ಅಂಕೋಲಾ ರಾಷ್ಟ್ರೀಯ ಕಾನೂನು ಸೇವೆಗಳ ದಿನ ಪ್ರಯುಕ್ತ ನವೆಂಬರ 9 ರಂದುಜನರಲ್ಲಿ ಕಾನೂನಿನ ನೆರವಿನ ಕುರಿತು ಅರಿವು ಮೂಡಿಸುವ ಉದ್ದೇಶದಿಂದ ತಾಲೂಕಿನಾದ್ಯಂತ ಸಮುದಾಯ ಸಹಭಾಗಿತ್ವದಲ್ಲಿ ಕಾನೂನುನ ಅರಿವು ನೆರವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದು ತಾಲೂಕು ಕಾನೂನು ಸೇವಾ ಸಮಿತಿಯ ಸದಸ್ಯ ಕಾರ್ಯದರ್ಶಿ, ಹಿರಿಯ ಸಿವಿಲ್ ಮತ್ತು ಜೆ.ಎಮ್.ಎಫ್.ಸಿ ನ್ಯಾಯಾಧೀಶರಾದ ಮನೋಹರ ಎಂ ಹೇಳಿದರು. ಅವರು ನ್ಯಾಯಾಲಯದ ಸಭಾಭವನದಲ್ಲಿ ರಾಷ್ಟ್ರೀಯ ಕಾನೂನು ಸೇವೆಗಳ ದಿನ ಮತ್ತು ರಾಷ್ಟ್ರೀಯ ಲೋಕ ಅದಾಲತ್ ಪೂರ್ವಭಾವಿ ಸಭೆಯನ್ನುದ್ದೇಶಿಸಿ ಮಾತನಾಡಿ ಉಚಿತ ಕಾನೂನಿನ ನೆರವು ಮತ್ತು ಸಲಹೆಯನ್ನು ಕೊಡುವುದು ಹಾಗೂ ಲೋಕ ಅದಾಲತ್ ಮೂಲಕ ಪ್ರಕರಣಗಳನ್ನು ಇತ್ಯರ್ಥಗೊಳಿಸಿ, ಜನರಿಗೆ ತ್ವರಿತವಾಗಿ ನ್ಯಾಯ ದೊರಕಿಸಿ ಕೊಡುವ ಉದ್ದೇಶದಿಂದ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುತ್ತಿದೆ. ಬಹಳ ವರ್ಷಗಳಿಂದ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ ಕಾರ್ಯನಿರ್ವಹಿಸುತ್ತಿದ್ದು ಜನಸಾಮಾನ್ಯರಿಗೆ ಇದರ ಬಗ್ಗೆ ಸಂಪೂರ್ಣ ಅರಿವು ಮೂಡಿಸಬೇಕಾಗಿದೆ. ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ, ಮಹಿಳೆಯರು, ಮಕ್ಕಳು, ಕಾರ್ಖಾನೆ ಕಾರ್ಮಿಕರು, ಗಲಭೆ, ಪ್ರವಾಹ, ಕ್ಷಾಮ, ಭೂಕಂಪ, ವಿನಾಶ ಮುಂತಾದವುಗಳಿಗೆ ತುತ್ತಾದವರು, ಅತಿಯಾದ ದೌರ್ಜನ್ಯಕ್ಕೆ ಬಲಿಯಾದವರು, ಮಾನಸಿಕ ಅಥವಾ ಬೇರೆ ನ್ಯೂನತೆ ಹೊಂದಿರುವವರು, ರಕ್ಷಣಾ ಗೃಹ, ಮನೋರೋಗಿಗಳ ಆಸ್ಪತ್ರೆ ಮುಂತಾದವುಗಳಲ್ಲಿ ಅಭಿರಕ್ಷೆಯಲ್ಲಿರುವವರು, ದೈಹಿಕ ವ್ಯಾಪಾರ ಅಥವಾ ಜೀತಕ್ಕೊಳಗಾದವರು ವಾರ್ಷಿಕ ಆದಾಯ ಮೂರು ಲಕ್ಷಕ್ಕಿಂತ ಕಡಿಮೆ ಇರುವ ಎಲ್ಲಾ ವರ್ಗದ ಜನರು ಉಚಿತ ಕಾನೂನು ಸಲಹೆ ಮತ್ತು ನೆರವು ಪ್ರಯೋಜನವನ್ನು ಪಡೆದುಕೊಳ್ಳಬಹುದು. ಇದರಡಿಯಲ್ಲಿ ಬರುವ ಪ್ರಕರಣಕ್ಕೆ ಸಂಬಂಧಿಸಿದಂತೆ ವಕೀಲರ ಪೀಸು ಮತ್ತು ನ್ಯಾಯಾಲಯ ಶುಲ್ಕ ಹಾಗೂ ಇತರೆ ವೆಚ್ಚಗಳನ್ನು ಸಂಪೂರ್ಣವಾಗಿ ರಾಜ್ಯ ಪ್ರಾಧಿಕಾರದಿಂದಲೇ ಬರಿಸಲಾಗುತ್ತದೆ ಉಚಿತ ಕಾನೂನು ಸಲಹೆ ಮತ್ತು ನೆರವನ್ನು ತಾಲೂಕು ಕೇಂದ್ರದಲ್ಲಿರುವ ಸಿವಿಲ್ ನ್ಯಾಯಾಲಯದ ತಾಲೂಕು ಕಾನೂನು ಸೇವಾ ಸಮಿತಿಯ ಕಾರ್ಯಾಲಯದಲ್ಲಿ ಬೆಳಿಗ್ಗೆ 10 ರಿಂದ 5:45 ರವರೆಗೆ ಪಡೆಯಬಹುದಾಗಿದೆ. ಈ ಕುರಿತು ಕಾರ್ಯಕ್ರಮದಲ್ಲಿ ವ್ಯಾಪಕ ಪ್ರಚಾರ ಮಾಡಬೇಕು ಎಂದರು.
