ನ. 14 ಕ್ಕೆ ಅದ್ದೂರಿಯಾಗಿ ನಡೆಯಲಿದೆ ಕೊಮಾರಪಂಥ ಹೊಂಡೆಯಾಟ ಉತ್ಸವ


ಅಂಕೋಲಾ : ಕೊಮಾರಪಂಥ‌ ಸಮಾಜದ ಸಾಂಪ್ರದಾಯಿಕ ಆಚರಣೆಯಾದ ಹೊಂಡೆಯಾಟವು ಈ ವರ್ಷ ನವೆಂಬರ 14 ರಂದು ವಿಶಿಷ್ಠವಾಗಿ ಹಾಗೂ ಅದ್ದೂರಿಯಾಗಿ ಆಚರಣೆಯಾಗಲಿದೆ ಎಂದು ಹೊಂಡೆಯಾಟ ಉತ್ಸವ ಸಮಿತಿ ಅಧ್ಯಕ್ಷ ಸಂಜಯ ಮನೋಹರ ನಾಯ್ಕ ಹೇಳಿದರು. ಪಟ್ಟಣದ ಶ್ರೀ ವೆಂಕಟರಮಣ ದೇವಸ್ಥಾನದ ಸಭಾಭವನದಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದರು. ಅಖಿಲ ಕ್ಷತ್ರೀಯ ಕೋಮಾರಪಂಥ ಹೊಂಡೆಯಾಟ ಉತ್ಸವ ಸಮಿತಿಯಿಂದ ದೀಪಾವಳಿ ಪ್ರಯುಕ್ತ ಬಲಿಪಾಡ್ಯದ ದಿನ ನವೆಂಬರ 14 ರಂದು ನಡೆಯುವ  ಸಾಂಪ್ರದಾಯಿಕ ಹೊಂಡೆಯಾಟ ಮತ್ತು ಶೋಭಾಯಾತ್ರೆ ಅತ್ಯಂತ ವಿಜ್ರಂಭಣೆಯಿಂದ ನಡೆಯಲಿದೆ. ದೀಪಾವಳಿಯ ಪ್ರಯುಕ್ತ ಪುರಾತನ ಯುದ್ಧಕಲೆಯ ಪ್ರತೀಕವಾಗಿ ಈ ಹೊಂಡೆಯಾಟವನ್ನು ಕೊಮಾರಪಂಥ ಸಮಾಜದವರು ಸಾಂಪ್ರದಾಯಿಕವಾಗಿ ಆಚರಿಸುತ್ತ ಬಂದಿದ್ದು ಸಮಾಜದ ಹೊಂಡೆಯಾಟ ಉತ್ಸವಕ್ಕೆ ಎಲ್ಲ ಸಮಾಜದವರೂ ಬಂದು ಸಹಕರಿಸಿ ಯಶಸ್ವಿಗೊಳಿಸಬೇಕಾಗಿ ಕೋರಿದರು. ಹೊಂಡೆಯಾಟವು ಒಂದು ಸೌಹಾರ್ದಯುತ ಆಟವಾಗಿದ್ದು ಹಿಂದೆ ರಾಜಮಹಾರಾಜರ ಕಾಲದಲ್ಲಿ ಸೈನಿಕರಾಗಿ ಯುದ್ಧದಲ್ಲಿ ಪಾಲ್ಗೊಂಡಿದ್ದರ ದ್ಯೋತಕವಾಗಿ ಹೊಂಡೆಯಾಟವನ್ನು ಆಡಲಾಗುತ್ತಿದೆ. ಇದರಲ್ಲಿ ಸೋಲು ಗೆಲುವು ಮುಖ್ಯವಲ್ಲ. ಭಾಗವಹಿಸುವ ತಂಡಗಳಿಗೆ ದೇವರ ಪ್ರಸಾದ ನೀಡಿ ಗೌರವಿಸುವುದೇ ಆಟದ ಮುಖ್ಯ ಧ್ಯೇಯ ಎಂದರು.
