ಉತ್ತರ ಕನ್ನಡ, ಜಿಲ್ಲೆಯ ಕಡಲ ತೀರಗಳಿಗೆ ಮೋಜು ಮಸ್ತಿಗೆ ಬರುವ ಪ್ರವಾಸಿಗರು ಸಂಕಷ್ಟಕ್ಕೆ ಸಿಲುಕಿಕೊಳ್ಳುತ್ತಿರುವ ಪ್ರಕರಣಗಳು ಇತ್ತೀಚೆಗೆ ಹೆಚ್ಚು ಕಂಡುಬರುತ್ತಿವೆ. ಕಳೆದ 55 ದಿನಗಳಲ್ಲಿ ಉತ್ತರ ಕನ್ನಡ ಜಿಲ್ಲೆಯ 8 ಕಡಲತೀರಗಳಲ್ಲಿ 64 ಪ್ರವಾಸಿಗರನ್ನ ರಕ್ಷಿಸಲಾಗಿದ್ದು, ನಾಲ್ವರು ಪ್ರಾಣ ಕಳೆದುಕೊಂಡಿದ್ದಾರೆ. ಮಳೆಗಾಲದ ನಂತರದ ಸೆಪ್ಟೆಂಬರ್‌ನಿಂದ ಪ್ರವಾಸೋದ್ಯಮ ಚಟುವಟಿಕೆಗಳು ಚುರುಕು ಪಡೆದುಕೊಂಡಿವೆ. ಮುರ್ಡೇಶ್ವರ ಹಾಗೂ ಗೋಕರ್ಣದಲ್ಲಿ ಧಾರ್ಮಿಕ ಚಟುವಟಿಕೆಗಳ ಜೊತೆಗೆ ಕಡಲ ತೀರದಲ್ಲಿ ಮೋಜು, ಮಸ್ತಿ ಮಾಡಲು ಬರುವ ಪ್ರವಾಸಿಗರ ಸಂಖ್ಯೆ ದ್ವಿಗುಣವಾಗಿದೆ. ಕಳೆದ ವಾರ ದಸರಾದ ರಜೆಯ ಸಂದರ್ಭದಲ್ಲಿ ಕಡಲ ತೀರಗಳಲ್ಲಿ ಟೂರಿಸ್ಟ್ ತುಂಬಿ, ತುಳುಕಿದ್ದರು. ಕಳೆದ ಐದು ದಿನಗಳಲ್ಲಿ 10 ಜನರನ್ನು ಜೀವ ರಕ್ಷಕ ಸಿಬ್ಬಂದಿ ರಕ್ಷಿಸಿದ್ದಾರೆ. ಮುರ್ಡೇಶ್ವರದಲ್ಲಿ ಇಬ್ಬರು ಹಾಗೂ ಕುಮಟಾದಲ್ಲಿ ಒಬ್ಬ ಪ್ರವಾಸಿಗ ಪ್ರಾಣ ಕಳೆದುಕೊಂಡಿದ್ದಾರೆ.
ಇನ್ನು ಗೋಕರ್ಣದ ಓಂ, ಕುಡ್ಲೆ, ಮುಖ್ಯ ಕಡಲ ತೀರ, ಕುಮಟಾದ ವನ್ನಳ್ಳಿ ಅಂಕೋಲಾದ ಹನಿ ಕಡಲ ತೀರ, ಮುರ್ಡೇಶ್ವರದ ಮುಖ್ಯ ಕಡಲ ತೀರ ಸೇರಿದಂತೆ ಜಿಲ್ಲೆಯ 8 ಪ್ರಮುಖ ತೀರಗಳಲ್ಲಿ ಕೇವಲ 20 ರಷ್ಟು ಜೀವ ರಕ್ಷಕ ಸಿಬ್ಬಂದಿಯನ್ನು ಜಿಲ್ಲಾಡಳಿತ ನೇಮಿಸಿದೆ. ಸಾಕಷ್ಟು ವಿಸ್ತಾರವಾಗಿರುವ ತೀರದಲ್ಲಿ ಪ್ರವಾಸಿಗರನ್ನು ಕಾಯ್ದುಕೊಳ್ಳುವುದು ಕಷ್ಟವಾಗುತ್ತಿದೆ. ಹೀಗಾಗಿ ಇನ್ನೂ ಹೆಚ್ಚಿನ ಲೈಪ್ ಗಾಡ್೯ ಸಿಬ್ಬಂದಿಗಳನ್ನು ನೇಮಕ ಮಾಡಿಕೊಳ್ಳಬೇಕು ಎನ್ನುವುದು ಜನರ ಮನವಿಯಾಗಿದೆ.
ಕೆಲ ಪ್ರವಾಸಿಗರು ಲೈಫ್‌ಗಾರ್ಡ್ಗಳ ಮಾತನ್ನೂ ಮೀರಿ ಸಮುದ್ರದ ಉಬ್ಬರ, ಇಳಿತ, ಸುಳಿಗಳ ಅರಿವಿಲ್ಲದೇ ಇಳಿಯುತ್ತಿದ್ದಾರೆ. ಸಾಮಾನ್ಯ ನದಿ ಅಥವಾ ಸ್ವಿಮ್ಮಿಂಗ್ ಫೂಲ್‌ನ ಈಜಿಗೂ ಸಮುದ್ರದಲ್ಲಿ ಈಜುವುದಕ್ಕೂ ವ್ಯತ್ಯಾಸವಿದೆ ಎಂಬುದನ್ನೂ ಅರ್ಥ ಮಾಡಿಕೊಳ್ಳದೇ ಅಬ್ಬರದ ಅಲೆಗೆ ಸಿಲುಕಿಕೊಳ್ಳುತ್ತಿದ್ದಾರೆ. ಕೆಲವರು ಮದ್ಯಪಾನ ಮಾಡಿ ನೀರಿಗಿಳಿಯುತ್ತಿದ್ದಾರೆ. ಅಪಾಯಕಾರಿ ಸ್ಥಳಗಳಲ್ಲಿ ಇಳಿಯದಂತೆ ಎಚ್ಚರಿಸಿದ ಲೈಫ್‌ಗಾರ್ಡ್ಗಳ ಮೇಲೆ ಹಲ್ಲೆ ನಡೆಸಿದ ಹಲವು ಘಟನೆಗಳು ನಡೆದಿವೆ. ಹೀಗಾಗಿ ಪ್ರವಾಸಿರು ಅರ್ಥ ಮಾಡಿಕೊಂಡು ವರ್ತನೆ ಮಾಡಬೇಕು ಎನ್ನುತ್ತಾರೆ ಇಲ್ಲಿನ ಸಾರ್ವಜನಿಕರು. ಒಟ್ಟಿನಲ್ಲಿ ಮೋಜು ಮಸ್ತಿಗೆ ಬರುವ ಪ್ರವಾಸಿಗರು ಲೈಪ್ ಗಾಡ್೯ಗಳ ಮಾತು ಕೇಳದೆ ಸಮುದ್ರಕ್ಕೆ ಇಳಿದು ತಮ್ಮ ಪ್ರಾಣವನ್ನ ಕಳೆದುಕೊಳ್ಳುತ್ತಿದ್ದಾರೆ.