ಶ್ರೀ ಕ್ಷೇತ್ರ ಬಂಗಾರಮಕ್ಕಿಯಲ್ಲಿ,ಶರನ್ನವರಾತ್ರಿಯ ಪ್ರಯುಕ್ತ ಸಾಂಸ್ಕೃತಿಕ ಕಾರ್ಯಕ್ರಗಳ ಉದ್ಘಾಟನಾ ಸಮಾರಂಭ

ಹೊನ್ನಾವರ:ಶ್ರೀ ಕ್ಷೇತ್ರ ಬಂಗಾರಮಕ್ಕಿಯಲ್ಲಿ, ಶ್ರೀ ವೀರಾಂಜನೇಯ ಧಾರ್ಮಿಕ ಹಾಗೂ ದತ್ತಿ ಸಂಸ್ಥೆಯ ಅಡಿಯಲ್ಲಿ ಶರನ್ನವರಾತ್ರಿಯ ಪ್ರಯುಕ್ತ 9 ದಿನಗಳ ಕಾಲ ನಡೆಯುವ ಸಾಂಸ್ಕೃತಿಕ ಕಾರ್ಯಕ್ರಗಳ ಉದ್ಘಾಟನಾ ಸಮಾರಂಭ ರವಿವಾರ ಶ್ರೀ ವೀರಾಂಜನೇಯ ಸಭಾಭವನದಲ್ಲಿ ಅದ್ಧೂರಿಯಾಗಿ ನೆರವೇರಿತು.

ಕಾರ್ಯಕ್ರಮ ಉದ್ಘಾಟಿಸಿದ ಬೆಂಗಳೂರಿನ ಎಂ. ಆರ್. ಆರ್. ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಆಸ್ಪತ್ರೆ ಮೆಡಿಕಲ್ ಡೈರೆಕ್ಟರ್ ಹಾಗೂ ಸಿ. ಇ. ಓ. ಆಗಿರುವ ಡಾ|| ಚೇತನ್ ಆರ್ ಮಾತನಾಡಿ,ಆರೋಗ್ಯವೇ ಭಾಗ್ಯ ಎಂಬ ಮಾತಿನ ಮಹತ್ವವನ್ನು ವಿವರಿಸುತ್ತಾ, ಇಂದಿನ ಕಾಲಮಾನದಲ್ಲಿ ನಮ್ಮ ಆಹಾರಕ್ರಮ ಹಾಗೂ ಜೀವನಶೈಲಿಗಳಿಂದ ಆರೋಗ್ಯದ ಮೇಲಾಗುವ ಪರಿಣಾಮಗಳನ್ನು ವಿವರಿಸಿದರು, ಗಿಡಮೂಲಿಕೆಗಳಿಂದ ಸಮೃದ್ಧವಾದ ಮಲೆನಾಡಿನ ಮಹತ್ವವನ್ನು ವಿವರಿಸಿದರು.


ಹೊನ್ನಾವರ ಪಟ್ಟಣ ಪಂಚಾಯತ ಸದಸ್ಯ ಶಿವರಾಜ ಮೇಸ್ತ ,ಯಕ್ಷಗಾನ ಮಲೆನಾಡಿನ ಒಂದು ಹೆಮ್ಮೆಯಕಲೆ ಇದು ಉಳಿಯಬೇಕು, ಬೆಳೆಯಬೇಕು, ಅದಕ್ಕೆ ನಾವೆಲ್ಲರೂ ಸಹಕಾರ ನೀಡಬೇಕು ಎಂಬ ಕರೆ ನೀಡಿದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ ಅರವಿಂದ ಕರ್ಕಿಕೋಡಿ ಕನ್ನಡನಾಡಿನ ಸಾಂಸ್ಕೃತಿಕ ಕಲೆಗಳ ಜೊತೆಯಲ್ಲಿ, ಕನ್ನಡದ ಸಾಹಿತ್ಯವೂ ಕೂಡಾ ಉಳಿಯಬೇಕು.ಈ ನಿಟ್ಟಿನಲ್ಲಿ ಇನ್ನೂ ಹೆಚ್ಚಿನ ಕಾರ್ಯಗಳಾಗಬೇಕು ಎಂದು ಆಶಿಸಿದರು.
ದಿವ್ಯ ಸಾನಿಧ್ಯ ವಹಿಸಿದ್ದ ಶ್ರೀ ಮಾರುತಿ ಗುರೂಜಿಯವರು, ನಗು ಹಾಗೂ ಮನಸ್ಸಿನ ನೆಮ್ಮದಿ ನಮ್ಮ ಆರೋಗ್ಯವನ್ನು ವೃದ್ಧಿಸುತ್ತವೆ. ಇದಕ್ಕೆ ಯಕ್ಷಗಾನದಂತಹ ಕಲೆಗಳು ಸಹಕರಿಸುತ್ತವೆ.ಸಾಂಸ್ಕೃತಿಕ ಕಲೆಗಳ ಮಹತ್ವ ಹಾಗೂ ಅವುಗಳ ಮತ್ತು ಆರೋಗ್ಯಕರ ಜೀವನದ ನಡುವಿನ ಸಂಬಂಧವನ್ನು ವಿವರಿಸಿದರು.ಸಂಸ್ಥೆಯ ಆಡಳಿತಾಧಿಕಾರಿ ಮಂಜುನಾಥ ಎಮ್. ಎನ್ ಉಪಸ್ಥಿತರಿದ್ದರು.
ನಂತರ ‘ಸುದರ್ಶನ ವಿಜಯ’ ಯಕ್ಷಗಾನ ಪ್ರಸಂಗ ಪ್ರದರ್ಶನ ಯಶಸ್ವಿಯಾಗಿ ನಡೆಯಿತು.