ವಿಜಯಕುಮಾರ ವ್ಹಾಯ್ ನಾಯ್ಕ ಮಾತನಾಡಿ ಹೊಂಡೆಯಾಟವನ್ನು ಆಕರ್ಷಣೀಯವನ್ನಾಗಿಸಲು ಹೊರಜಿಲ್ಲೆಗಳಿಂದ ವಿಶೇಷ ಸ್ತಬ್ದಚಿತ್ರಗಳನ್ನು ತರಿಸಿ ಭವ್ಯ ಮೆರವಣಿಗೆ ನಡೆಸಲಾಗುವದು ಎಂದರು. ಹಲವು ದಶಕಗಳಿಂದ ಹೊಂಡೆಯಾಟವನ್ನು ನಡೆಸಿಕೊಂಡು ಬರುತ್ತಿದ್ದು ಇದನ್ನು ಇನ್ನೂ ಅದ್ದೂರಿಯಾಗಿ ಆಚರಿಸಲು ಉತ್ಸವ ಸಮಿತಿಯನ್ನು ರಚಿಸಲಾಗಿದೆ. ಕಳೆದ ವರ್ಷಕ್ಕಿಂತ ಈ ಸಲ ಹೊಂಡೆಯಾಟ ಮತ್ತು ಶೋಭಾಯಾತ್ರೆಯು ವಿಶೇಷವಾಗಿರಲಿದೆ. ಅಂದು 4 ಗಂಟೆಗೆ ಕುಂಬಾರಕೇರಿಯ ತಂಡ ಕಳಸ ದೇವಸ್ಥಾನದಿಂದ ಹಾಗೂ ಹೊನ್ನೇಕೇರಿ ತಂಡ ಶ್ರೀ ಶಾಂತಾದುರ್ಗಾ ದೇವಸ್ಥಾನದಿಂದ ಹೊರಟು ಪಟ್ಟಣದ ಮುಖ್ಯರಸ್ತೆಯಲ್ಲಿ ಅಲ್ಲಲ್ಲಿ ನಿಂತು ಕವಣೆಯಲ್ಲಿ ಹಿಂಡಲಕಾಯಿಯನ್ನಿಟ್ಟು ಎದರು ಬದುರು ತಂಡಕ್ಕೆ ಗುರಿಯಿಟ್ಟು ಹೊಡೆಯುತ್ತ ಸಾಗುವರು. ನಂತರ ಎರಡೂ ತಂಡಗಳು ಶ್ರೀ ವೆಂಕಟರಮಣ ದೇವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸಿದ ನಂತರ ಭವ್ಯವಾದ ಶೋಭಾಯಾತ್ರೆಯನ್ನು ಆಯೋಜಿಸಲಾಗಿದೆ ಎಂದರು. ಉತ್ಸವ ಸಮಿತಿಯ ಕಾರ್ಯದರ್ಶಿ ಗಣೇಶ ಚಿನ್ನಾ ನಾಯ್ಕ ವಂದಿಸಿದರು.
ಸುದ್ಧಿಗೋಷ್ಠಿಯಲ್ಲಿ ಅಖಿಲ ಕೊಮಾರಪಂಥ ಹೊಂಡೆಯಾಟ ಉತ್ಸವ ಸಮಿತಿಯ ಅಧ್ಯಕ್ಷ ಕಾರ್ತಿಕ ನಾಯ್ಕ, ಪ್ರಧಾನಕಾರ್ಯದರ್ಶಿ ಶ್ರೀನಿವಾಸ ಎಲ್ ನಾಯ್ಕ (ಅಪ್ಪು), ವಿಕ್ರಮ ಪಂತ್, ಸೋಮೇಶ್ವರ ನಾಯ್ಕ, ಜಾನು ನಾಯ್ಕ, ರಾಮದಾಸ ನಾಯ್ಕ, ರಾಜು ನಾಯ್ಕ, ದೀಪಕ ನಾಯ್ಕ, ದೇವರಾಜ್ ನಾಯ್ಕ, ರಜತಕುಮಾರ ನಾಯ್ಕ, ಅಶೋಕ ನಾಯ್ಕ, ಕುಮಾರ ನಾಯ್ಕ, ರಮಾಕಾಂತ ನಾಯ್ಕ, ಅಮರ ನಾಯ್ಕ, ಶ್ರೀನಿವಾಸ ರಾಮನಾಥಕರ, ನಾಗೇಂದ್ರ ನಾಯ್ಕ, ದೀಪಕ ನಾಯ್ಕ, ರತನ ನಾಯ್ಕ ಇದ್ದರು.