ಅದ್ದೂರಿಯಾಗಿ ಜರುಗಿದ ಅವರ್ಸಾ ದುರ್ಗಾದೇವಿ ವಿಸರ್ಜನಾ ಮೆರವಣಿಗೆ

ಅಂಕೋಲಾ: ಅವರ್ಸಾ ಸಾರ್ವಜನಿಕ ದಸರಾ ಉತ್ಸವದ ಪ್ರಯುಕ್ತ ನಡೆದ ದುರ್ಗಾದೇವಿ ವಿಗ್ರಹ ವಿಸರ್ಜನಾ ಮೆರವಣಿಗೆಯಲ್ಲಿ ಸ್ತಬ್ದ ಚಿತ್ರಗಳು ಜನಮನ ರಂಜಿಸಿದವು.

ಮೆರವಣಿಗೆಯಲ್ಲಿ ಹನುಮಂತನ ಹೆಗಲೇರಿದ ಶ್ರೀರಾಮಚಂದ್ರ ರಾವಣನನ್ನು ಸಂಹರಿಸುವದು, ರಾಧಾ ಕೃಷ್ಣ ತೂಗುಯ್ಯಾಲೆಯಲ್ಲಿ ತೂಗುವದು, ತ್ರಿಶೂಲದ ಮೇಲೆ ನಿಂತು ರಾಕ್ಷಸನ ಸಂಹರಿಸುವ ದುರ್ಗೆ, ಆಗಸದಲ್ಲಿ ತೇಲುವ ಕರಾಟೆ, ಕಾಂತಾರ ದೃಶ್ಯಗಳ ಸ್ತಬ್ಧಚಿತ್ರಗಳು ಈಸಲದ ವಿಶೇಷ ಆಕರ್ಷಣೆಯಾಗಿದ್ದವು.
ಪ್ರತಿವರ್ಷ ಅವರ್ಸಾದಲ್ಲಿ ನಡೆಯುವ ದಸರಾ ಉತ್ಸವ ವಿಶೇಷವಾಗಿ ಆಚರಣೆಗೊಂಡು ವಿಸರ್ಜನಾ ಮೆರವಣಿಗೆಯನ್ನು ನೋಡಲು ಸಾವಿರಾರು ಜನ ಬರುತ್ತಾರೆ. ರಾಷ್ಟ್ರೀಯ ಹೆದ್ದಾರಿಯಲ್ಲಿ ಸಾಗಿ ಹಟ್ಟಿಕೇರಿ ಪಾಂಡುಹೊಳೆಯವರೆಗೆ ರಸ್ತೆಯ ಇಕ್ಕೆಲಗಳಲ್ಲಿ ಜನಸಾಗರ ಸೇರುತ್ತದೆ. ಪೊಲೀಸ್ ಸಿಬ್ಬಂದಿಗಳೂ ಅಷ್ಟೇ ಅಚ್ಚುಕಟ್ಟಾಗಿ ಕರ್ತವ್ಯ ನಿರ್ವಹಿಸಿ ಸುಗಮ ಸಂಚಾರಕ್ಕೂ ಅನುವು ಮಾಡಿ ಕೊಡುತ್ತಾರೆ. ಉತ್ತಮ ಸ್ತಬ್ದಚಿತ್ರಗಳಿಗೆ ಬಹುಮಾನನೀಡಲಾಗುತ್ತದೆ.
ಘಟಸ್ಥಾಪನೆಯಂದು ಪ್ರತಿಷ್ಠಾಪಿಸಲ್ಪಡುವ ಶ್ರೀ ದುರ್ಗಾದೇವಿಯನ್ನು ದಸರಾ ಸಂಪನ್ನಗೊಳ್ಳುವವರೆಗೆ ಪ್ರತೀದಿನ ಸಾರ್ವಜನಿಕರಿಂದ ಪೂಜೆ ಪುರಸ್ಕಾರಗಳು ನಡೆದಿದ್ದವು. ಸೋಮವಾರ ವಿಜ್ರಂಭಣೆಯಿಂದ ಮಹಾಪೂಜೆ ನಡೆದು ಮಂಗಳವಾರ ಮದ್ಯಾಹ್ನದ ನಂತರ ವಿಸರ್ಜನಾ ಮೆರವಣಿಗೆಯನ್ನು ನಡೆಸಲಾಯಿತು.