ಮೋದಿ ಮತ್ತೊಮ್ಮೆ ದೇಶದ ಪ್ರಧಾನಿಯಾಗಬೇಕು- ಚಕ್ರವರ್ತಿ ಸೂಲಿಬೆಲೆ

ಅಂಕೋಲಾ : ನರೇಂದ್ರ ಮೋದಿ ಮತ್ತೊಮ್ಮೆ ದೇಶದ ಪ್ರಧಾನಮಂತ್ರಿಯಾಗಲು ಎಂದು ಹಾರೈಸಿ ಚಿಂತಕ ಚಕ್ರವರ್ತಿ ಸೂಲಿಬೆಲೆ ನೇತೃತ್ವದಲ್ಲಿ ಮಂಗಳವಾರ ಅಂಕೋಲಾ ತಾಲೂಕಿನಲ್ಲಿ ಹಲವೆಡೆ ನಮೋ ಬ್ರಿಗೇಡ್ ವತಿಯಿಂದ ಬೈಕ್ ಮೆರವಣಿಗೆ ನಡೆಸಲಾಯಿತು.
ಬೈಕ್ ಮೆರವಣಿಗೆ ಮೂಲಕ ತಾಲೂಕಿಗೆ ಆಗಮಿಸಿದ ಚಕ್ರವರ್ತಿ ಸೂಲಿಬೆಲೆ ಅವರನ್ನು ನಮೋ ಬ್ರಿಗೇಡ್ ಕಾರ್ಯಕರ್ತರು ಹಿಚ್ಕಡ ರಸ್ತೆ ಕ್ರಾಸ್ ಬಳಿ ಸ್ವಾಗತಿಸಿದರು. ನಂತರ ಬಾಸಗೋಡ ಬಿಜೆಪಿ ಕಾರ್ಯಕರ್ತ ದೇವಾನಂದ ಆಗೇರ ಮನೆಗೆ ತೆರಳಿ ಉಪಹಾರ ಸೇವಿಸಿದರು.
ಅಲ್ಲಿಂದ ಮೆರವಣಿಗೆ ಮೂಲಕ ಬೆಳಂಬಾರದ ಖ್ಯಾತ ನಾಟಿ ವೈದ್ಯ ಹನುಮಂತ ಗೌಡ ಅವರ ಮನೆ ಮತ್ತು ಅವರ ಆಸ್ಪತ್ರೆಗೆ ಭೇಟಿ ನೀಡಿ ಪಾರ್ಶ್ವವಾಯು ಮತ್ತು ಇತರೆ ಚಿಕಿತ್ಸೆಗಳ ಬಗ್ಗೆ ಮಾಹಿತಿ ಪಡೆದುಕೊಂಡರು. ಹನುಮಂತ ಗೌಡ ಅವರ ವಿಶೇಷ ಸೇವೆ ಮತ್ತು ಅವರ ಕುಟುಂಬದ ಸಾಮಾಜಿಕ ಕಳಕಳಿಯ ಬಗ್ಗೆ ಶ್ಲಾಘನೆ ವ್ಯಕ್ತಪಡಿಸಿದರು. ಹನುಮಂತ ಗೌಡರ ಕುಟುಂಬದವರು ಚಕ್ರವರ್ತಿ ಸೂಲಿಬೆಲೆ ಅವರಿಗೆ ಸನ್ಮಾನಿಸಿ ಗೌರವಿಸಿದರು.

ಬೆಳಂಬಾರದಲ್ಲಿ ಮುಕ್ತ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಚಕ್ರವರ್ತಿ ಸೂಲಿಬೆಲೆ, ಪ್ರಧಾನ ಮಂತ್ರಿ ನರೇಂದ್ರ ಮೋದಿ ದೇಶದ ಚುಕ್ಕಾಣಿ ಹಿಡಿದ ನಂತರ ಕ್ರಾಂತಿಕಾರಕ ಬದಲಾವಣೆಗಳು ಸಂಭವಿಸಿದೆ. ಕೋವಿಡ್ ಸಂದರ್ಭದಲ್ಲಿ ಅವರು ತೆಗೆದುಕೊಂಡ ನಿರ್ಧಾರ ಮತ್ತು ವಿಜ್ಞಾನಿಗಳಿಗೆ ನೀಡಿದ ಪ್ರೋತ್ಸಾಹ ಜಾಗತಿಕ ಮಟ್ಟದಲ್ಲಿ ಭಾರತಕ್ಕೆ ಮನ್ನಣೆ ದೊರಕಿಸಿ ಕೊಟ್ಟಿತು. ದೇಶದಲ್ಲಿ ರಾಮ ಮಂದಿರ ನಿರ್ಮಾಣಕ್ಕೆ 500 ವರ್ಷಗಳಿಂದ ಕಾದಿದ್ದೆವು. ಇಂದಿರಾ ಗಾಂಧಿ ರಾಜೀವ್ ಗಾಂಧಿ ಸೇರಿದಂತೆ ಇತರ ಪ್ರಧಾನಿಗಳಿಂದ ಅದು ಸಾಧ್ಯವಾಗಿರಲಿಲ್ಲ. ಅದರ ನಿರ್ಮಾಣಕ್ಕೆ ಮೋದಿಯೇ ಬರಬೇಕಾಯಿತು. ಮಾಜಿ ಪ್ರಧಾನಿ ನೆಹರು ಅವರು ಹಿಂದೂ ದೇವಾಲಯಗಳನ್ನು ವಿರೋಧಿಸುತ್ತಿದ್ದರು. ನರೇಂದ್ರ ಮೋದಿಯವರಿಂದಾಗಿ ಜಗತ್ತಿನಲ್ಲಿ ಅತಿ ಹೆಚ್ಚು ಡಿಜಿಟಲ್ ವ್ಯವಹಾರ ನಡೆಸುವ ರಾಷ್ಟ್ರವಾಗಿ ಭಾರತ ಗುರುತಿಸಿಕೊಂಡಿದೆ ಎಂದರು.

