ಹೊನ್ನಾವರ ತಾಲೂಕಿನ ಕರ್ಕಿ ಪ್ರಾಥಮಿಕ ಶಾಲೆಯ ಎದುರಿನ ರಾಷ್ಟ್ರೀಯ ಹೆದ್ದಾರಿ ಎಡಬಲದಲ್ಲಿ ಬಸ್ ತಂಗುದಾಣ ನಿರ್ಮಾಣಕ್ಕೆ ಆಗ್ರಹಿಸಿ ಕರ್ಕಿಯ ಗ್ರಾಮಸ್ಥರು ಹಾಗೂ ಶಾಲಾ ಕಾಲೇಜು ವಿದ್ಯಾರ್ಥಿಗಳು ಸಚಿವ ಮಂಕಾಳ್ ವೈದ್ಯರಿಗೆ ಮನವಿ ಸಲ್ಲಿಸಿದ್ದಾರೆ.
ರಾಷ್ಟ್ರೀಯ ಹೆದ್ದಾರಿ 66ರ ಚತುಷ್ಪಥ ಕಾಮಗಾರಿ ಆರಂಭವಾಗುವ ಪೂರ್ವದಿಂದಲೂ ಇಲ್ಲಿ ಬಸ್ ತಂಗುದಾಣವಿತ್ತು. ಕೆಲವು ವರ್ಷಗಳ ಹಿಂದೆ ಚತುಷ್ಪತ ಕಾಮಾಗಾರಿಗಾಗಿ ಈ ಕಟ್ಟಡವನ್ನು ಕೆಡವಿದ್ದಾರೆ.ಇದಲ್ಲದೆ ರಸ್ತೆಯ ಎರಡೂ ಬದಿಗಳಲ್ಲಿದ್ದ ನೆರಳು ಕೊಡುವ ಮರಗಳನ್ನು ಸಹ ಕಡಿದು ನೆಲಸಮಗೊಳಿಸಿ ರಸ್ತೆಯನ್ನು ನಿರ್ಮಿಸಲಾಗಿದೆ. ಇದರಿಂದಾಗಿ ಇಲ್ಲಿಂದ ದಿನನಿತ್ಯ ಪ್ರಯಾಣ ಬೆಳೆಸುವಂತ ಪ್ರಯಾಣಿಕರು ಬೇಸಿಗೆಯಲ್ಲಿ ಬಿಸಿಲಿನ ಝಳದಲ್ಲಿ ಬಸವಳಿದು, ಮಳೆಗಾಲದಲ್ಲಿ ಮಳೆಯಲ್ಲೇ ನೆನೆಯುವ ಪರಿಸ್ಥಿತಿ ಇದೆ.
ಕಳೆದ ಐದಾರು ವರ್ಷಗಳಿಂದ ಇಲ್ಲಿನ ಸ್ಥಳೀಯರಿಗೆ ಈ ಸಮಸ್ಯೆ ಬಂದೊದಗಿದೆ. ಇಲ್ಲಿಂದ, ಅಕ್ಕ-ಪಕ್ಕದ ತಾಲೂಕು ಕೇಂದ್ರಗಳಾದ ಕುಮಟಾ ಮತ್ತು ಹೊನ್ನಾವರಕ್ಕೆ ಹಾಗೂ ಇದರಾಚೆಗಿನ ಊರುಗಳಿಗೆ ಹೋಗುವಂತ ಪ್ರಯಾಣಿಕರಿಗೆ, ಶಾಲಾ -ಕಾಲೇಜುಗಳಿಗೆ ಹೋಗುವ ವಿದ್ಯಾರ್ಥಿಗಳಿಗೆ ಹಾಗೂ ಇತರ ಸಾರ್ವಜನಿಕರಿಗೆ ಹೆಚ್ಚಿನ ಸಮಸ್ಯೆಯಾಗಿದೆ. ಬಸ್, ಟೆಂಪೋ ಗಳಿಗಾಗಿ ಕಾದು ಕುಳಿತ ಮಹಿಳೆಯರು, ಕಾಲೇಜಿಗೆ ಹೋಗುವ ವಿದ್ಯಾರ್ಥಿನಿಯರು ಬಿಸಿಲಿನ ತಾಪ ತಾಳಲಾಗದೇ ತಲೆ ಸುತ್ತಿ ಬಿದ್ದ ನಿದರ್ಶನಗಳಿವೆ.
