ಮಕ್ಕಳ ರಕ್ಷಣಾ ಕ್ರಮದ ವಿಷಯದಲ್ಲಿ ನಿರ್ಲಕ್ಷ್ಯ ಸಲ್ಲದು -ತಿಪ್ಪೇಸ್ವಾಮಿ.

ಅಂಕೋಲಾ : ಮಕ್ಕಳ ಮೇಲಿನ ದೌರ್ಜನ್ಯಗಳನ್ನು ತಡೆಗಟ್ಟಲು ಅನೇಕ ಮುಂಜಾಗ್ರತಾ ನಿಯಮಗಳನ್ನು ತರಲಾಗಿದ್ದು ಮಕ್ಕಳ ರಕ್ಷಣಾ ಕ್ರಮಗಳ ವಿಷಯದಲ್ಲಿ ನಿರ್ಲಕ್ಷ್ಯ ಸಲ್ಲದು ಎಂದು ರಾಜ್ಯ ಮಕ್ಕಳ ಹಕ್ಕು ಆಯೋಗದ ಸದಸ್ಯರಾದ ತಿಪ್ಪೇಸ್ವಾಮಿ ಕೆ.ಟಿ ಹೇಳಿದರು. ಅವರು ಶನಿವಾರ ಕಾರವಾರದಲ್ಲಿ ಜರುಗಲಿರುವ ಜಿಲ್ಲಾಮಟ್ಟದ ಸಭೆಗೆ ಆಗಮಿಸಿದ್ದು ಶುಕ್ರವಾರ ಅಂಕೋಲಾದ ವಿವಿಧ ಸರಕಾರಿ ಶಾಲೆ ಮತ್ತು ಗ್ರಾ.ಪಂ.ಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ಮಾತನಾಡಿದರು. ನಗರದ ಸರಕಾರಿ ಪ್ರೌಢಶಾಲೆಗೆ ಭೇಟಿ ನೀಡಿದ ವೇಳೆ ಕ್ಷೇತ್ರ ಶಿಕ್ಷಣಾಧಿಕಾರಿ ಮತ್ತು ಇತರೆ ಅಧಿಕಾರಿಗಳೊಂದಿಗೆ ಚರ್ಚಿಸಿದ ಅವರು ಎಲ್ಲಾ ಶಾಲೆಗಳಲ್ಲಿ ಮಕ್ಕಳ ಸಹಾಯವಾಣಿ ಸಂಖ್ಯೆ 1098 ಮತ್ತು 112 ಸಂಖ್ಯೆಯನ್ನು ದೊಡ್ಡ ಅಕ್ಷರದಲ್ಲಿ ಸಾರ್ವಜನಿಕರಿಗೆ ಕಾಣುವಂತೆ ಬರೆಸಲು ನಿರ್ದೇಶಿಸುವಂತೆ ಸೂಚಿಸಿದರು. ಹಾಗೂ ಸರಕಾರದ ನಿರ್ದೇಶನದಂತೆ ಮಕ್ಕಳ ಗ್ರಾಮಸಭೆ ನಡೆಸಬೇಕು, ಮಹಿಳಾ ಮತ್ತು ಮಕ್ಕಳ ಕಾವಲು ಸಮಿತಿ ರಚಿಸಬೇಕು, ಶಿಕ್ಷಣ ಕಾವಲುಪಡೆ ರಚಿಸಬೇಕು. ಕೇವಲ ಕಾಟಾಚಾರಕ್ಕೆ ಸಮಿತಿಗಳನ್ನು ಸಭೆಗಳನ್ನು ರಚಿಸದೆ ಪ್ರತಿಯೊಂದನ್ನೂ ದಾಖಲೆ ಸಮೇತ ಪುಸ್ತಕದಲ್ಲಿ ಬರೆದಿಡಬೇಕು. ಎಷ್ಟೇ ಎಚ್ಚರಿಕೆ ವಹಿಸಿದರೂ ಮಕ್ಕಳ ಮೇಲಿನ ದೌರ್ಜನ್ಯ ಪ್ರಕರಣಗಳು ವರದಿಯಾಗುತ್ತಲೇ ಇವೆ. ಹತ್ತಿರದ ಸಂಬಂಧಿಗಳಿಂದಲೂ ಲೈಂಗಿಕ ದೌರ್ಜನ್ಯಗಳು ನಡೆಯುತ್ತಿದ್ದು ಕೆಲವು ಘಟನೆಗಳಲ್ಲಿ ದೂರುಗಳೇ ದಾಖಲಾಗುತ್ತಿಲ್ಲ ಎಂದರು. ಅಲ್ಲದೆ ಶಾಲೆಯ ಅಡಿಗೆ ಕೋಣೆಗೆ ತೆರಳಿ ಅಲ್ಲಿನ ಶುಚಿತ್ವ ಮತ್ತು ಆಹಾರ ಧಾನ್ಯಗಳನ್ನು ಮತ್ತು ಕುಡಿಯುವ ನೀರನ್ನು ಪರಿಶೀಲಿಸಿದರು.ಸರಕಾರಿ ಪದವಿಪೂರ್ವ ಕಾಲೇಜಿನ ಪ್ರಾಚಾರ್ಯರ ಬಳಿ ಕೆಲವು ದಾಖಲಾತಿಗಳನ್ನು ಪರಿಶೀಲಿಸಿ 18 ವರ್ಷದೊಳಗಿನ ಎಲ್ಲಾ ಮಕ್ಕಳ ರಕ್ಷಣಾ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ಸೂಚಿಸಿದರು. ಈ ವೇಳೆ ಕ್ಷೇತ್ರ ಶಿಕ್ಷಣಾಧಿಕಾರಿ ಮಂಗಳಲಕ್ಷ್ಮೀ ಪಾಟೀಲ, ಸಮನ್ವಯಾಧಿಕಾರಿ ಹರ್ಷಿತಾ ನಾಯಕ, ಉಪನ್ಯಾಸಕ ಮಹೇಶ ನಾಯಕ ಸರಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯರು ಇದ್ದರು.
