ಬೆಳಕಿನ ಹಬ್ಬ ದೀಪಾವಳಿ ಹಬ್ಬಕ್ಕೆ ಕ್ಷಣಗಣನೆ – ಹೊನ್ನಾವರದಲ್ಲಿ ಹಣತೆಗಳ ಮಾರಾಟ ಬಲು ಜೋರು

ಹೊನ್ನಾವರ: ಹಿಂದೂಗಳ ಪವಿತ್ರ ಹಾಗೂ ವಿಜ್ರಂಭಣೆಯಿಂದ ಆಚರಿಸುವ ಹಬ್ಬಗಳಲ್ಲೊಂದಾದ ದೀಪಾವಳಿ ಹಬ್ಬ ಎಂದಾಕ್ಷಣ ನೆನಪಾಗೊದು ಹಣತೆ ದೀಪಗಳು. ಪ್ರತಿಯೊಬ್ಬರ ಮನೆಯಲ್ಲಿ ಬೆಳಗೋ ಹಣತೆಯ ದೀಪ ಅದೆಷ್ಟೋ ಕುಟುಂಬದ ಜೀವನ ಬೆಳಗುವ ಬೆಳಕು ಕೂಡಾ ಹೌದು. ಇಂತಹ ಹಣತೆಗಳ ಮಾರಾಟ ಪಟ್ಟಣದಲ್ಲಿ ಭರ್ಜರಿಯಾಗಿ ನಡೆಯುತ್ತಿದೆ‌. ಈ ಕುರಿತ ಒಂದು ಸ್ಪೇಷಲ್ ರಿಪೊರ್ಟ ಇಲ್ಲಿದೆ ನೋಡಿ…

ಮಣ್ಣಿನ ಹಣತೆಗಳಿಲ್ಲದೇ ಬೆಳಕಿನ ಹಬ್ಬ ದೀಪಾವಳಿ ಅರ್ಥಪೂರ್ಣವಾಗಲಾರದು ಎಂಬುದು ವಾಡಿಕೆ. ಇನ್ನೆನು ದೀಪಾವಳಿಗೆ ಹಬ್ಬಕ್ಕೆ ಕ್ಷಣಗಣನೆ ಆರಂಭವಾಗಿದೆ. ಮಾರುಕಟ್ಟೆಯಲ್ಲಿ ತರಹೇವಾರಿ ಹಣತೆಗಳು ಲಗ್ಗೆ ಇಟ್ಟಿವೆ. ಹೊಸತನಕ್ಕೆ ಹೊಂದಿಕೊಳ್ಳುವಂತೆ ಹಣತೆಗಳ ಸ್ವರೂಪ, ಗಾತ್ರ ಕೂಡ ಬದಲಾಗಿ ಗ್ರಾಹಕರ ಆಕರ್ಷಣೆಗೆ ಒಳಗಾಗಿದೆ.ಹಣತೆಯಲ್ಲಿ ದೀಪ ಬೆಳಗಿಸಿದರೆ ಲಕ್ಷ್ಮಿ ಒಲಿಯುತ್ತಾಳೆ ಎಂಬ ನಂಬಿಕೆ ನೆಲೆಯೂರಿದ ಕಾರಣ ಮಣ್ಣಿನ ಹಣತೆಗಳಿಗೆ ಬೇಡಿಕೆ ಇರಲು ಪ್ರಮುಖ ಕಾರಣ ಎಂದು ಹಿರಿಯರು ಹೇಳುತ್ತಾರೆ. ದೀಪಾವಳಿ ಹಬ್ಬ ಹಿಂದೂಗಳಿಗೆ ಬಹಳ ಪವಿತ್ರವಾದ ಹಬ್ಬ. ಮನೆ, ಮನ ಬೆಳಗಿಸಿಕೊಂಡು ಲಕ್ಷ್ಮಿಯನ್ನು ಆಮಂತ್ರಿಸುವ ಸುಸಂದರ್ಭ. ಎಣ್ಣೆ ದೀಪ ಇದನ್ನು ಸಾಮಾನ್ಯವಾಗಿ ಮಣ್ಣಿನಿಂದ ತಯಾರಿಸಲಾಗುತ್ತದೆ. ಮತ್ತು ತುಪ್ಪ ಅಥವಾ ಎಣ್ಣೆಯಲ್ಲಿ ನೆನೆಸಿದ ಹತ್ತಿಯ ಬತ್ತಿಯನ್ನು ಹೊಂದಿರುತ್ತದೆ. ಮಣ್ಣಿನ ಹಣತೆಗಳನ್ನು ಹಲವುವೇಳೆ ವಿಶೇಷ ಸಂದರ್ಭಗಳಲ್ಲಿ ಬೆಳಗಲು ತಾತ್ಕಾಲಿಕವಾಗಿ ಬಳಸಲಾಗುತ್ತದೆ. ಮತ್ತು ಹಿತ್ತಾಳೆಯಿಂದ ತಯಾರಿಸಿದ ಹಣತೆಗಳು ಮನೆಗಳು ಹಾಗೂ ದೇವಸ್ಥಾನಗಳಲ್ಲಿ ಶಾಶ್ವತವಾದ ನೆಲೆವಸ್ತುಗಳಾಗಿರುತ್ತವೆ.

