ಅಂಕೋಲಾ : ಕೆನರಾ ವೆಲಫರ್ ಟ್ರಸ್ಟನ ಪಿ ಎಂ ಹೈಸ್ಕೂಲಿನ 2002 ರ ಹತ್ತನೇ ತರಗತಿಯ ವಿದ್ಯಾರ್ಥಿಗಳಿಂದ ಗುರುವಂದನೆ ಕಾರ್ಯಕ್ರಮ ವಿಶಿಷ್ಠವಾಗಿ ಹಾಗೂ ಅರ್ಥಪೂರ್ಣವಾಗಿ ನಡೆಯಿತು. 2002 ನೇ ಸಾಲಿನಲ್ಲಿ ತಮಗೆ ಕಲಿಸಿದ ಸದ್ಯ ನಿವೃತ್ತರಾಗಿರುವ ಹಾಗೂ ಹಾಲಿ ಸೇವೆಯಲ್ಲಿರುವ ಶಿಕ್ಷಕರನ್ನು ಒಂದೇ ವೇದಿಕೆಯಲ್ಲಿ ಸನ್ಮಾನಿಸಿ ಗೌರವಿಸುವ ಕಾರ್ಯಕ್ರಮ ಇದಾಗಿತ್ತು. ಟ್ರಸ್ಟಿನ ಧರ್ಮದರ್ಶಿ ಕೃಷ್ಣಾನಂದ ಶೆಟ್ಟಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಈ ವೇಳೆ ಅವರು ಮಾತನಾಡಿ ಆಧುನಿಕ ಸಮಾಜದಲ್ಲಿ ಕಲಿಸಿದ ಗುರುಗಳನ್ನು ಗೌರವಿಸುವ ಪೃವ್ರತ್ತಿ ವಿರಳವಾಗಿದ್ದರೂ ಸಾಮಾಜಿಕ ಜಾಲತಾಣದ ಮೂಲಕ ಮತ್ತೆ ಎಲ್ಲರನ್ನೂ ಒಂದೆಡೆ ಸೇರಿಸಿ ಅಂದು ಕಲಿಸಿದ ಗುರುಗಳನ್ನು ಗೌರವಿಸಿರುವದು ಅದೇ ರೀತಿ ಶಾಲೆಯ ಬಡ ಮಕ್ಕಳ ಶಿಕ್ಷಣದ ದತ್ತಿನಿಧಿಗೆ 1.25 ಲಕ್ಷ ರೂ. ನೀಡಿರುವದು ಕೂಡ ಶ್ಲಾಘನೀಯ. ಇಂತಹ ಕಾರ್ಯಕ್ರಮಗಳ ಮೂಲಕ ಶಾಲೆಯಲ್ಲಿ ಕಲಿತ ವಿದ್ಯಾರ್ಥಿಗಳು ಟ್ರಸ್ಟ ಮತ್ತು ಶಾಲೆಯ ಅಭಿವೃದ್ಧಿಗೆ ಸಹಕಾರಿಯಾಗುವದು ಎಂದರು. ಅಲ್ಲದೆ ಶಿಕ್ಷಣದ ಗುಣಮಟ್ಟವನ್ನು ಇನ್ನೂ ಹೆಚ್ಚಿಸಲು ಹೈಸ್ಕೂಲಿನ ಆಂಗ್ಲ ಮಾದ್ಯಮದಲ್ಲಿ ಸಿಬಿಎಸ್ಸಿ ಸಿಲೆಬಸ್ ಅಳವಡಿಸುವ ಪ್ರಯತ್ನ ಪ್ರಾಥಮಿಕ ಹಂತದಲ್ಲಿದೆ ಎಂದರು.