ಸಿವಿಲ್ ಹಾಗೂ ಜೆ.ಎಮ.ಎಫ.ಸಿ ನ್ಯಾಯಾಧೀಶ ಪ್ರಶಾಂತ ಬಾದವಾಡಗಿ ಮಾತನಾಡಿ ಡಿಸೆಂಬರ 9 ರಂದು ರಾಷ್ಟ್ರೀಯ ಲೋಕ ಅದಾಲತ್ ನಡೆಯಲಿದ್ದು ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕು ಎಂದರು. ಲೋಕ ಅದಾಲತನಲ್ಲಿ ಮೋಟಾರು ವಾಹನ ಅಪಘಾತ ಪ್ರಕರಣ, ಭೂಸ್ವಾಧೀನ ಪ್ರಕರಣ, ಪುರಸಭೆ, ಪಂಚಾಯಿತಿ, ವಿದ್ಯುತ್ ಮಂಡಳಿ, ಮುಂತಾದ ಸ್ಥಳೀಯ ಸಂಸ್ಥೆಗಳ ಪರ ಮತ್ತು ವಿರುದ್ಧ ದಾಖಲಾದ ಪ್ರಕರಣಗಳು, ಬ್ಯಾಂಕುಗಳಿಗೆ ಸಂಬಂಧಿಸಿದ ಪ್ರಕರಣ, ವೈವಾಹಿಕ ಅಥವಾ ಜೀವನ ಅಂಶಗಳಿಗೆ ಸಂಬಂಧಿಸಿದ ಪ್ರಕರಣಗಳಿಗೆ ಕಾನೂನಿನ ಅನ್ವಯ ರಾಜಿ ಆಗಬಹುದಾದ ಕ್ರಿಮಿನಲ್ ಪ್ರಕರಣ, ಕಾರ್ಮಿಕ ನಷ್ಟ ಪರಿಹಾರ ಪ್ರಕರಣ, ಗ್ರಾಹಕರ ವಿವಾದಗಳಿಗೆ ಸಂಬಂಧಿಸಿದ ಪ್ರಕರಣ ರಾಜಿ ಆಗಬಹುದಾದ ಎಲ್ಲಾ ತರಹದ ಪ್ರಕರಣಗಳನ್ನು ಲೋಕಾ ತಾಲತ್ ಮೂಲಕ ಇತ್ಯರ್ಥಪಡಿಸಿಕೊಳ್ಳಬಹುದು ಜನರಲ್ಲಿ ಕಾನೂನು ಅರಿವು ಮೂಡಿಸುವ ನಿಟ್ಟಿನಲ್ಲಿ ಎಲ್ಲಾ ವರ್ಗದ ಜನರಿಗೆ ಕಾನೂನು ಕಾರ್ಯಾಗಾರ ಕಾನೂನು ಕಮ್ಮಟಗಳನ್ನು ಸರ್ಕಾರಿ ಹಾಗೂ ಇತರ ಸಂಸ್ಥೆಗಳು ಸರ್ಕಾರದ ವಿವಿಧ ಇಲಾಖೆಗಳು ಹಾಗೂ ಇತರ ಸಮುದಾಯ ಸೇವಾ ಸಂಸ್ಥೆಗಳ ಸಹಯೋಗದೊಂದಿಗೆ ವ್ಯಾಪಕ ತಿಳುವಳಿಕೆ ಮೂಡಿಸಿ ಎಂದರು. ನ್ಯಾಯವಾಗಿ ಗುರು ನಾಯ್ಕ ಸ್ವಾಗತಿಸಿದರು. ನ್ಯಾಯವಾದಿ ನಾಗಾನಂದ ಬಂಟ ವಂದಿಸಿದರು. ಸಭೆಯಲ್ಲಿ ಶಿಕ್ಷಣ ಇಲಾಖೆ, ಕಂದಾಯ ಇಲಾಖೆ, ಅಬಕಾರಿ, ಪೊಲೀಸ್, ಪುರಸಭೆ, ಅರಣ್ಯ ಇಲಾಖೆ, ಶಿಶು ಅಭಿವೃದ್ಧಿ ಮತ್ತು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಮುಂತಾದ ವಿವಿಧ ಇಲಾಖೆಗಳ ಅಧಿಕಾರಿಗಳು, ಪ್ರತಿನಿಧಿಗಳು, ವಕೀಲರು ಉಪಸ್ಥಿತರಿದ್ದರು.