ಯಲ್ಲಾಪುರ: ಕಾಲೇಜಿನಲ್ಲಿ ಪ್ರಾಚಾರ್ಯರ ಸರ್ವಾಧಿಕಾರಿ ಧೋರಣೆಯನ್ನು ಖಂಡಿಸಿ ,ತಕ್ಷಣ ಅವರನ್ನು ವರ್ಗಾವಣೆ ಮಾಡುವಂತೆ ಆಗ್ರಹ

ಯಲ್ಲಾಪುರ: ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಪ್ರಾಚಾರ್ಯರ ಸರ್ವಾಧಿಕಾರಿ ಧೋರಣೆಯನ್ನು ಖಂಡಿಸಿ ಮತ್ತು ತಕ್ಷಣ ಅವರನ್ನು ವರ್ಗಾವಣೆ ಮಾಡಬೇಕೆಂದು ಆಗ್ರಹಿಸಿ ಕಾಲೇಜಿನಲ್ಲಿ ವಿದ್ಯಾರ್ಥಿಗಳು ತರಗತಿ ಬಹಿಷ್ಕರಿಸಿ ಧರಣಿ ನಡೆಸಿದರು. ನಂತರ ತಹಸೀಲ್ದಾರ ಎಂ.ಗುರುರಾಜ ಅವರ ಮೂಲಕ ಉನ್ನತ ಶಿಕ್ಷಣ ಸಚಿವರಿಗೆ ವಿದ್ಯಾರ್ಥಿಗಳು ಮನವಿ ಸಲ್ಲಿಸಿದರು.
ವಿದ್ಯಾರ್ಥಿಗಳು ಎನ್.ಇ.ಪಿ ಯ ನಿಯಮದಂತೆ ಆಯ್ಕೆಯ ವಿಷಯವನ್ನು ಆಯ್ಕೆ ಮಾಡಿಕೊಳ್ಳುವುದಕ್ಕೆ ವಿರೋದ ಮಾಡುತ್ತಾರೆ. ಕೆಲವು ವಿದ್ಯಾರ್ಥಿಗಳನ್ನು ಉದ್ದೇಶ ಪೂರ್ವಕವಾಗಿ ಗುರಿಯಾಗಿಸಿಕೊಂಡು ಕಣ್ಣೀರು ಹಾಕಿಸುತ್ತಾರೆ. ಗ್ರಂಥಾಲಯದ ಪುಸ್ತಕಗಳನ್ನು ನೀಡಲು ವಿಳಂಬ ಮಾಡುತ್ತಿದ್ದಾರೆ. ಹಿರಿಯ ವಿದ್ಯಾರ್ಥಿಗಳಿಂದ ಪುಸ್ತಕದ ಬಗ್ಗೆ ದಂಡ ವಸೂಲಿ ಮಾಡಿ ಯಾವುದೇ ರಶೀದಿ ನೀಡಿಲ್ಲ. ಎಂ.ಕಾಂ ಸೆಮಿಸ್ಟರ್ ಪರೀಕ್ಷೆಯ ಸಂದರ್ಭದಲ್ಲಿ ಪ್ರಾಂಶುಪಾಲರಾಗಿ ಗೈರಿದ್ದು, ಪರೀಕ್ಷೆ ಸರಿಯಾಗಿ ನಡೆಸುವಲ್ಲಿ ನಿಯಮಗಳನ್ನು ಕಡೆಗಣಿಸಿದ್ದಾರೆ. ವಿದ್ಯಾರ್ಥಿಗಳ ಬಸ್‌ಪಾಸ್ ಹಾಗೂ ಪ್ರವೇಶಾತಿಗೆ ಸಂಬಂಧಿಸಿದಂತೆ ಸಹಿ ನೀಡುವಲ್ಲಿ ವಿಳಂಬ ಮಾಡುತ್ತಿದ್ದಾರೆ. ಅವರನ್ನು ಬೇರೆಡೆ ವರ್ಗಾವಣೆ ಮಾಡಿ ಕಾಲೇಜಿನಲ್ಲಿ ಉತ್ತಮ ಶೈಕ್ಷಣಿಕ ವಾತಾವರಣ ನಿರ್ಮಾಣ ಮಾಡಬೇಕೆಂದು ಆಗ್ರಹಿಸಿದರು.
ಮನವಿ ಸ್ವೀಕರಿಸಿದ ತಹಶೀಲ್ದಾರ ಎಂ. ಗುರುರಾಜ ಸಂಬಂಧಿಸಿದವರನ್ನು ವಿಚಾರಿಸಿ, ಬೇಡಿಕೆ ಈಡೇರಿಸುವ ಭರವಸೆ ನೀಡಿದರು.

