ಅಂಕೋಲಾದಲ್ಲಿದೆ 70 ವರ್ಷಗಳ ಹಿಂದೆ ನಿರ್ಮಾಣವಾದ ಮಹಾತ್ಮಾ ಗಾಂಧಿ ಮಂದಿರ

ಅಂಕೋಲಾ : ಪ್ರತಿಯೊಬ್ಬರ ಪ್ರೀತಿಯ ಮಹಾತ್ಮ ಗಾಂಧಿಜಿ ಜನ್ಮದಿನವನ್ನು ಭಾರತದಾದ್ಯಂತ ಅಕ್ಟೋಬರ್ 2 ರಂದು ಗಾಂಧಿ ಜಯಂತಿ ಎಂದು ಆಚರಿಸಲಾಗ್ತಿದೆ. ಆದ್ರೆ ಕರ್ನಾಟಕದ ಬಾರ್ಡೋಲಿ ಎನಿಸಿಕೊಂಡಿರುವ ಅಂಕೋಲಾದಲ್ಲಿ, 70 ವರ್ಷಗಳ ಹಿಂದೆಯೇ ಗಾಂದೀಜಿಯವರ ಮಂದಿರ ನಿರ್ಮಾಣವಾಗಿದ್ದು, ಇಂದಿಗೂ ಅಲ್ಲೇ ರಾಷ್ಟ್ರೀಯ ದಿನಾಚರಣೆಗಳನ್ನು ಆಚರಿಸಲಾಗ್ತಿದೆ..

ಭಾರತದ ಸ್ವಾತಂತ್ರ ಸಂಗ್ರಾಮದ ಚರಿತ್ರೆಯಲ್ಲಿ ಅಂಕೋಲಾ ಎಂದಿಗೂ ಮರೆಯಲಾಗದ ಹೆಸರು. ಜಿಲ್ಲೆಯ ಅನೇಕ ಪ್ರದೇಶಗಳಲ್ಲಿ ಹೋರಾಟದ ಕಿಚ್ಚು ಹೊತ್ತಿತ್ತಾದರೂ ಅಂಕೋಲೆಯ ಜನರ ದೇಶಾಭಿಮಾನ, ಚಳವಳಿಯ ಸ್ವರೂಪ ಇಂದಿಗೂ ಪ್ರಸ್ತುತ. ಇದೇ ಕಾರಣಕ್ಕೆ ಅಂಕೋಲಾ ಕರ್ನಾಟಕದ ಬಾರ್ಡೋಲಿ ಎನಿಸಿಕೊಂಡಿದ್ದು. ಸ್ವಾತಂತ್ರ್ಯ ಬಂದು 75 ವರ್ಷಗಳೇ ಕಳೆದರೂ ಇಲ್ಲಿನ ಜನರ ದೇಶಾಭಿಮಾನದ ಭಾವನೆಗಳು ಮತ್ತು ಅದಕ್ಕೆ ಪೂರಕವಾದ ಚರಿತ್ರೆಯ ಚಿತ್ರಣಗಳು ಇಂದಿಗೂ ಹಾಸು ಹೊಕ್ಕಾಗಿವೆ… ಇಡೀ ದೇಶದಲ್ಲಿ ಗಾಂಧೀಜಿಯ ನೇತೃತ್ವದಲ್ಲಿ ಸ್ವಾತಂತ್ರ್ಯದ ಕಹಳೆ ಮೊಳಗಿದ್ದ ಸಂದರ್ಭವದು. ಇಲ್ಲಿನ ಬಹುತೇಕರು ಗಾಂಧೀಜಿಯ ದೇಶಾಭಿಮಾನದ ಕರೆಗೆ ಓಗೊಟ್ಟು ಅಪ್ಪಟ ಅಭಿಮಾನಿಗಳಾಗಿ ಹೋರಾಟದಲ್ಲಿ ತೊಡಗಿದ್ದರು. ಗಾಂಧೀಜಿಯವರ ಸರಳ ಜೀವನ ಶೈಲಿ ಮತ್ತು ಹೋರಾಟದ ಹಾದಿಯನ್ನು ಅಳವಡಿಸಿಕೊಂಡಿದ್ದರು. ಗಾಂಧೀಜಿಯವರ ಕರೆಯ ಮೇರೆಗೆ ಉಪ್ಪಿನ ಸತ್ಯಾಗ್ರಹ, ಕರ ನಿರಾಕರಣೆ ಚಳುವಳಿ, ಸ್ವದೇಶಿ ಚಳುವಳಿ, ಕ್ವಿಟ್ ಇಂಡಿಯಾ ಚಳುವಳಿಗಳ ಕಾವು ಅಂಕೋಲಾದಲ್ಲಿ ಪ್ರಜ್ವಲಿಸಿ ಬ್ರಿಟಿಷರನ್ನು ದಂಗುಬಡಿಸಿತ್ತು. ಗಾಂಧೀಜಿಯವರ ಅಪ್ಪಟ ಅಭಿಮಾನಿಯಾಗಿದ್ದ ಬಾಸಗೋಡ ಕರಬಂಧಿ ಡಿಕ್ಟೇಟರ್ ರಾಮ ನಾಯಕ ಈ ಹೋರಾಟಗಳಲ್ಲಿ ಮುಂಚೂಣಿಯಲ್ಲಿದ್ದರು.

