ಅ.5 ಕ್ಕೆ ಅಂಕೋಲೆಗೆ ಆಗಮಿಸಲಿದೆ ಶೌರ್ಯ ಜಾಗರಣ ರಥ ಯಾತ್ರೆ.

ಅಂಕೋಲಾ : ವಿಶ್ವ ಹಿಂದೂ ಪರಿಷತ್ತಿನ ಯುವ ವಿಭಾಗ ಮತ್ತು ಭಜರಂಗದಳದ ಆಯೋಜನೆಯಲ್ಲಿ ಅಕ್ಟೋಬರ 5 ರಂದು ಶೌರ್ಯ ಜಾಗರಣ ರಥ ಯಾತ್ರೆ ಅಂಕೋಲಾಕ್ಕೆ ಆಗಮಿಸಲಿದೆ ಎಂದು ವಿಶ್ವರ ಹಿಂದೂ ಪರಿಷತ್ ಗೌರವಾಧ್ಯಕ್ಷ ಸುರೇಶ್ಚಂದ್ರ ಭಾಟೆ ಹೇಳಿದರು. ಪಟ್ಟಣದ ಶ್ರೀ ಗಣಪತಿ ದೇವಸ್ಥಾನದ ಸಭಾಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದರು. ಶಿರಸಿಯಿಂದ ಆಗಮಿಸುವ ರಥ ಯಾತ್ರೆಗೆ ತಾಲೂಕಿನ ಕೋಡಸಣಿಯಲ್ಲಿ ಸ್ವಾಗತಿಸಲಾಗುವದು. ಅಲ್ಲಿಂದ ಹನುಮಟ್ಟಾದ ಶ್ರೀ ಲಕ್ಷ್ಮೀನಾರಾಯಣ ಮಹಾಮಾಯಾ ದೇವಸ್ಥಾನಕ್ಕೆ ಆಗಮಿಸಲಿದ್ದು ಅಲ್ಲಿ ಕಾರ್ಯಕ್ರಮವನ್ನು ಆಯೋಜಿಸಲಾಗಿದ್ದು ನಂತರ ಮೆರವಣಿಗೆಯ ಮೂಲಕ ಆರ್ಯಾದುರ್ಗಾ ದೇವಸ್ಥಾನ, ಕುಂಡೋಧರಿ ದೇವಸ್ಥಾನ ಮೂಲಕ ಕಿತ್ತೂರು ಚನ್ನಮ್ಮ ರಸ್ತೆಯಲ್ಲಿ ಹಾದು ಬಂಡೀಬಜಾರ ಮಾರ್ಗವಾಗಿ ಕಣಕಣೇಶ್ವರ ದೇವಸ್ಥಾನಕ್ಕೆ ಆಗಮಿಸಲಿದೆ. ಮುಂದೆ ಅವರ್ಸಾದ ಶ್ರೀ ಕಾತ್ಯಾಯಿನಿ ದೇವಸ್ಥಾನಕ್ಕೆ ತೆರಳಲಿದೆ. ಅಲ್ಲಿ ಕಾರ್ಯಕ್ರಮದ ನಂತರ ಅಮದಳ್ಳಿಗೆ ತೆರಳಲಿದೆ ಎಂದರು. ಬಿಜೆಪಿ ಓಬಿಸಿ ರಾಜ್ಯ ಕಾರ್ಯಕಾರಿಣಿ ಸದಸ್ಯ ಹಾಗೂ ರಾಷ್ಟ್ರೀಯ ಈಡಿಗ ಮಹಾಮಂಡಳಿ ರಾಜ್ಯ ಉಪಾಧ್ಯಕ್ಷ ರಾಜೇಂದ್ರ ನಾಯ್ಕ ಮಾತನಾಡಿ ಶತಶತಾನಗಳಿಂದ ಪರಕೀಯರ ದಾಳಿಯಿಂದ ನಲುಗಿದ್ದ ಭಾರತ ಸ್ವತಂತ್ರಗೊಂಡರೂ ಹಿಂದುತ್ವಕ್ಕೆ ಪದೇ ಪದೇ ಧಕ್ಕೆಯುಂಟಾಗುತ್ತಲೇ ಇದೆ. ಸದೃಢ ಹಿಂದೂ ರಾಷ್ಟ್ರ ನಿರ್ಮಾಣದಲ್ಲಿ ಪ್ರಧಾನಿ ನರೇಂದ್ರ ಮೋದಿಯಂತಹ ಸಮರ್ಥ ನಾಯಕರು ದೊರಕಿರುವದರಿಂದಲೇ ಅಯೋಧ್ಯೆಯಲ್ಲಿ ಭವ್ಯ ರಾಮಮಂದಿರ ನಿರ್ಮಾಣದ ಕನಸು ನನಸಾಗಿದೆ, ಕಾಶ್ಮೀರ ಕಣಿವೆ ಶಾಂತಿಯುತವಾಗಿದೆ. ಹಿಂದುತ್ವದ ರಕ್ಷಣೆಗೆ ನಿಂತ ಆರ್ ಎಸ್ ಎಸ್, ವಿಶ್ವ ಹಿಂದೂ ಪರಿಷತ್, ಭಜರಂಗದಳ ಮುಂತಾದ ಸಂಘಟನೆಗಳನ್ನು ಬಲಪಡಿಸಿ ಯುವ ಜನರಲ್ಲಿ ಹಿಂದುತ್ವದ ಬಗ್ಗೆಸ್ವಾಭಿಮಾನ ಮೂಡಿಸಲು ಶೌರ್ಯ ರಥ ಯಾತ್ರೆಯನ್ನು ಆಯೋಜಿಸಲಾಗಿದ್ದು ಸಾರ್ವಜನಿಕರು, ಯುವಜನರು ಸಾವಿರಾರು ಸಂಖ್ಯೆಯಲ್ಲಿ ಬಂದು ಭಾಗವಹಿಸಬೇಕು ಎಂದು ಕೋರಿದರು. ಆರ್ ಎಸ್ ಎಸ್ ಜಿಲ್ಲಾ ವ್ಯವಸ್ಥಾ ಪ್ರಮುಖ ಸಂಜಯ ಕಾಮತ ಮಾತನಾಡಿ ಶೌರ್ಯ ರಥಯಾತ್ರೆಯ ಪ್ರಾಮುಖ್ಯತೆಯನ್ನು ವಿವರಿಸಿದರು. ಸುದ್ದಿಗೋಷ್ಠಿಯಲ್ಲಿವಿಶ್ವ ಹಿಂದೂ ಪರಿಷತ್ ಉಪಾಧ್ಯಕ್ಷ ಗಣಪತಿ ನಾಯಕ ಶೀಳ್ಯ, ಭಜರಂಗದಳದ ಪ್ರಮುಖ ಕಿರಣ ನಾಯ್ಕ, ಹಿ ಜಾ ವೇ ಪ್ರಮುಖ ರಾಘು ನಾಯ್ಕ ಇದ್ದರು. ವಿ.ಹಿಪ ಕಾರ್ಯದರ್ಶಿ ಸುರೇಶ ಭೋವಿ
ಸ್ವಾಗತಿಸಿ ಪ್ರಸ್ತಾವಿಕ ಮಾತನಾಡಿ ರಥಯಾತ್ರೆ ಮತ್ತು ಕಾರ್ಯಕ್ರಮದ ರೂಪುರೇಷೆಯನ್ನು ವಿವರಿಸಿದರು.