ವಂದಿಗೆ ಗ್ರಾ.ಪಂ. ಕಾರ್ಯಾಲಯಕ್ಕೆ ಭೇಟಿ ಮಕ್ಕಳ ಗ್ರಾಮಸಭೆ ನಡೆಸಿದ್ದರ ಕುರಿತು ಮಾಹಿತಿ ಕೇಳಿದರು. ಈ ವೇಳೆ ಮಾತನಾಡಿದ ಅವರು ಮಹಿಳಾ ಗ್ರಾಮ ಸಭೆ, ಮಕ್ಕಳ‌ ಗ್ರಾಮ ಸಭೆ‌ಯನ್ನು ಪ್ರತ್ಯೇಕವಾಗಿ ನಡೆಸಬೇಕು, ಮಕ್ಕಳ ಸಹಾಯವಾಣಿ ಸಂಖ್ಯೆಯನ್ನು ಸಾರ್ವಜನಿಕವಾಗಿ ಪ್ರದರ್ಶಿಸಬೇಕು ಮತ್ತು ಅದರ ಕೆಳಗೆ ನಿಯಮಾವಳಿಗಳನ್ನು ಬರೆಸಬೇಕು. ಮಕ್ಕಳ ಗ್ರಾಮಸಭೆ ನಡಾವಳಿ ರಚಿಸಬೇಕು. ಮಕ್ಕಳ ಗ್ರಾಮಸಭೆ ನಡೆಸಿ ವಿದ್ಯಾರ್ಥಿಗಳ‌ ಸಮಸ್ಯೆಯನ್ನು ವಿವರವಾಗಿ ಬರೆಯಬೇಕು. ಜೀತಪದ್ಧತಿ, ಬಾಲ್ಯವಿವಾಹ ಜಾಗೃತಿ ಕಾರ್ಯಕ್ರಮ ನಡೆಸಬೇಕು. ಗ್ರಾಮದಲ್ಲಿನ ಮಕ್ಕಳ ಬಗ್ಗೆ ಮಾಹಿತಿ ಸಂಗ್ರಹಿಸಿದರೆ ಮಾತ್ರ ಒಂದು ಒಳ್ಳೆಯ ಪಂಚಾಯಿತಿ ಆಗಲು ಸಾಧ್ಯ ಎಂಬಿತ್ಯಾದಿ ಸಲಹೆಗಳನ್ನು ನೀಡಿದರು. ನಂತರ ಹೊಸಗದ್ದೆಯ ಸರಕಾರಿ ಶಾಲೆ ಮತ್ತು ಅಂಗನವಾಡಿ ಕೇಂದ್ರಗಳಿಗೆ ತೆರಳಿ ಪರಿಶೀಲನೆ ನಡೆಸಿದರು. ಈ ಸಂದರ್ಭದಲ್ಲಿ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಅಧಿಕಾರಿ ಸೋನಂ, ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಸುನೀಲ ಎಂ, ಸಿಡಿಪಿಓ ಸವಿತಾ ಶಾಸ್ತರಿಮಠ ವಂದಿಗೆ ಗ್ರಾ.ಪಂ. ಅಧ್ಯಕ್ಷ ಸತೀಶ (ಪುಟ್ಟು) ಬೊಮ್ಮಿಗುಡಿ, ಪಿಡಿಓ ಗಿರೀಶ ನಾಯಕ, ಕಾರ್ಯದರ್ಶಿ ರವಿ ನಾಯ್ಕ, ಸಿಬ್ಬಂದಿಗಳು ಇದ್ದರು.