ಯಲ್ಲಾಪುರ: ಕಳೆದ ವಿಧಾನಸಭಾ ಚುನಾವಣೆಯಲ್ಲಿ ಪಕ್ಷ ವಿರೋಧಿ ಚಟುವಟಿಕೆ ಮಾಡಿರುವ ಹಿನ್ನೆಲೆಯಲ್ಲಿ ಪಕ್ಷದ ಹುದ್ದೆಯಿಂದ ತೆಗೆದು ಹಾಕಲ್ಪಟ್ಟವರನ್ನು, ಅದೇ ಹುದ್ದೆಗೆ ಮರುನೇಮಕ ಮಾಡಿರುವ ಬಿಜೆಪಿಯ ಕ್ರಮವನ್ನು ಹೆಬ್ಬಾರ ಅಭಿಮಾನಿ ಬಳಗದ ಪ.ಪಂ ಸದಸ್ಯರು ಖಂಡಿಸಿದ್ದಾರೆ. ಈ ಕುರಿತು ಮಂಗಳವಾರ ಪತ್ರಕರ್ತರೊಂದಿಗೆ ಮಾತನಾಡಿದ ಪ.ಪಂ ಸದಸ್ಯ ಸತೀಶ ನಾಯ್ಕ, ಪಕ್ಷ ವಿರೋಧಿ ಚಟುವಟಿಕೆ ನಡೆಸಿದವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಶಾಸಕ ಹೆಬ್ಬಾರ್ ಪಕ್ಷಕ್ಕೆ ದೂರಿದ ಹಿನ್ನೆಲೆಯಲ್ಲಿ ಪಕ್ಷದ ವಿವಿಧ ಹುದ್ದೆಗಳಲ್ಲಿದ್ದ ಐದು ಜನರನ್ನು ಹುದ್ದೆಯಿಂದ ತೆಗೆಯಲಾಗಿತ್ತು. ಈಗ ಏಕಾಏಕಿ ಶಾಸಕರ ಗಮನಕ್ಕೆ ತರದೇ ಅದೇ ಹುದ್ದೆಗಳಿಗೆ ನೇಮಕ ಮಾಡಿಕೊಂಡಿರುವ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದರು. ಶಿರಸಿ ಕ್ಷೇತ್ರದಲ್ಲಿ ಶಿಸ್ತು ಕ್ರಮಕ್ಕೆ ಗುರಿಯಾದವರನ್ನು ಮರು ನೇಮಕ ಮಾಡಿಲ್ಲ. ಯಲ್ಲಾಪುರಕ್ಕೆ ಮಾತ್ರ ಈ ಆದೇಶ ಮಾಡಿ ಶಾಸಕರಿಗೆ ಅವಮಾನ ಮಾಡಿದ್ದಾರೆ. ಒಂದು ಕಣ್ಣಿಗೆ ಸುಣ್ಣ, ಒಂದು ಕಣ್ಣಿಗೆ ಬೆಣ್ಣೆ ಎಂಬ ತಾರತಮ್ಯ ಏಕೆ ಎಂದು ಪ್ರಶ್ನಿಸಿದರು.
ಪ.ಪಂ ಸದಸ್ಯೆ ಸುನಂದಾ ದಾಸ್ ಮಾತನಾಡಿ, ಶಾಸಕರು ಹಾಗೂ ಅವರು ಬೆಂಬಲಿಗರಾದ ನಾವು ಬಿಜೆಪಿಯಲ್ಲಿ ನಿಷ್ಠೆ, ಪ್ರಾಮಾಣಿಕತೆಯಿಂದ ತೊಡಗಿಸಿಕೊಂಡಿದ್ದೇವೆ. ಪಕ್ಷದವರು ನಮ್ಮನ್ನು ವಿಶ್ವಾಸಕ್ಕೆ ತೆಗೆದುಕೊಂಡಿಲ್ಲ. ಚುನಾವಣೆಯಲ್ಲಿ ಪಲ್ಷ ವಿರೋಧಿ ಚಟುವಟಿಕೆ ಮಾಡಿದವರಿಗೆ ಮತ್ತೆ ಮಣೆ ಹಾಕಲಾಗಿದೆ. ಲೋಕಸಭಾ ಚುನಾವಣೆಯಲ್ಲೂ ಪಕ್ಷ ವಿರೋಧಿ ಚಟುವಟಿಕೆಗೆ ಪ್ರೋತ್ಸಾಹ ನೀಡಿದಂತಾಗುತ್ತದೆ ಎಂದರು.
ಶಿಸ್ತಿನ ಪಕ್ಷವಾದ ಬಿಜೆಪಿಯಲ್ಲಿ ಅಶಿಸ್ತು ಮಾಡಿದವರಿಗೆ ಕ್ರಮ ಇಲ್ಲದಿರುವುದು ಪಕ್ಷದ ಮೂಲ ಸಿದ್ಧಾಂತವನ್ನು ಅಣಕಿಸುವಂತಾಗಿದೆ ಎಂದರು.
ಪ.ಪಂ ಸದಸ್ಯರಾದ ಅಮಿತ್ ಅಂಗಡಿ, ಹಲೀಮಾ ಕಕ್ಕೇರಿ, ಪ್ರಶಾಂತ ತಳವಾರ, ಗೀತಾ ದೇಶಭಂಡಾರಿ, ಮಹಮ್ಮದ್ ಅಲಿ ಇದ್ದರು.