ಹನುಮಂತ ಗೌಡರ ನಾಟಿ ಚಿಕಿತ್ಸಾಲಯವನ್ನು ವೀಕ್ಷಿಸಿ ನಂತರ ಮೆರವಣಿಗೆ ಮೂಲಕ ತೆಂಕಣಕೇರಿ ಮಾರ್ಗವಾಗಿ
ಬೈಕ್ ಮೆರವಣಿಗೆ ಮೂಲಕ ತೆರಳಿ ಅಂಕೋಲಾ ಪಟ್ಟಣದ ಪಿಎಂ ಪ್ರೌಢಶಾಲೆಗೆ ಭೇಟಿ ನೀಡಿ ಶಿಕ್ಷಕರೊಂದಿಗೆ ಚರ್ಚಿಸಿದರು. ಶಿಕ್ಷಣ ಸಂಸ್ಥೆಗಳನ್ನು ಕಟ್ಟಿ ಬೆಳೆಸಿದ ದಿನಕರ ದೇಸಾಯಿ ಅವರ ಬಗ್ಗೆ ವಿವರಿಸಿದ ಪಿಎಂ ಪ್ರೌಢಶಾಲೆಯ ಶಿಕ್ಷಕರು ಶಾಲಾ ವಿದ್ಯಾರ್ಥಿಗಳಿಗೆ ಸಹಾಯ ಮಾಡುವಂತೆ ಕೇಳಿಕೊಂಡರು. ಅದಕ್ಕೆ ಪ್ರತಿಕ್ರಿಯಿಸಿದ ಚಕ್ರವರ್ತಿ ಸೂಲಿಬೆಲೆ ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳಿಗೆ ವಿಶೇಷ ಕಲಿಕಾ ತಂತ್ರಾಂಶ ಒಳಗೊಂಡಿರುವ ಟ್ಯಾಬ್ ಗಳನ್ನು ನೀಡುವ ಕುರಿತು ಶೀಘ್ರದಲ್ಲಿಯೆ ಸ್ಪಂದಿಸಲಿದ್ದೇವೆ ಎಂದು ತಿಳಿಸಿದರು.
ಅಂಕೋಲಾ ಪಟ್ಟಣದ ಜೈ ಹಿಂದ್ ವೃತ್ತದ ಮೂಲಕ ಮುಂದೆ ಮೆರವಣಿಗೆ ಮೂಲಕ ಸಾಗಿ ಪದ್ಮಶ್ರೀ ಸುಕ್ರೀ ಗೌಡ ಮನೆಗೆ ತೆರಳಿ ಆಶೀರ್ವಾದ ಪಡೆದರು. ನರೇಂದ್ರ ಮೋದಿ ಮತ್ತೊಮ್ಮೆ ಈ ದೇಶದ ಪ್ರಧಾನಿಯಾಗುವಂತೆ ಹಾರೈಸಿ ಎಂದು ಕೇಳಿಕೊಂಡರು.
ಪದ್ಮಶ್ರೀ ಸುಕ್ರೀಗೌಡ ಮಾತನಾಡಿ, ನರೇಂದ್ರ ಮೋದಿಯವರು ದೇಶದ ಪ್ರಧಾನಿ ಆಗಬೇಕು ಎನ್ನುವುದು ನಮ್ಮೆಲ್ಲರ ಅಭಿಲಾಷೆ. ನಮ್ಮನ್ನು ನೋಡಲು ಅನುಕೂಲಕ್ಕೆ ಆಗಮಿಸಿದ ಅವರು ಮತ್ತೊಮ್ಮೆ ಇಲ್ಲಿಗೆ ಭೇಟಿ ನೀಡಲಿ. ಜೀವನದಲ್ಲಿ ಸಿರಿ ಸಂಪತ್ತು ಆರೋಗ್ಯ ಎಲ್ಲಕ್ಕಿಂತ ಜನರ ಪ್ರೀತಿ ಮುಖ್ಯವಾಗಿದೆ. ಅದನ್ನು ಉಳಿಸಿ ಬೆಳೆಸಿಕೊಂಡು ಹೋಗುವುದು ನಮ್ಮ ಜವಾಬ್ದಾರಿ ಎಂದರು.
ಪ್ರಮುಖರಾದ ಪ್ರವೀಣ ನಾಯ್ಕ, ಸಂದೀಪ ಗಾಂವ್ಕರ್, ಚಿದು ನಾಯ್ಕ, ಗಜೇಂದ್ರ ನಾಯ್ಕ, ವಿನಾಯಕ ನಾಯ್ಕ್ ಪ್ರಜ್ವಲ್ ನಾಯ್ಕ, ಬಿಜೆಪಿ ಮಂಡಲ ಅಧ್ಯಕ್ಷ ಸಂಜಯ ನಾಯ್ಕ, ಮಾದೇವ ಗೌಡ, ಜಗದೀಶ ನಾಯಕ, ಬೆಳಂಬರ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಜ್ಯೋತಿ ಖಾರ್ವಿ, ಸೇರಿದಂತೆ ಬಿಜೆಪಿ ಪ್ರಮುಖರು ಮತ್ತು ನಮೋ ಬ್ರಿಗೇಡ್ ಕಾರ್ಯಕರ್ತರು ಪಾಲ್ಗೊಂಡಿದ್ದರು.