ಜೋಯಿಡಾ : ಪರಿಸರ ಸೂಕ್ಷ್ಮ ವಲಯ ಜಾರಿ ಮಾಡುವ ಕುರಿತು ಸಚಿವ ಈಶ್ವರ ಖಂಡ್ರೆ ಅಧ್ಯಕ್ಷತೆಯ ಸಮಿತಿ ತೆಗೆದು ಕೊಂಡಿರುವ ನಿರ್ಧಾರ ಮತ್ತು ಇದರ ಕರಡು ಅಧಿಸೂಚನೆಯನ್ನು ವಿರೋಧಿಸಿ ಕಾಳಿ ಬ್ರಿಗೇಡ್ ವತಿಯಿಂದ ಸೋಮವಾರ ಜೋಯಿಡಾ ತಹಶೀಲ್ದಾರ್ ಶೈಲೇಶ್ ಪರಮಾನಂದ ಅವರ ಮೂಲಕ ಮುಖ್ಯಮಂತ್ರಿಗಳಿಗೆ & ಕೇಂದ್ರ ಪರಿಸರ ಸಚಿವಾಲಯಕ್ಕೆ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಕಾಳಿ ಬ್ರಿಗೇಡ್ ಮುಖ್ಯ ಸಂಚಾಲಕ ಸುನೀಲ ದೇಸಾಯಿ ಅವರು ಮಾತನಾಡಿ, ಸರ್ಕಾರಗಳು ಕಠಿಣ ಕಾನೂನುಗಳನ್ನು ಜಾರಿಗೆ ತರುವ ಮೂಲಕ ಈ ಭಾಗದ ಜನರ ಗಾಯದ ಮೇಲೆ ಬರೆ ಎಳೆಯುವ ಕಾರ್ಯಕ್ಕೆ ಮುಂದಾಗುತ್ತಿವೆ. ಇದನ್ನು ತಕ್ಷಣ ಕೈ ಬಿಟ್ಟು ಜನಪರ ಕಾರ್ಯಕ್ರಮಗಳನ್ನು ಅನುಷ್ಟಾನ ಮಾಡಬೇಕೆಂದು ಒತ್ತಾಯಿಸಿದರು.
ಅಣಶಿ ರಾಷ್ಟ್ರೀಯ ಉದ್ಯಾನ ಹಾಗೂ ದಾಂಡೇಲಿ ವನ್ಯಜೀವಿ ಧಾಮದಲ್ಲಿ 669.06 ಚ.ಕಿ.ಮೀ. ಪರಿಸರ ಸೂಕ್ಷ್ಮ ವಲಯ ಎಂದು ಪ್ರಸ್ತಾಪಿಸಿದ್ದು, ಅದರಲ್ಲಿ 448.81 ಚ.ಕಿ.ಮೀ. ಅರಣ್ಯ ಮತ್ತು 220.25 ಅರಣ್ಯೇತರ ಪ್ರದೇಶವಾಗಿದೆ. ಹಿಂದಿನ ಎಲ್ಲಾ ರಾಜ್ಯ ಸರ್ಕಾರಗಳು ಇದನ್ನು ನಿರಂತರವಾಗಿ ವಿರೋಧಿಸುತ್ತಾ ಬಂದಿವೆ. ಈಗಲೂ ರಾಜ್ಯ ಸರ್ಕಾರ ಇದನ್ನು ಜಾರಿಗೆ ಬರದಂತೆ ವಿರೋಧಿಸುವ ಮೂಲಕ ಜನರಿಗೆ ನ್ಯಾಯ ಕೊಡಿಸಬೇಕಾಗಿದೆ ಎಂದು ಸುನೀಲ್ ದೇಸಾಯಿ ಆಗ್ರಹಿಸಿದರು.
ಈ ಸಂದರ್ಭದಲ್ಲಿ ಕಾಳಿ ಬ್ರಿಗೇಡ್ ಮುಖ್ಯ ಸಮಿತಿ ಅಧ್ಯಕ್ಷ ಉಮೇಶ್ ವೇಳಿಪ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿನಯ್ ದೇಸಾಯಿ, ಜೋಯಿಡಾ ವ್ಯಾಪಾರಸ್ಥರ ಸಂಘದ ಅಧ್ಯಕ್ಷ ರಫೀಕ ಖಾಜಿ, ಪ್ರಮುಖರಾದ ಸತೀಶ್ ನಾಯ್ಕ, ಕಿರಣ ನಾಯ್ಕ, ನಾರಾಯಣ ಹೆಬ್ಬಾರ, ಪ್ರಭಾಕರ ನಾಯ್ಕ, ಸಮೀರ್ ಮುಜಾವರ, ಸಿಮಾಂವ ವೇಗಸ, ದಿನೇಶ ದೇಸಾಯಿ, ಬಸವಣ್ಣಯ್ಯ ಹಿರೇಮಠ, ಮಂಜುನಾಥ ಭಟ್, ಸದಾನಂದ ವೇಳಿಪ, ಸುಭಾಸ ವೇಳಿಪ, ನರೇಂದ್ರ ನಾಯ್ಕ, ಪ್ರಭಾಕರ ದೇಸಾಯಿ ಸೇರಿದಂತೆ ಸಾರ್ವಜನಿಕರು ಉಪಸ್ಥಿತರಿದ್ದರು.