ಹೊನ್ನಾವರ: ಪಟ್ಟಣದ ಚರ್ಚರಸ್ತೆ ಬಿಕಾಸಿ ತಾರಿಯಲ್ಲಿ ಅಸಮರ್ಪಕ ರಸ್ತೆ ಹಾಗೂ ವಾಹನದಟ್ಟಣೆಯಿಂದ ಸ್ಥಳಿಯರಿಗೆ ಸಮಸ್ಯೆ ಆಗುತ್ತಿದೆ ಎಂದು ಪಟ್ಟಣ ಪಂಚಾಯತ ಹಾಗೂ ಪೊಲೀಸ್ ಠಾಣೆ, ತಹಶೀಲ್ದಾರರಿಗೆ ಹತ್ತು ಸಮಸ್ತರ ಖಾರ್ವಿ ಸಮಾಜದವರಿಂದ ಮನವಿ ಸಲ್ಲಿಸಿದರು.
ಪ್ರತಿನಿತ್ಯ ಪ್ರವಾಸಿಗರಿಂದ ವಿಪರೀತ ವಾಹನ ದಟ್ಟಣೆ ಆಗುತ್ತಿದ್ದು, ಶರಾವತಿ ನದಿಯ ವೀಕ್ಷಣೆ ಹಾಗೂ ಬೋಟಿಂಗ್ ಮತ್ತು ಫ್ರೀ-ವೆಡ್ಡಿಂಗ್ ಶೂಟಿಂಗ್ ಮಾಡಲು ವಿವಿಧೆಡೆಯಿಂದ ಪ್ರವಾಸಿಗರು ಬರುತ್ತಿದ್ದಾರೆ. ಆದರೆ ಚರ್ಚರಸ್ತೆ ಅತಿ ಕಿರಿದಾಗಿದ್ದು, ಭಾರಿ ವಾಹನಗಳು, ಟೂರಿಸ್ಟ ಬಸ್ಸುಗಳು, ಕಾರುಗಳು, ಟಿ.ಟಿ.ವಾಹನಗಳು ರಸ್ತೆಯಲ್ಲಿ ವಾಹನಗಳ ದಟ್ಟಣೆಯಿಂದ ವಾಹನ ಅಪಘಾತಗಳು ಪದೇ-ಪದೇ ಆಗುತ್ತಿದ್ದು, ಈ ಸ್ಥಳವು ಅಪಘಾತವಲಯಗಳಾಗಿ ನಿರ್ಮಾಣವಾಗುವುದರೊಂದಿಗೆ ವಾಹನ ಚಾಲಕರೊಂದಿಗೆ ಪದೇ- ಪದೇ ಜಗಳಗಳಾಗುತ್ತಿರುವುದರಿಂದ ಇಲ್ಲಿಯ ನಿವಾಸಿಗಳಿಗೆ ತುಂಬಾ ಕಿರಿ-ಕಿರಿಯಾಗಿರುತ್ತದೆ.
ವಿಪರೀತ ವಾಹನಗಳು ತಿರುಗಾಡುವುದರಿಂದ ರಸ್ತೆಗಳೆಲ್ಲಾ ಹೊಂಡಗಳಾಗಿವೆ ಮತ್ತು ರಸ್ತೆಯ ಅಕ್ಕ-ಪಕ್ಕದಲ್ಲಿ ವಾಸದ ಮನೆಗಳಿದ್ದು, ಮನೆಯ ಒಳಗೆಲ್ಲಾ ಧೂಳು ತುಂಬಿ ಹೋಗಿದೆ. ಪ್ರವಾಸಿಗರು ಪ್ಲಾಸ್ಟಿಕ್ ಬಾಟಲಿ ಮತ್ತು ತಿಂಡಿ ತಿನಿಸುಗಳು ತ್ಯಾಜ್ಯ ವಸ್ತುಗಳನ್ನು ಎಲ್ಲೆಂದರಲ್ಲಿ ಎಸೆದು ಹೋಗುತ್ತಿದ್ದಾರೆ. ಇದರಿಂದ ದನ-ಕರುಗಳು ಮತ್ತು ನಾಯಿಗಳ ಕಾಟ ಹೆಚ್ಚಾಗಿ ಪರಿಸರ ಮಾಲಿನ್ಯ ಉಂಟಾಗಿರುತ್ತದೆ. ಇಲ್ಲಿ ಹೋಮ್‌ಸ್ಟೇ ನಿರ್ಮಿಸಿದ್ದು ಯಾರು ಪರವಾನಿಗೆ ಕೊಟ್ಟಿದ್ದು ಗೊತ್ತಿಲ್ಲಾ.