ಈ ಹಿಂದೆಯೇ ಇಲ್ಲಿನ ಸಾಮಾಜಿಕ ಕಾರ್ಯಕರ್ತ ರವಿ ಎನ್ ಮುಕ್ರಿ ಅವರು ಜಿಲ್ಲಾಧಿಕಾರಿಗಳಿಗೆ ವಾಟ್ಸಾಪ್ ದೂರು ನೀಡಿದ್ದರು. ನಂತರ ಜಿಲ್ಲಾ ಪಂಚಾಯತ ಕುಂದು-ಕೊರತೆ ವಿಭಾಗಕ್ಕೆ ಕರೆಮಾಡಿ ದೂರನ್ನೂ ಸಹ ನೀಡಿದ್ದರು. ಆದರೂ ಈ ತನಕ ಯಾವುದೇ ಪ್ರಯೋಜನ ಆಗದಿರುವುದರಿಂದ ಸಚಿವ ಮಂಕಾಳ ವೈದ್ಯರಿಗೆ ಮನವಿ ಸಲ್ಲಿಸಿದ್ದಾರೆ.
ಈ ಕುರಿತು ಕರ್ಕಿ ಗ್ರಾಮ ಪಂಚಾಯತ್ ಮಾಜಿ ಸದಸ್ಯರಾದ ಅಶೋಕ ನಾಯ್ಕ ಅವರು ಮಾತನಾಡಿ,ಇಲ್ಲಿ ಅನಾದಿಕಾಲದಿಂದಲೂ ಬಸ್ ತಂಗುದಾಣವಿತ್ತು.ಐಆರ್ ಬಿ ಕಾಮಗಾರಿಗಾಗಿ ತೆರವುಮಾಡಿದ್ದಾರೆ.ಇಲ್ಲಿ ಯುಟರ್ನ್ ಅವಶ್ಯಕತೆಯೂ ಇದೆ. ಬಸ್ ನಿಲ್ದಾಣ ಮಾಡದಿದ್ದರೆ ಮುಂದೆ ಪ್ರತಿಭಟನೆ ಮಾಡಲಿದ್ದೇವೆ ಎಂದು ಎಚ್ಚರಿಕೆ ನೀಡಿದ್ರು..
ಈ ವೇಳೆ ರವಿ ಎನ್ ಮುಕ್ರಿ,ರೇವತಿ ಮುಕ್ರಿ,ಭಾರತಿ ಜಟ್ಟಿ ಮುಕ್ರಿ,ರಶ್ಮಿ ಎಂ. ಮುಕ್ರಿ,ಲಕ್ಷ್ಮೀ ನಾಗು ಮುಕ್ರಿ,ಅಂಜನಾ ಎನ್. ಮುಕ್ರಿ,ಪ್ರಜ್ಞಾ ಎನ್. ಮುಕ್ರಿ,ಪ್ರದೀಪ್ ಶಿವು ಮುಕ್ರಿ,ಮಂಜುನಾಥ ಹೊನ್ನಪ್ಪ ನಾಯ್ಕ,ಶ್ರೀನಿವಾಸ ಅನಂತ ಶಾನಭಾಗ,ಆನಂದ್ ಎ. ಶಾನಭಾಗ,ವಿಷ್ಣು ಎನ್. ಮುಕ್ರಿ,ಮಂಜು ರಾಮ ಮುಕ್ರಿ,ನಾಗೇಶ ಜೆ. ಮುಕ್ರಿ ಹಾಗೂ ಶಿವು ಮುಕ್ರಿ ಮತ್ತಿತರರು ಉಪಸ್ಥಿತರಿದ್ದರು.