ರಾಜ್ಯ ಸರಕಾರಿ ನೌಕರರ ಸಂಘ ಕುಮಟಾ ವತಿಯಿಂದ ನಿವೃತ್ತ ಸರ್ಕಾರಿ ನೌಕರರ ಸನ್ಮಾನ, ಪ್ರತಿಭಾ ಪುರಸ್ಕಾರ ಹಾಗೂ ವಾರ್ಷಿಕ ಸಾಮಾನ್ಯ ಸಭೆ ಕಾರ್ಯಕ್ರಮ

ಕುಮಟಾ:- ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ಕುಮಟಾ ತಾಲೂಕು ಶಾಖೆಯವರು ನಾದಶ್ರೀ ಕಲಾ ಕೇಂದ್ರದಲ್ಲಿ ಹಮ್ಮಿಕೊಂಡಿದ್ದ ತಾಲೂಕಾ ಮಟ್ಟದ ನಿವೃತ್ತ ಸರ್ಕಾರಿ ನೌಕರರ ಸನ್ಮಾನ, ಪ್ರತಿಭಾ ಪುರಸ್ಕಾರ ಹಾಗೂ ವಾರ್ಷಿಕ ಸಾಮಾನ್ಯ ಸಭೆ ಕಾರ್ಯಕ್ರಮವನ್ನು ಶಾಸಕ ದಿನಕರ ಶೆಟ್ಟಿ ಅವರು ಉದ್ಘಾಟಿಸಿದರು.

ನಂತರ ಮಾತನಾಡಿದ ಶಾಸಕರು, ಶಾಸಕಾಂಗ ಕಾರ್ಯಾಂಗ ಮತ್ತು ನ್ಯಾಯಾಂಗ ಇವು ಪ್ರಜಾಪ್ರಭುತ್ವದ ಮೂಲಾಧಾರಗಳಾಗಿವೆ. ಸರ್ಕಾರಿ ನೌಕರರು ಪ್ರಜಾ ಸೇವಕರಾಗಿ ಸಮರ್ಥವಾಗಿ ಕಾರ್ಯನಿರ್ವಹಿಸಿದರೆ ಮಾತ್ರ ಅಭಿವೃದ್ಧಿ ಸಾಧ್ಯ. ಸರ್ಕಾರದ ಯೋಜನೆಗಳನ್ನು ಕಾರ್ಯರೂಪಕ್ಕೆ ತರುವ ಮಹತ್ತರ ಕಾರ್ಯವನ್ನು ನಿರ್ವಹಿಸುವ ಜವಾಬ್ದಾರಿ ಸರ್ಕಾರಿ ನೌಕರರದ್ದಾಗಿದೆ. ಒಬ್ಬ ಸರ್ಕಾರಿ ನೌಕರ ತನ್ನ ಸೇವಾವಧಿಯಲ್ಲಿ ಉತ್ತಮ ಸೇವೆಸಲ್ಲಿಸಿದರೆ ಆತ ನಿವೃತ್ತಿಯಾದ ನಂತರವೂ ಜನರು ಆತನನ್ನು ಗೌರವಿಸಿತ್ತಾರೆ. ಇಂದು ಕುಮಟಾ ತಾಲೂಕು ನಿವೃತ್ತ ಸರ್ಕಾರಿ ನೌಕರರ ಸನ್ಮಾನ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ಸಂಘಟಿಸಿದ್ದೀರಿ. ಇದರಿಂದ ಎಲ್ಲ ಸರ್ಕಾರಿ ನೌಕರರಿಗೆ ಪ್ರೇರಣೆಯಾಗಲಿದೆ ಎಂದು ಹೇಳಿದರು.

ಸರ್ಕಾರಿ ನೌಕರರ ಸಂಘದ ತಾಲೂಕಾಧ್ಯಕ್ಷ ರಘುನಾಥ ಡಿ. ನಾಯ್ಕ್ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕುಮಟಾ ತಾ. ಪಂ. ಪ್ರಭಾರ ಕಾರ್ಯನಿರ್ವಹಣಾಧಿಕಾರಿ ನಾಗರತ್ನ ನಾಯಕ, ಕ್ಷೇತ್ರ ಶಿಕ್ಷಣಾಧಿಕಾರಿ ಆರ್. ಎಲ್. ಭಟ್, ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕಿ ಭಾರತಿ ಆಚಾರಿ, ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಮೋಹನ ಪಾಂಡು ನಾಯ್ಕ್, ಪಶು ವೈದ್ಯಾಧಿಕಾರಿ (ಆಡಳಿತ) ವಿ. ಕೆ. ಹೆಗಡೆ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಆನಂದು ಗಾಂವಕರ, ಅಕ್ಷರ ದಾಸೋಹದ ಸಹಾಯಕ ನಿರ್ದೇಶಕ ವಿನಾಯಕ ವೈದ್ಯ, ಸರ್ಕಾರಿ ನೌಕರರ ಸಂಘದ ರಾಜ್ಯ ಪರಿಷತ್ ಸದಸ್ಯ ಬೊಮ್ಮಯ್ಯ ನಾಯಕ, ಕುಮಟಾ ತಾಲೂಕು ಸರಕಾರಿ ನೌಕರರ ಸಂಘದ ಗೌರವಾಧ್ಯಕ್ಷ ರವೀಂದ್ರ ಭಟ್ ಸೂರಿ, ಉಪಾಧ್ಯಕ್ಷರುಗಳಾದ ಎಮ್. ಎಮ್. ಹೆಗಡೆ, ಮಂಜುನಾಥ ನಾಯ್ಕ್, ಭಾಗೀರಥಿ ನಾಯ್ಕ್, ಖಜಾಂಚಿ ಮುಕುಂದ ಮಡಿವಾಳ ಹಾಗೂ ಪದಾಧಿಕಾರಿಗಳು, ಸದಸ್ಯರು, ತಾಲೂಕಿನ ಎಲ್ಲ ಇಲಾಖಾ ನೌಕರರು ಉಪಸ್ಥಿತರಿದ್ದರು.