ಹಣತೆಗಳನ್ನು ಹಚ್ಚುವುದು ದೀಪಾವಳಿ ಹಬ್ಬದ ಸಂಭ್ರಮ ಹಾಗೂ ಕ್ರಿಯಾವಿಧಿಗಳ ಭಾಗವಾಗಿರುತ್ತದೆ. ಸಣ್ಣ ಹಣತೆಗಳನ್ನು ಸೀಮೆಗಳು ಹಾಗೂ ಪ್ರವೇಶದ್ವಾರಗಳಲ್ಲಿ ಇಟ್ಟು ಮನೆಗಳನ್ನು ಅಲಂಕರಿಸಲಾಗುತ್ತದೆ. ಇನ್ನೂ ದೀಪಾವಳಿ ಹಬ್ಬದ ಆಚರಣೆಯ ಸಿದ್ಧತೆ ಹೊನ್ನಾವರ ತಾಲೂಕಿನಾದ್ಯಂತ ಜೋರಾಗಿ ನಡೆಯುತ್ತಿದೆ. ಮನೆ ಮುಂದೆ ಬೆಳಗಲು ವಿವಿಧ ಬಗೆಯ ಆಕರ್ಷಕ ಬಣ್ಣಗಳಿಂದ ಕಂಗೊಳಿಸುವ ಹಣತೆಗಳು ಸಿದ್ದಗೊಂಡು ಮಾರುಕಟ್ಟೆಗೆ ಲಗ್ಗೆಯಿಟ್ಟು ಜನರ ಗಮನ ಸೆಳೆಯುತ್ತಿದೆ.

ಪಟ್ಟಣದ ಬಜಾರ್ ರಸ್ತೆಯ ಅಕ್ಕ-ಪಕ್ಕದಲ್ಲಿ ದೀಪಾವಳಿ ಹಬ್ಬದ ಸಲುವಾಗಿ ಪಿಂಗಾಣಿ ಹಣತೆ, ಪೈವ್ ಸ್ಟಾರ್ ಹಣತೆ, ಮಣ್ಣಿನ ದೀಪ‌, ಕುದುರೆ,ಆಕಳು, ಭರಣಿ, ತುಳಸಿ ದೀಪ, ದೂಪದ ಆರತಿ ಸೇರಿದಂತೆ ವಿವಿಧ ಬಗೆಯ ಮಣ್ಣಿನ ಹಣತೆ ಹಾಗೂ ವಿವಿಧ ಬಗೆಯ ದೀಪದ ಗೊಂಬೆಗಳು ಮಾರಾಟಕ್ಕಿಡಲಾಗಿದೆ. ಗ್ರಾಹಕರು ಸಹ ಖುಷಿಯಿಂದ ಹಣತೆ ದೀಪ ಖರೀದಿಸುತ್ತಿರುವುದು ಕಂಡುಬಂದಿತು. ಇನ್ನೂ ಹಣತೆ ವ್ಯಾಪಾರ ನಡೆಯುತ್ತಿರುವ ಬಗ್ಗೆ ಮಾರಾಟಗಾರ ಸಲ್ಮಾನ್ ಮಾತನಾಡಿ, ದೂರದ ಹುಬ್ಬಳ್ಳಿಯಿಂದ ಇಲ್ಲಿ ವ್ಯಾಪಾರಕ್ಕೆ ಬಂದಿದ್ದೇವೆ. ಈ ಬಾರಿ ಭರ್ಜರಿ ಹಣತೆ ವ್ಯಾಪಾರ ನಡೆಯುತ್ತಿದೆ ಎಂದು ಹೇಳಿದ್ರು… ಮಣ್ಣಿನ ಹಣತೆಗಳನ್ನು ಖರೀದಿಸಿದರೆ ಬಡವರಿಗೆ ಅನುಕೂಲವಾಗುತ್ತದೆ. ಹಣತೆ ಮಾಡುವವರು, ಮಾರಾಟ ಮಾಡುವವರು ಕೂಡ ಹೆಚ್ಚಾಗಿ ಬಡವರೇ ಆಗಿರುವುದರಿಂದ ಅವರಿಗೆ ನೆರವು ಮಾಡಿದಂತಾಗುತ್ತದೆ ಎನ್ನುವುದು ಹಲವು ಗ್ರಾಹಕರ ಅನಿಸಿಕೆಯಾಗಿದೆ‌. ಒಟ್ಟಿನಲ್ಲಿ ಬೆಳಕಿನ ಹಬ್ಬ ದೀಪಾವಳಿಗೆ ಭರ್ಜರಿ ಸಿದ್ದತೆ ನಡೆಯುತ್ತಿದ್ದು,ಪಟ್ಟಣ ಜನಜಂಗುಳಿಯಿಂದ ಕೂಡಿದೆ…