ಹೊನ್ನಾವರದ ಪ್ರಭಾತನಗರದ ಶ್ರೀ ಮೂಡಗಣಪತಿ ಸಭಾಭವನದಲ್ಲಿ ‘ನೀನಾಸಂ ತಿರುಗಾಟ ನಾಟಕ”-2023

ಹೊನ್ನಾವರ: ಪಟ್ಟಣದ ಪ್ರಭಾತನಗರದಲ್ಲಿರುವ ಶ್ರೀ ಮೂಡಗಣಪತಿ ಸಭಾಭವನದಲ್ಲಿ ‘ನೀನಾಸಂ ತಿರುಗಾಟ ನಾಟಕ”-2023 ಎಂಬ ಎರಡು ದಿನಗಳ ನಾಟಕೋತ್ಸವ ನಡೆಯಲಿದೆ ಎಂದು ಮಾತೃಛಾಯಾ ಟ್ರಸ್ಟ್ ಅಧ್ಯಕ್ಷ ಅಶೋಕ ಕಾಸರಕೋಡ ತಿಳಿಸಿದ್ದಾರೆ.

ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿ,ನಮ್ಮ ಸಂಸ್ಥೆಯು ಕಳೆದ 13 ವರ್ಷಗಳಿಂದ ಶೈಕ್ಷಣಿಕ, ಸಾಮಾಜಿಕ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿರುವ ಸಮಾಜಮುಖಿ ಸಂಸ್ಥೆಯಾಗಿದೆ. ರಂಗಭೂಮಿಗೆ ಉತ್ತೇಜನ ನೀಡುವ ದೃಷ್ಟಿಯಿಂದ ನಾವು ನಾಟಗಳನ್ನು ಕೂಡ ಆಯೋಜಿಸುತ್ತಾ ಬಂದಿದ್ದೇವೆ. ಕಳೆದ ಹಲವಾರು ವರ್ಷಗಳಿಂದ “ನೀನಾಸಂ ತಿರುಗಾಟ ನಾಟಕ” ಗಳನ್ನು ತಮ್ಮ ಸಂಸ್ಥೆಯು ಯಶಸ್ವಿಯಾಗಿ ಹಮ್ಮಿಕೊಳ್ಳುತ್ತಾ ಬಂದಿದ್ದು ಈ ಬಾರಿ ನ.22, 23 ರಂದು ಎರಡು ದಿನಗಳ ಕಾಲ ರಾತ್ರಿ 8 ಗಂಟೆಯಿಂದ “ನೀನಾಸಂ ತಿರುಗಾಟ ನಾಟಕ-2023 ಹಮ್ಮಿಕೊಂಡಿದ್ದೇವೆ ಎಂದಿದ್ದಾರೆ.

ನ.22 ರಂದು “ಹುಲಿಯ ನೆರಳು” (ರಚನೆ: ಲೇಖಕ ನಾಟಕಕಾರರಾದ ಚಂದ್ರಶೇಖರ ಕಂಬಾರ, ನಿರ್ದೇಶನ: ಕೆ.ಜಿ. ಕೃಷ್ಣಮೂರ್ತಿರವರ) ಹಾಗೂ ನ.23ರಂದು ಆ ಲಯ ಈ ಲಯ” (ರಚನೆ: ಲೂಯಿ ನಕೋಸಿ, ಕನ್ನಡಕ್ಕೆ: ನಟರಾಜ ಹೊನ್ನವಳ್ಳಿ, ನಿರ್ದೇಶನ: ಶ್ವೇತಾರಾಣಿ ಎಚ್ .ಕೆ.) ಎಂಬ ಎರಡು ನಾಟಕಗಳ ಪ್ರದರ್ಶನ ನಡೆಯಲಿದೆ.
ಸಾಗರ ತಾಲೂಕಿನ ಹೆಗ್ಗೋಡಿನಲ್ಲಿರುವ “ನೀನಾಸಂ ನಾಟಕ” (ನೀಲಕಂಠೇಶ್ವರ ನಾಟ್ಯ ಸಂಘ ಹೆಗ್ಗೂಡು) ತರಬೇತಿ ಸಂಸ್ಥೆಯು ದೇಶದಲ್ಲಿಯೇ ಹೆಸರುವಾಸಿಯಾಗಿರುವ ರಂಗಭೂಮಿ ಸಂಸ್ಥೆಯಾಗಿದ್ದು, ಈ ಸಂಸ್ಥೆಯಲ್ಲಿ ತರಬೇತಿ ಪಡೆದ ಹಲವಾರು ಕಲಾವಿದರು ಸಿನಿಮಾ, ರಂಗಭೂಮಿಯ ಪ್ರಸಿದ್ಧ ನಟರಾಗಿ ಗುರುತಿಸಿಕೊಂಡಿದ್ದಾರೆ.
ಈ ಸಂಸ್ಥೆ ಪ್ರತಿವರ್ಷ ರಾಜ್ಯಾದ್ಯಂತ ಕಲಾವಿದರನ್ನು ಆಹ್ವಾನಿಸಿ, ತರಬೇತಿ ನೀಡಿ, ಆಯ್ದ ಕಲಾವಿದರಿಂದ ಎರಡು ನಾಟಕಗಳನ್ನು ಸಿದ್ಧಗೊಳಿಸಿ ರಾಜ್ಯದ ಕೆಲವೇ ಕಡೆಗಳಲ್ಲಿ ತಮ್ಮ ಪ್ರದರ್ಶನವನ್ನು ನೀಡಲು ತಿರುಗಾಟವನ್ನು ಪ್ರಾರಂಭಿಸುತ್ತಾರೆ. ಇವರು ಪ್ರದರ್ಶಿಸುವ ನಾಟಕಗಳಿಗೆ ರಾಜ್ಯಾದ್ಯಂತ ಬೇಡಿಕೆಯಿದ್ದು, ಹೊನ್ನಾವರದಲ್ಲಿ ಕೂಡ ಇವರ ಅತಿ ದೊಡ್ಡ ಅಭಿಮಾನಿ ಬಳಗವೇ ಸೃಷ್ಟಿ ಆಗಿದೆ.ಸಿನಿಮಾ, ಧಾರವಾಹಿ, ಟಿ.ವಿ ಮಾಧ್ಯಮಗಳ ಎದುರು ಸೃಜನಶೀಲ ಕಲೆಯಾದ ರಂಗಭೂಮಿ ಇಂದು ಸೊರಗುತ್ತಿರುವಂತೆ ಭಾಷವಾಗುತ್ತಿದೆ. ಹಾಗಾಗಿ ರಂಗಭೂಮಿಯನ್ನು ಹಾಗೂ ರಂಗಭೂಮಿ ಕಲಾವಿದರನ್ನು ಉಳಿಸಿ, ಬೆಳೆಸುವ ಹೊಣೆಗಾರಿಕೆಯನ್ನು ನಾವೆಲ್ಲ ಹೊರಬೇಕಾಗಿದೆ. ಈ ನಿಟ್ಟಿನಲ್ಲಿ ನಮ್ಮದೊಂದು ಚಿಕ್ಕ ಪ್ರಯತ್ನವಾಗಿದ್ದು ಉಚಿತವಾಗಿ ನಡೆಯುವ ಈ ಎರಡು ದಿನದ “ನೀನಾಸಂ ತಿರುಗಾಟ ನಾಟಕಗಳನ್ನು ನೋಡಲು ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕಾಗಿ ಅಶೋಕ ಕಾಸರಕೋಡರವರು ವಿನಂತಿಸಿಕೊಂಡಿದ್ದಾರೆ.