ಹೊನ್ನಾವರ ಪಟ್ಟಣ ಪಂಚಾಯತಿಯ ಸದಸ್ಯರು ಸಹ ಬೋಟಿಂಗ್ ದಂಧೆಯನ್ನು ಮಾಡುತ್ತಿರುವವರಿಗೆ ಸಹಾಯ ಮಾಡುತ್ತಿರುವುದರಿಂದ ಇಲ್ಲಿಯ ಪರಿಸ್ಥಿತಿ ಬಿಗಡಾಯಿಸಿದ್ದು “ ಬೇಲಿಯೇ ಎದ್ದು ಹೊಲ ಮೇಯ್ದಂತೆ" ಆಗಿರುತ್ತದೆ. ಯಾವುದೇ ಕ್ರಮ ಕೈಗೊಳ್ಳದಿದ್ದಲ್ಲಿ ಅನಿವಾರ್ಯವಾಗಿ ನಾವು ನಮ್ಮ ಸಂಘಟನೆಯೊಂದಿಗೆ ಸಾರ್ವಜನಿರೊಡಗೂಡಿ ಹೋರಾಟದ ಎಚ್ಚರಿಕೆ ನೀಡಿದರು.
ಮೀನುಗಾರ ಮುಖಂಡರಾದ ಉಮೇಶ ಮೇಸ್ತ ಮಾತನಾಡಿ ಇಕ್ಕಟ್ಟಾದ ಜಾಗದಲ್ಲಿ ದೊಡ್ಡ ಬಸ್ ಹೊದರೆ ಬೇರೆ ವಾಹನ ಹೋಗಲು ಹರಸಾಹಸ ಪಡಬೇಕಾಗಿದೆ. ರಸ್ತೆ ಹದಗೆಟ್ಟು ಹೋಗಿ ಸಮಸ್ಯೆ ಆಗಿದೆ. ಮೀನುಗಾರಿಕೆ ನಡೆಸಲು ಆಗುವುದಿಲ್ಲ. ಇದಕ್ಕೆ ಹೊಣಿಗಾರರು ಯಾರು? ಬೋಟಿಂಗ್ ನಡೆಸಲು ಯಾವ ಮಾನದಂಡ ನೀಡಿ ಪರವಾನಗಿ ನೀಡಿದ್ದಾರೊ ಗೊತ್ತಿಲ್ಲ. ಸಮಸ್ಯೆ ಬಗೆಹರಿಯದೇ ಹೊದಲ್ಲಿ ಮೀನುಗಾರರು ಹಾಗೂ ಸಾರ್ವಜನಿಕರ ಜೊತೆಗೂಡಿ ಹೋರಾಟ ಮಾಡಬೇಕಾಗುತ್ತದೆ. ಇಲ್ಲದೆ ಹೊದರೆ ಮೀನುಗಾರರು ಜೊತೆಗೂಡಿ ಶರಾವತಿ ನದಿಗೆ ದುಮುಕಿ ಪ್ರಾಣ ಬಿಡುತ್ತೇವೆ ಎಂದರು.
ಖಾರ್ವಿ ಹತ್ತು ಸಮಾಜದ ಅಧ್ಯಕ್ಷರಾದ ಶ್ರೀಕಾಂತ್ ಮೇಸ್ತ,
ಮಾತನಾಡಿ ರಸ್ತೆ ಮೇಲೆ ಸಂಚರಿಸಲು, ನದಿಯಲ್ಲಿ ಮೀನುಗಾರಿಕೆ ನಡೆಸಲು ಆಗುವುದಿಲ್ಲ. ಈ ಹಿಂದೆ ಮನವಿ ನೀಡಿದರೂ ಯಾವುದೇ ಪ್ರಯೋಜನವಾಗುವುದಿಲ್ಲ. ಬೀದಿಗಿಳಿದು ಹೋರಾಟ ಮಾಡುತ್ತೇವೆ ಎಂದು ಎಚ್ಚರಿಸಿದರು.
ತಹಶೀಲ್ದಾರ ರವಿರಾಜ್ ದಿಕ್ಷೀತ್, ಪಿಎಸೈ ಮಮತಾ ನಾಯ್ಕ ಮನವಿ ಸ್ವೀಕರಿಸಿದರು.
ಈ ಸಂದರ್ಭದಲ್ಲಿ ಕೇಶವ ಮೇಸ್ತ, ಶೇಖರ ಮೇಸ್ತ, ಸತೀಶ ಮೇಸ್ತ, ರೊನಾಲ್ಡ್ ಡಿಸೋಜ, ಬಸ್ತೆಂವ್ ಫರ್ನಾಂಡೀಸ್, ಪ್ರಕಾಶ ಫರ್ನಾಂಡೀಸ್, ರಾಹುಲ್ ಎಸ್ ಮೇಸ್ತ, ದಿನೇಶ ಡಿ ಮೇಸ್ತ, ಗಣಪತಿ ಕೆ ಮೇಸ್ತ, ವಾಸುದೇವ ಮೇಸ್ತ, ಚಂದ್ರು ಆರ್ ಮೇಸ್ತ, ಕಮಲಾಕರ್ ಚಾರೋಡಿ ಮತ್ತಿತರರು ಉಪಸ್ಥಿತರಿದ್ದರು.