ಅಂತೂ ಭಾರತಕ್ಕೆ ಸ್ವಾತಂತ್ರ್ಯ ದೊರಕಿ ಬಿಟ್ಟಿತ್ತು. ಗಾಂಧೀಜಿಯವರ ಮೇಲಿನ ಅಭಿಮಾನದ ಒತ್ತಾಸೆಯಿಂದ ತಾಲ್ಲೂಕಿನ ಬಾಸಗೋಡ ಗ್ರಾಮದಲ್ಲಿ ರಾಮ ನಾಯಕ, 1951ರಲ್ಲಿ ಗಾಂಧೀ ಮಂದಿರ ನಿರ್ಮಾಣ ಮಾಡಿದ್ರು. ಇಲ್ಲಿ ಗಾಂಧೀಜಿ ಅವರ ಮೂರ್ತಿಯನ್ನು ದೇವರ ಮೂರ್ತಿಯಂತೆ ಪ್ರತಿಷ್ಠಾಪಿಸಲಾಗಿದೆ. ಇದು ಜಿಲ್ಲೆಯ ಏಕೈಕ ಗಾಂಧಿ ದೇವಾಲಯ ಎಂಬ ಹೆಗ್ಗಳಿಕೆ ಹೊಂದಿದೆ. ಬಾಸಗೋಡ ಮುಖ್ಯರಸ್ತೆಗೆ ಹೊಂದಿಕೊಂಡಂತೆ ಗಾಂಧಿ ಮಂದಿರವಿದ್ದು, ಇಲ್ಲಿ ತಪ್ಪದೇ ರಾಷ್ಟ್ರೀಯ ದಿನಾಚರಣೆಗಳನ್ನು ಆಚರಿಸಲಾಗುತ್ತಿದೆ. ಈ ಗಾಂಧಿ ಮಂದಿರ 70 ವರ್ಷಗಳಾದರೂ ತನ್ನ ಪ್ರಾಮುಖ್ಯವನ್ನು ಉಳಿಸಿಕೊಂಡಿದೆ. ಇದರ ನಿರ್ವಹಣೆಯನ್ನು ಅವರದ್ದೇ ಕುಟುಂಬಸ್ಥರು ಮುಂದುವರಿಸಿಕೊಂಡು ಬರುತ್ತಿದ್ದಾರೆ. ಸ್ವಾತಂತ್ರ್ಯ ಹೋರಾಟದ ಮುಂಚೂಣಿಯಲ್ಲಿದ್ದ ಬಾಸಗೋಡದ ಸುಸಂಸ್ಕೃತ ಕುಟುಂಬದಲ್ಲಿ ಜನಿಸಿದ ರಾಮ ನಾಯಕ ಧೈರ್ಯ, ಸಾಹಸಕ್ಕೆ ಹೆಸರಾದವರು. ಸದಾ ಅಚ್ಚ ಬಿಳುಪಿನ ಶುಭ್ರ ಖಾದಿಯ ಉಡುಪನ್ನು ಧರಿಸುವ ಅಪ್ಪಟ ಗಾಂಧಿವಾದಿ. ಸ್ವದೇಶಿ ಚಳವಳಿಯಲ್ಲಿ ಭಾಗವಹಿಸಿ, ಸ್ವದೇಶಿ ವ್ರತ ಕೈಗೊಂಡ ತಾಲೂಕಿನ ಮೊದಲ ವ್ಯಕ್ತಿಯಾಗಿದ್ದರು. ನಾಲ್ಕು ವರ್ಷ ಸೆರೆಮನೆ ವಾಸ ಅನುಭವಿಸಿದ್ರೂ ಸೋಲದ ವ್ಯಕ್ತಿತ್ವ. ದಣಿವರಿಯದ ದೇಹ, ಕುಗ್ಗದ ಉತ್ಸಾಹ ಅವರದಾಗಿತ್ತು. ಸ್ವಾತಂತ್ರ್ಯ ಹೋರಾಟದಲ್ಲಿ ರಾಮ ನಾಯಕ ಅವರ ಕೊಡುಗೆ ಅಪಾರ. ಅಪ್ಪಟ ಗಾಂಧಿವಾದಿಯಾಗಿ, ಗಾಂಧೀಜಿ ಮೇಲಿನ ಅಭಿಮಾನಕ್ಕೆ ಈ ಮಂದಿರ ನಿರ್ಮಿಸಿದ್ದರು. ಗಾಂಧೀಜಿಯವರ ಆದರ್ಶ ತತ್ವಗಳನ್ನು ಸದಾ ಪಾಲಿಸುತ್ತಿದ್ದರು. 