ಹೊನ್ನಾವರ ತಾಲೂಕಿನಲ್ಲಿ 3 ವರ್ಷಗಳ ಅವಧಿಯಲ್ಲಿ ಪ್ರದೀಪ ಆಚಾರ್ಯ ಅವರು ಸಲ್ಲಿಸಿದ ಕಾರ್ಯ ಶ್ಲಾಘನೀಯ ಎಂದ ಕಾರ್ಯನಿರ್ವಾಹಕ ಅಧಿಕಾರಿ ಸುರೇಶ ನಾಯ್ಕ ಹೇಳಿದರು.
ಅವರು ತಾಲೂಕು ಪಂಚಾಯತದ ಸಭಾಭವನದಲ್ಲಿ ಪಂಚಾಯತ ಅಭಿವೃದ್ಧಿ ಅಧಿಕಾರಿಗಳ ಕ್ಷೇಮಾಭಿವೃದ್ಧಿ ಸಂಘ ಆಯೋಜಿಸಿದ ನಿವೃತ್ತಿ ಹೊಂದುತ್ತಿರುವ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು ಹಾಗೂ ತಾಲೂಕಿನಿಂದ ವರ್ಗಾವಣೆಗೊಂಡಿರುವ ಪಂಚಾಯತ ಅಭಿವೃದ್ಧಿ ಅಧಿಕಾರಿಗಳ ಬೀಳ್ಕೊಡುಗೆ ಸಮಾರಂಭದಲ್ಲಿ ಮಾತನಾಡಿದರು. ದಕ್ಷ ಅಧಿಕಾರಿಗಳಾದ ಪ್ರದೀಪ ಆಚಾರ್ಯರು ಕಳೆದ 3 ವರ್ಷಗಳಿಂದ ತಾಲೂಕಿನಲ್ಲಿ ಪಂಚಾಯತ ರಾಜ್ ಇಂಜಿನಿಯರ್ ಉಪವಿಭಾಗದಲ್ಲಿ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರಾಗಿ, ಅಧಿಕಾರಿಗಳು, ಜನಪ್ರತಿನಿಧಿಗಳ ಸಹಕಾರದೊಂದಿಗೆ ಉತ್ತಮವಾಗಿ ಕಾರ್ಯನಿರ್ವಹಿಸಿದ್ದು, ಜನಸಾಮಾನ್ಯರ ಸಮಸ್ಯೆಗಳಿಗೆ ಸ್ಪಂದಿಸಿ ಜನಮನ್ನಣೆಗಳಿಸಿದ್ದಾರೆ. ಅವರ ನಿವೃತ್ತಿ ಜೀವನ ಉಜ್ವಲವಾಗಲಿ ಎಂದು ಶುಭ ಕೋರಿದರು.
ಇದೇ ಸಂದರ್ಭದಲ್ಲಿ ತಾಲೂಕಿನಿಂದ ಬೇರೆಡೆ ವರ್ಗಾವಣೆಗೊಂಡ ಪಂಚಾಯತ ಅಭಿವೃದ್ಧಿ ಅಧಿಕಾರಿಗಳಾದ ಅನಂತವಾಡಿ ಪಿ.ಡಿ.ಓ. ಮಂಜು ಗೌಡ ಮತ್ತು ಕೊಡಾಣಿ ಪಿ.ಡಿ.ಓ. ಎಸ್.ಆಂಜನೇಯ ರವರನ್ನು ಸನ್ಮಾನಿಸಲಾಯಿತು.
ಈ ವೇಳೆ ನರೇಗಾ ಸಹಾಯಕ ನಿರ್ದೇಶಕರಾದ ಕೃಷ್ಣಾನಂದ ಕೆ., ಅಕ್ಷರದಾಸೋಹದ ಅಧಿಕಾರಿ ದೀಪಕ ನಾಯ್ಕ, ಪಂಚಾಯತ ಅಭಿವೃದ್ಧಿ ಅಧಿಕಾರಿಗಳ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷರಾದ ರಾಧಾಕೃಷ್ಣ ನಾಯ್ಕ, ಉಪಸ್ಥಿತರಿದ್ದರು. ಪಿ.ಡಿ.ಓ. ರಾಘವ ನಾಯ್ಕ ಸ್ವಾಗತಿಸಿದರು. ಪಿ.ಡಿ.ಓ. ಅಣ್ಣಪ್ಪ ಮುಕ್ರಿ ವಂದಿಸಿದರು..