ಮುಂಡಗೋಡ: ನಿರಂತರವಾಗಿ ಸುರಿಯುತ್ತಿರುವ ಮಳೆಗೆ ತಾಲೂಕಿನ ಕಾತೂರ ಗ್ರಾಮ ಪಂಚಾಯತ ವ್ಯಾಪ್ತಿಯ ಮುಡಸಾಲಿ ರಸ್ತೆಯಲ್ಲಿರುವ ಸೇತುವೆ ಸಂಪೂರ್ಣ ಹಾನಿಯಾಗಿದ್ದು ರಸ್ತೆ ಸಂಚಾರ ಬಂದಾಗಿದೆ.
ಈ ಸೇತುವೆ ಚಿಕ್ಕದಾಗಿರುವುದರಿಂದ ಮಳೆಯಾದಾಗ ಅರಣ್ಯದಲ್ಲಿನ ನೀರು ಇದೇ ಸೇತುವೆಯ ಮೂಲಕ ಬೇರೆ ಬೇರೆ ಹಳ್ಳ ಕೋಳ್ಳಗಳನ್ನು ಸೇರುತ್ತದೆ. ಆದರೆ ಈ ಸೇತುವೆಯು ಕಾತೂರ ಗ್ರಾಮದಿಂದ ಮುಡಸಾಲಿ ಚಿಗಳ್ಳಿ ಅಜ್ಜಳ್ಳಿ ಹೀಗೆ ಹತ್ತು ಹಲವು ಗ್ರಾಮಗಳಿಗೆ ಓಡಾಡುವ ಮುಖ್ಯ ರಸ್ತೆಯಾಗಿದ್ದು, ಅತಿಯಾದ ಮಳೆಯಾದಾಗ ವಿವಿಧ ಗ್ರಾಮಗಳಿಂದ ಶಾಲಾ ಕಾಲೇಜುಗಳಿಗೆ ವಿದ್ಯಾರ್ಥಿಗಳು ಇದೆ ರಸ್ತೆಯ ಮೂಲ ಹೋಗಬೇಕಾಗಿದೆ.
ಸೋಮವಾರದಿಂದ ಸುರಿಯುತ್ತಿರುವ ಮಳೆಗೆ ಸೇತುವೆಯ ಮೇಲೆ ನೀರು ಹರಿಯುತ್ತಿದ್ದು ರಸ್ತೆ ಸಂಚಾರ ಕೂಡ ಬಂದಾಗಿದೆ. ಸುಮಾರು 50 ವರ್ಷಕ್ಕೂ ಹೆಚ್ಚು ಹಳೆಯದಾದ ಸೇತುವೆ ಇದಾಗಿದ್ದು ಇದು ಸಂಪೂರ್ಣ ಶಿಥಿಲಾವ್ಯಸ್ಥೆ ತಲುಪಿದೆ. ಕಳೆದ ಎರಡು ದಿನಗಳಿಂದ ಸುರಿದ ಮಳೆಗೆ ಸೇತುವೆಯ ಮೇಲೆ ಹರಿದ ನೀರಿನಿಂದ ರಸ್ತೆಯು ಹಾಳಾಗಿದ್ದು ಯಾವ ವಾಹನಗಳು ಓಡಾಡದಂತಾಗಿದ್ದು ಇಕ್ಕಟ್ಟಾಗಿದ್ದ ರಸ್ತೆ ಹದಗೆಟ್ಟು ಹೋಗಿದೆ.
ಇನ್ನಾದರೂ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳೂ ಎಚ್ಚೆತ್ತುಕೊಂಡು ಸಾರ್ವಜನಿಕರಿಗೆ ಅನುಕೂಲ ಆಗುವಂತೆ ದೊಡ್ಡ ಸೇತುವೆ ನಿರ್ಮಿಸಿ ಮಳೆಗಾಲದಲ್ಲಿ ಸಾರ್ವಜನಿಕರಿಗೆ ಹಾಗೂ ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಓಡಾಡಲು ಅನುಕೂಲ ಮಡಿಕೊಡಬೇಕು ಎಂಬುದು ಗ್ರಾಮಸ್ಥರ ಕೂಗಾಗಿದೆ.