ಈ ಕುರಿತು ಪ್ರತಿಕ್ರಿಯಿಸಿದ ಪ್ರಾಂಶುಪಾಲೆ ಭವ್ಯಾ, ಯಾವುದೇ ವಿದ್ಯಾರ್ಥಿಗಳ ಹಾಗೂ ಉಪನ್ಯಾಸಕರ ಶೋಷಣೆ ಮಾಡಿಲ್ಲ. ಸರ್ಕಾರಿ ನಿಯಮಾವಳಿಯಂತೆ ಕಾನೂನಿನ ಕ್ರಮ ಕೈಗೊಂಡಿದ್ದು, ಕಾಲೇಜಿನಲ್ಲಿ ಶಿಸ್ತು ರೂಢಿಸಲು ಪ್ರಯತ್ನಿಸಿದ್ದೇನೆ. ಶಿಸ್ತು ಮೀರಿದಾಗ ವಿದ್ಯಾರ್ಥಿಗಳಿರಲೀ ಉಪನ್ಯಾಸಕರಿರಲಿ ಶಿಸ್ತು ಕ್ರಮ ಕೈಗೊಂಡಿದ್ದೇವೆ ಎಂದು ತಿಳಿಸಿದ ಅವರು ವಿದ್ಯಾರ್ಥಿ ಮತ್ತು ಉಪನ್ಯಾಸಕರ ಆರೋಪದ ಬಗ್ಗೆ ಪ್ರಶ್ನಿಸಿದಾಗ ಇದೆಲ್ಲಾ ನಿಮಗೆ ಬೇಕಾ ಎಂದು ಉಡಾಫೆಯ ಉತ್ತರ ನೀಡಿದರು. ಎಲ್ಲ ಆರೋಪಗಳಿಗೂ ಉತ್ತರ ಇದೆ ಇಲಾಖೆ ಅನುಮತಿ ನೀಡಿದರೆ ಮಾಹಿತಿ ನೀಡುತ್ತೇನೆಂದು ಜಾರಿಕೊಂಡರು. ದೂರವಾಣಿ ಕರೆಯನ್ನು ಸ್ವೀಕರಿಸದ ಕುರಿತು ಪ್ರಶ್ನಿಸಿದಾಗ ಯಾರೋ ಕೆಲವರು, ಪತ್ರಕರ್ತರು ಬೆದರಿಕೆ ಹಾಕಿದ್ದರಿಂದ ಯಾವುದೇ ಕರೆ ಸ್ವೀಕರಿಸಲಿಲ್ಲ ಎಂದು ಸಮಜಾಯಿಷಿ ನೀಡಿದರು.

ಕಳೆದ ೪ ವರ್ಷಗಳ ಹಿಂದೆ ಯಲ್ಲಾಪುರಕ್ಕೆ ವರ್ಗಾವಣೆಗೊಂಡು ನಿಯೋಜನೆ (ಡೆಪ್ಯುಟೇಷನ್) ಮೇಲೆ ಬೆರೆ ಕಡೆ ಕಾಲಕಳೆದಿದ್ದಾರೆ. ಇವರಿಗಿಂತಲೂ ಹಿರಿಯ ಉಪನ್ಯಾಸಕರು ಪ್ರಾಂಶುಪಾಲರಾಗಿದ್ದ ವೇಳೆ ಬೇರೆಡೆ ಕಳೆದು ಹಿರಿಯ ಉಪನ್ಯಾಸಕರು ವರ್ಗಾವಣೆಗೊಂಡ ನಂತರ ಯಲ್ಲಾಪುರಕ್ಕೆ ಬಂದು ಪ್ರಾಂಶುಪಾಲರ ಹುದ್ದೆಗೇರಿ, ಕಾಲೇಜಿನಲ್ಲಿ ವಿದ್ಯಾರ್ಥಿಗಳು ಮತ್ತು ಉಪನ್ಯಾಸಕರನ್ನು ಶೋಷಣೆ ಮಾಡಿ, ಸರ್ವಾಧಿಕಾರಿ ಧೋರಣೆ ತೋರಿ ಕಾಲೇಜಿನ ವ್ಯವಸ್ಥೆಯನ್ನು ಹದಗೆಡಿಸುತ್ತಿದ್ದಾರೆಂದು ವಿದ್ಯಾರ್ಥಿಗಳು ದೂರಿದ್ದಾರೆ.

( ಮಾದ್ಯಮದವರು ಉಪನ್ಯಾಸಕರೊಂದಿಗೆ ಮಾತನಾಡುತ್ತಿದ್ದಾಗ ಪ್ರಾಚಾರ್ಯರು ವೀಡಿಯೋ ಚಿತ್ರೀಕರಣ ಮಾಡತೊಡಗಿದ್ದು ಉಪನ್ಯಾಸಕರು ಆಕ್ಷೇಪ ವ್ಯಕ್ತಪಡಿಸಿದರು. ಆಗ ಅವರಿಬ್ಬರ ನಡುವೆ ಮಾತಿನ ಚಕಮಕಿ ನಡೆಯಿತು.)