್ದಾರೆ. ಅಂದರೆ ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ತಲಾ ಒಂದು ಸ್ಥಾನ ಜಿಗಿತ ಕಂಡಿದ್ದಾರೆ.

ಟಾಪ್ 10 ಬ್ಯಾಟರ್​ಗಳ ಶ್ರೇಯಾಂಕ ಹೀಗಿದೆ

ಟಾಪ್ ನಾಲ್ವರನ್ನು ಹೊರತಪಡಿಸಿ 760 ರೇಟಿಂಗ್ ಪಡೆದಿರುವ ದಕ್ಷಿಣ ಆಫ್ರಿಕಾದ ಬ್ಯಾಟ್ಸ್‌ಮನ್ ಕ್ವಿಂಟನ್ ಡಿ ಕಾಕ್ ನೇರವಾಗಿ ಐದನೇ ಸ್ಥಾನಕ್ಕೆ ಕುಸಿದಿದ್ದಾರೆ. ನ್ಯೂಜಿಲೆಂಡ್‌ನ ಡೇರಿಲ್ ಮಿಚೆಲ್ 750 ರೇಟಿಂಗ್‌ನೊಂದಿಗೆ ಆರನೇ ಸ್ಥಾನದಲ್ಲಿದ್ದರೆ, ಆಸ್ಟ್ರೇಲಿಯಾದ ಡೇವಿಡ್ ವಾರ್ನರ್ 745 ರ ರೇಟಿಂಗ್‌ನೊಂದಿಗೆ ಏಳನೇ ಸ್ಥಾನಕ್ಕೆ ಬಂದಿದ್ದಾರೆ. ದಕ್ಷಿಣ ಆಫ್ರಿಕಾದ ರಾಸ್ಸಿ ವ್ಯಾನ್ ಡೆರ್ ಡುಸ್ಸೆನ್ 735 ರೇಟಿಂಗ್‌ನೊಂದಿಗೆ ಎಂಟನೇ ಸ್ಥಾನದಲ್ಲಿದ್ದರೆ, ಐರ್ಲೆಂಡ್‌ನ ಹ್ಯಾರಿ ಟೆಕ್ಟರ್ 729 ರೇಟಿಂಗ್‌ನೊಂದಿಗೆ ಒಂಬತ್ತನೇ ಸ್ಥಾನವನ್ನು ಪಡೆದುಕೊಂಡಿದ್ದಾರೆ. ಅಗ್ರ 4ರಲ್ಲಿ ಮೂವರು ಭಾರತೀಯ ಆಟಗಾರರನ್ನು ಹೊರತುಪಡಿಸಿ, ಭಾರತದ ಶ್ರೇಯಸ್ ಅಯ್ಯರ್ 12 ನೇ ಸ್ಥಾನದಲ್ಲಿದ್ದಾರೆ.

ಅಗ್ರ 10ರಲ್ಲಿ ನಾಲ್ವರು ಭಾರತೀಯ ಬೌಲರ್‌ಗಳು

ಇನ್ನು ಬೌಲರ್‌ಗಳ ಶ್ರೇಯಾಂಕದಲ್ಲೂ ಭಾರತೀಯ ಬೌಲರ್​ಗಳು ಪರಾಕ್ರಮ ಮೆರೆದಿದ್ದಾರೆ. ಆದರೆ ಈ ಹಿಂದೆ ನಂಬರ್ 1 ಸ್ಥಾನದಲ್ಲಿದ್ದ ಮೊಹಮ್ಮದ್ ಸಿರಾಜ್ ಮೂರನೇ ಸ್ಥಾನಕ್ಕೆ ಕುಸಿದಿದ್ದಾರೆ. ಅವರನ್ನು ಹೊರತುಪಡಿಸಿ, ಜಸ್ಪ್ರೀತ್ ಬುಮ್ರಾ ನಾಲ್ಕನೇ ಸ್ಥಾನದಲ್ಲಿದ್ದರೆ, ಮೊಹಮ್ಮದ್ ಶಮಿ ಮತ್ತು ಕುಲ್ದೀಪ್ ಯಾದವ್  ಕ್ರಮವಾಗಿ 10 ಮತ್ತು 6ನೇ ಸ್ಥಾನ ಪಡೆದುಕೊಂಡಿದ್ದಾರೆ. ಉಳಿದಂತೆ ದಕ್ಷಿಣ ಆಫ್ರಿಕಾದ ಕೇಶವ್ ಮಹಾರಾಜ್ 741 ರೇಟಿಂಗ್ ಪಾಯಿಂಟ್‌ಗಳೊಂದಿಗೆ ಅಗ್ರಸ್ಥಾನದಲ್ಲಿದ್ದು, ಜೋಶ್ ಹ್ಯಾಜಲ್‌ವುಡ್ 703 ಅಂಕಗಳೊಂದಿಗೆ 2ನೇ ಸ್ಥಾನಕ್ಕೆ ಏರಿದ್ದಾರೆ.