1936ರಿಂದ 1940ರ ಅವಧಿಯಲ್ಲಿ ತಾಲ್ಲೂಕು ರೈತ ಸಂಘ ಸ್ಥಾಪಿಸಿ ಹೋರಾಡಿದ್ದರು. ಸಾಹಿತಿ ಶಾಂತಾರಾಮ ನಾಯಕ ಅವರ ಬರಹಗಳಲ್ಲಿ ರಾಮಾ ನಾಯಕರ ಕುರಿತ ಉಲ್ಲೇಖಗಳನ್ನು ಕಾಣಬಹುದು.

ಇಲ್ಲಿನ ಗಾಂಧಿ ಮಂದಿರದ ಕುರಿತು ಪ್ರತಿಕ್ರಿಯಿಸಿದ ಹಿರಿಯ ಸಾಹಿತಿ ಉಪನ್ಯಾಸಕ ರಾಮಮೂರ್ತಿ ನಾಯಕ, ಗಾಂಧಿ ಮಂದಿರದ ನಿರ್ಮಾಣ ಮತ್ತು ಸ್ಮರಣೆಯ ಪರಿಕಲ್ಪನೆಯೆ ವಿಶಿಷ್ಟ ಅನುಭವವಾಗಿದೆ. ಊರಿಗೆ ಮತ್ತು ತಾಲೂಕಿಗೆ ಇದೊಂದು ಕಳಶಪ್ರಾಯವಾದ ಕಾರ್ಯದಂತಿದೆ ಎಂದರು. ಗಾಂಧೀಜಿಯವರ ಅಪ್ಪಟ ಅಭಿಮಾನಿಯೊಬ್ಬರು ಅಭಿಮಾನಕ್ಕಾಗಿ ನಿರ್ಮಿಸಿದ ರಾಷ್ಟ್ರಪಿತ ಮಹಾತ್ಮ ಗಾಂಧಿಯ ದೇವಾಲಯ ಕೇವಲ ರಾಮಾ ನಾಯಕರ ಕುಟುಂಬ ಮತ್ತು ಗ್ರಾಮಸ್ಥರಿಂದ ನಿರ್ವಹಣೆಯಾಗುತ್ತಿದೆ. ಸ್ಥಳೀಯ ಗ್ರಾಮ ಪಂಚಾಯಿತಿ ಇಲ್ಲವೇ ತಾಲೂಕು ಆಡಳಿತ ಇದನ್ನು ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುತ್ತಿಲ್ಲ. ಗಾಂಧಿ ಜಯಂತಿ ಎಂದು ಹಾರ ಹಾಕಿ ಫೋಟೋ ತೆಗೆಸಿಕೊಳ್ಳುವ ಗ್ರಾಮ ಪಂಚಾಯಿತಿಯವರು ಕನಿಷ್ಠ ಪಕ್ಷ ಹಿಂದಿನ ದಿನ ಶ್ರಮದಾನ ಮಾಡಿ ಸ್ವಚ್ಛಗೊಳಿಸುವ ಸಾಮಾಜಿಕ ಪ್ರಜ್ಞೆಯನ್ನು ಮರೆತಿರುವುದು ದೇಶಭಕ್ತರಿಗೆ ಸ್ವಾತಂತ್ರ್ಯ ಹೋರಾಟಗಾರರಿಗೆ ಇವರು ನೀಡುವ ಗೌರವವೇನು ಎನ್ನುವುದನ್ನು ಪ್ರಶ್ನಿಸುವಂತಾಗಿದೆ.