ಯಲ್ಲಾಪುರ: ಕಲೆಯಲ್ಲಿ ಫಲಾಪೇಕ್ಷೆ ಇಲ್ಲದೇ ಸೇವೆ ಸಲ್ಲಿಸಿ, ನೈಪಥ್ಯಕ್ಕೆ ಸರಿದ ಕಲಾವಿದರನ್ನು ಗುರುತಿಸಿ, ಗೌರವಿಸುವ ಮೂಲಕ ಮುಂದಿನ ಪೀಳಿಗೆಯವರಿಗೆ ಕಲಾ ಸಂಪತ್ತನ್ನು ವರ್ಗಾಯಿಸುವ ಸಾಮಾಜಿಕ ಜವಾಬ್ದಾರಿಯನ್ನು ಕರ್ನಾಟಕ ಕಲಾ ಸನ್ನಿಧಿ ಸಂಸ್ಥೆ ನಿರ್ವಹಿಸುತ್ತಿದೆ ಎಂದು ಸಂಕಲ್ಪ ಸಂಸ್ಥೆ ಅಧ್ಯಕ್ಷ ಪ್ರಮೋದ ಹೆಗಡೆ ಹೇಳಿದರು.
ಅವರು ತಾಲೂಕಿನ ಅಣಲಗಾರ ಗೋಪಾಲಕೃಷ್ಣ ದೇವಸ್ಥಾನದಲ್ಲಿ ಕರ್ನಾಟಕ ಕಲಾ ಸನ್ನಿಧಿ ಸಂಸ್ಥೆಯಿಂದ ಹಮ್ಮಿಕೊಂಡಿದ್ದ ಹಿರಿಯ ಕಲಾವಿದರಿಗೆ ಗೌರವ ಸಮರ್ಪಣೆ ಮತ್ತು ಗಾನ ಸಂಜೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕಲಾವಿದರು ಕಲೆಯಲ್ಲಿ ತೊಡಗಿಸಿಕೊಂಡು, ಅದರ ಸತ್ವವನ್ನು ಸುತ್ತಮುತ್ತ ಪರಸರಿಸುತ್ತ ಸಾಂಸ್ಕೃತಿಕ ವಾತಾವರಣ ಸೃಷ್ಟಿಸುತ್ತಾರೆ. ಯಾವ ಸೌಲಭ್ಯ ಇಲ್ಲದ ಕಾಲದಲ್ಲಿ ಕಲಾರಾಧನೆಯ ಮಾಡಿಕೊಂಡು ಬಂದ 50 ಕಲಾವಿದರನ್ನು ಸಂದರ್ಶಿಸಿ, ಸಾಮಾಜಿಕ ಜಾಲತಾಣದಲ್ಲಿ ಲೇಖನವಾಗಿ ಪ್ರಕಟಿಸಿ, ಅವರ ಕಲಾ ಸೇವೆಯನ್ನು ಸಮಾಜಕ್ಕೆ ಪರಿಚಯಿಸಿದ್ದು ಸಾಮಾನ್ಯ ಕಾರ್ಯವಲ್ಲ ಎಂದರು.
ದೇವಸ್ಥಾನದ ಆಡಳಿತ ಮಂಡಳಿಯ ಅಧ್ಯಕ್ಷ ಎನ್ ಆರ್ ಭಟ್ಟ ಬಿದ್ರೆಪಾಲ ಕಾರ್ಯಕ್ರಮ ಉದ್ಘಾಟಿಸಿದರು.ಯಕ್ಷಗಾನ ಹಾಗೂ ತಾಳಮದ್ದಲೆ ಕ್ಷೇತ್ರದಲ್ಲಿ ದಶಕಗಳ ಕಾಲ ಸೇವೆ ಸಲ್ಲಿಸಿದ 42 ಕಲಾವಿದರನ್ನು ಗೌರವಿಸಲಾಯಿತು.
ತೇಲಂಗಾರ ಮೈತ್ರಿ ಕಲಾ ಬಳಗದ ಅಧ್ಯಕ್ಷ ಗಣಪತಿ ಕಂಚಿಪಾಲ, ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಕೆ.ಎಸ್.ಭಟ್ಟ ಆನಗೋಡ, ಕರ್ನಾಟಕ ಕಲಾ ಸನ್ನಿಧಿಯ ಅಧ್ಯಕ್ಷ ಶ್ರೀಧರ ಭಟ್ಟ ಅಣಲಗಾರ, ಖಜಾಂಚಿ ದಿನೇಶ ಭಟ್ಟ ಅಬ್ಬಿತೋಟ, ಕಾರ್ಯದರ್ಶಿ ದೀಪಕ ಭಟ್ಟ ಕುಂಕಿ, ಸಹಕಾರ್ಯದರ್ಶಿ ದಿನೇಶ ಗೌಡ, ಇದ್ದರು. ನಂತರ ಹಿರಿಯ ಕಲಾವಿದರಿಂದ ‘ಗಾನ ಸಂಜೆ’ ಕಾರ್ಯಕ್ರಮ ನಡೆಯಿತು.