ಇದೇ ವೇಳೆ 2002ರ ಎಸ್ಎಸ್ಎಲ್ಸಿ ವಿದ್ಯಾರ್ಥಿಗಳಿಗೆ ವಿದ್ಯೆ ಕಲಿಸಿದ ಗುರುಗಳಾದ ನಿವೃತ್ತ ಶಿಕ್ಷಕರಾದ ಎನ್ ಬಿ ಮಹಾಲೆ, ಎ ಎಫ್ ಶೇಖ, ರವೀಂದ್ರ ಕೇಣಿ, ವಿ ಕೆ ನಾಯ್ಕ, ಎಸ್ ವಿ ಮುಳಗುಂದ, ಮಹಾಲಕ್ಷ್ಮೀ ನಾಯಕ, ಉಷಾ ನಾಯಕ, ನಾಯಕ, ಎಮ್ ಎಚ್ ಗೌಡ, ರಾಜಪ್ಪ, ಕೃಷ್ಣಾನಂದ ಶೆಟ್ಟಿ, ಎನ್ ಪಿ ನಾವಗೆ, ಹಾಲಿ ಸೇವೆಯಲ್ಲಿರುವ ಶೀಲಾ ಬಂಟ, ಜಿ ಎಸ್ ನಾಯ್ಕ, ವಿನೋದ ಎಲ್ ಹೆಗಡೆ, ತನುಜಾ ನಾಯಕ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಸನ್ಮಾನಿತರ ಪರವಾಗಿ ಎನ್ ಬಿ ಮಹಾಲೆ ಮಾತನಾಡಿ ಈ ವಿದ್ಯಾರ್ಥಿಗಳು ಕಲಿಸಿದ ಗುರುಗಳನ್ನು ಸನ್ಮಾನಿಸಿ ಗೌರವಿಸುವದರ ಜೊತೆಗೆ ಬಡ ಮಕ್ಕಳ ಶಿಕ್ಷಣ ದತ್ತಿನಿಧಿಗೆ ಹಣ ನೀಡಿ ಪರೋಪಕಾರದ ಗುಣವನ್ನು ತೋರ್ಪಡಿಸಿದ್ದಾರೆ ಇದು ಒಳ್ಳೆಯದು. ನಾವು ಕಲಿಸಿದ ವಿದ್ಯಾರ್ಥಿಗಳು ಉನ್ನತ ಸಾಧನೆ ಮಾಡಿದರೆ, ಉತ್ತಮ ಸಂಸ್ಕಾರ ಹೊಂದಿದ್ದರೆ ಅದೇ ನಮಗೆ ಸಂತೋಷ ಎಂದರು. ಕಾರವಾರ ಮರೈನ್ ಬಯಾಲಜಿ ಮಹಾವಿದ್ಯಾಲಯದ ನಿವೃತ್ತ ಉಪನ್ಯಾಸಕ ಹಾಗೂ ಟ್ರಸ್ಟಿ ಡಾ. ವಿ ಎನ್ ನಾಯ್ಕ ಮಾತನಾಡಿದರು.
ಸನ್ಮಾನಿತ ಶಿಕ್ಷಕರಾದ ರವೀಂದ್ರ ಕೇಣಿ, ವಿನೋದ ಹೆಗಡೆ, ರಾಜಪ್ಪ ಮಾತನಾಡಿ ವಿದ್ಯಾರ್ಥಿಗಳನ್ನು ಅಭಿನಂದಿಸಿದರು. ವೇದಿಕೆಯಲ್ಲಿ ಟ್ರಸ್ಟಿನ ಸದಸ್ಯ ಡಾ. ಕೃಷ್ಣ ಪ್ರಭು, ಪಿ ಎಂ ಪ್ರೌಢಶಾಲೆಯ ಮುಖ್ಯಾಧ್ಯಾಪಕ ಚಂದ್ರಶೇಖರ ಕಡೆಮನೆ ಉಪಸ್ಥಿತರಿದ್ದರು.
ಕಾರ್ಯಕ್ರಮದ ನೇತೃತ್ವ ವಹಿಸಿದ್ದ ಹಳೆಯ ವಿದ್ಯಾರ್ಥಿ ಡಾ. ಕರುಣಾಕರ ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು.
ವಿಘ್ನೇಶ್ವರ ಘೋಡೆ ಕಾರ್ಯಕ್ರಮ ನಿರ್ವಹಿಸಿದರು. ಹೈಸ್ಕೂಲ ವಿದ್ಯಾರ್ಥಿನಿಯರು ಪ್ರಾರ್ಥಿಸಿದರು. ಸುಷ್ಮಾ, ನಾಗರಾಜ ನಾಯಕ, ರಜಿನಿ ಗೌಡ, ಮೋಹನ ಸಿದ್ಧಿ ಶಾಲಾ ದಿನಗಳಲ್ಲಿನ ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಪಿ ಎಂ ಹೈಸ್ಕೂಲ್ ಬೋಧಕ ಬೋಧಕೇತರ ಸಿಬ್ಬಂದಿಗಳು, ಹೈಸ್ಕೂಲ್, ವಿದ್ಯಾರ್ಥಿಗಳು, ಎನ್ ಸಿ ಸಿ ಕೆಡಟಗಳು ಇದ್ದರು.