ಸಂಭ್ರಮ, ಸಡಗರದಿಂದ ನಡೆದ ಶ್ರೀ.ಕ್ಷೇತ್ರ ದಾಂಡೇಲಪ್ಪ ಜಾತ್ರೆ

ದಾಂಡೇಲಿ : ತಾಲೂಕಿನ ಆರಾಧ್ಯ ದೇವರಾದ ಸತ್ಪುರುಷ ಶ್ರೀ.ದಾಂಡೇಲಪ್ಪ ಜಾತ್ರೆ ಸಂಭ್ರಮ ಸಡಗರದಿಂದ ಇಂದು ಮಂಗಳವಾರ ಜರುಗಿತು.ಮಂಗಳವಾರ ಬೆಳಿಗ್ಗೆ ನಗರದ ಮಿರಾಶಿ ಗಲ್ಲಿಯಲ್ಲಿರುವ ಮಿರಾಶಿ ಮನೆತನದಿಂದ ಶ್ರೀ ದಾಂಡೇಲಪ್ಪ ಸನ್ನಿಧಿಯವರೆಗೆ ಪಲ್ಲಕ್ಕಿ ಉತ್ಸವವು ನಡೆದು ನಂತರ ಜಾತ್ರೋತ್ಸವ ಕಾರ್ಯಕ್ರಮಕ್ಕೆ ಚಾಲನೆಯನ್ನು ನೀಡಲಾಯಿತು. ಶ್ರೀ ದಾಂಡೇಲಪ್ಪ ಜಾತ್ರೆಗೆ ಲಕ್ಷಾಂತರ ಭಕ್ತಾಭಿಮಾನಿಗಳು ಆಗಮಿಸಿ ಶ್ರೀ. ಸ್ವಾಮಿಯ ದರ್ಶನವನ್ನು ಪಡೆದರು.

ನಗರದ ಹಳಿಯಾಳ ರಸ್ತೆಯಿಂದ ಶ್ರೀ ದಾಂಡೇಲಪ್ಪನ ಸನ್ನಿಧಿಯವರೆಗೆ ರಸ್ತೆಯ ಇಕ್ಕೆಲಗಳಲ್ಲಿ ಅಂಗಡಿ ಮುಗ್ಗಟ್ಟುಗಳು ಭರ್ಜರಿ ವ್ಯಾಪಾರದ ಭರಾಟೆಯಲ್ಲಿ ತೊಡಗಿದ್ದವು. ಭಕ್ತ ಜನರಿಗೆ ಅಲ್ಲಲ್ಲಿ ಮಜ್ಜಿಗೆ, ನೀರು ವಿತರಣೆಯ ಜೊತೆಗೆ ಶ್ರೀ ಗಜಾನನ ಯುವಕ ಮಂಡಳದಿಂದ ಸಾರ್ವಜನಿಕ ಅನ್ನಸಂತರ್ಪಣೆಯನ್ನು ಹಮ್ಮಿಕೊಳ್ಳಲಾಗಿತ್ತು.

ಡಿವೈಎಸ್ಪಿ ಶಿವಾನಂದ್ ಕಟಗಿ ಅವರ ನೇತೃತ್ವದಲ್ಲಿ ವಿಶೇಷ ಭದ್ರತೆಗೆ ಅಗತ್ಯ ಕ್ರಮವನ್ನು ಕೈಗೊಳ್ಳಲಾಗಿತ್ತು. ದಾಂಡೇಲಿ ತಾಲೂಕಾಡಳಿತ, ನಗರಾಡಳಿತ, ಆಲೂರು ಗ್ರಾಮ ಪಂಚಾಯತ್ ಮತ್ತು ವೆಸ್ಟ್ ಕೋಸ್ಟ್ ಕಾಗದ ಕಾರ್ಖಾನೆಯ ಸಹಕಾರದಲ್ಲಿ ಮತ್ತು ಜಾತ್ರೋತ್ಸವ ಸಮಿತಿಯ ನೇತೃತ್ವದಲ್ಲಿ ಜಾತ್ರಾ‌ ಮಹೋತ್ಸವವು ಸಂಭ್ರಮಾ ಸಡಗರದಿಂದ ಜರುಗಿತು.