ಸಿದ್ದಾಪುರ : ತಾಲೂಕಿನಲ್ಲಿ ರೈತರು ಭೂಮಿ ಹುಣ್ಣಿಮೆ ಹಬ್ಬವನ್ನು ಸಡಗರ ಹಾಗೂ ಸಂಭ್ರಮದಿಂದ ಆಚರಿಸಿದರು. ರೈತರು ತಮ್ಮ ತೋಟ ಹಾಗೂ ಗದ್ದೆಗಳಲ್ಲಿ ವಿವಿಧ ಬಗೆಯ ಹೂವು ತಳಿರು ತೋರಣಗಳಿಂದ ಸಿಂಗರಿಸಿ ಭತ್ತದ ಗಿಡ ಹಾಗೂ ಅಡಿಕೆಯ ಮರಕ್ಕೆ ಅಲಂಕಾರ ಮಾಡಿ ಕಡುಬು ಕಜ್ಜಾಯ ಬಗೆ ಬಗೆಯ ಸಿಹಿ ಖಾದ್ಯಗಳ ನೈವೇದ್ಯ ಮಾಡಿ ಕಾಯಿ ಒಡೆದು ಭೂಮಿ ತಾಯಿಯ ಸೀಮಂತ ಹಬ್ಬವಾದ ಭೂಮಿ ಹುಣ್ಣಿಮೆಯನ್ನ ವಿಶಿಷ್ಟ ರೀತಿಯಲ್ಲಿ ಆಚರಿಸಿದರು.
ಸೀಗೆ ಹುಣ್ಣಿಮೆ ದಿನದಂದು ಆಚರಿಸುವ ಈ ಹಬ್ಬವನ್ನು ರೈತರು ಅತಿ ವಿಶೇಷ ಹಾಗೂ ವಿಜೃಂಭಣೆಯಿಂದ ಆಚರಿಸುತ್ತಾ ಬಂದಿರುವುದು ಸಂಪ್ರದಾಯವಾಗಿದೆ. ಭೂಮಿತಾಯಿಗೆ ಪೂಜೆ ಸಲ್ಲಿಸಿದ ನಂತರ ನೈವೇದ್ಯ ಅರ್ಪಿಸಿದ ಎಡೆಯನ್ನ ಕಾಗೆಗಳಿಗೆ ಇಡಲಾಗುತ್ತದೆ. ಹೊಲದಲ್ಲಿ ಪೂಜೆ ಆದ ಮೇಲೆ ಮನೆಯಲ್ಲಿನ ದೇವರಿಗೆ ಪೂಜೆ ಮಾಡಿ ನೈವೇದ್ಯವನ್ನ ಆಕಳಿಗೆ ನೀಡಿ ಹಬ್ಬವನ್ನು ಆಚರಿಸುವ ಪದ್ಧತಿ ಮಲೆನಾಡು ಭಾಗದಲ್ಲಿ ಕಂಡು ಬರುತ್ತದೆ.