ಸಿದ್ದಾಪುರದಲ್ಲಿ ವಿವಿಧ ಕನ್ನಡಪರ ಹಾಗೂ ರೈತ ಸಂಘಟನೆಗಳು ಬಂದ್ ಗೆ ಬೆಂಬಲ

ಸಿದ್ದಾಪುರ : ಕಾವೇರಿ ನೀರನ್ನು ತಮಿಳುನಾಡಿಗೆ ಬಿಡುತ್ತಿರುವುದನ್ನ ಖಂಡಿಸಿ ವಿವಿಧ ಸಂಘಟನೆಗಳು ಕರ್ನಾಟಕ ಬಂದ್ ಗೆ ಕರೆ ನೀಡಿದ್ದು ಸಿದ್ದಾಪುರದಲ್ಲಿ ವಿವಿಧ ಕನ್ನಡಪರ ಹಾಗೂ ರೈತ ಸಂಘಟನೆಗಳು ಬಂದ್ ಗೆ ಬೆಂಬಲ ನೀಡಿದರು. ನಾಡ ದೇವಿ ಹೋರಾಟ ವೇದಿಕೆಯ ನೇತೃತ್ವದಲ್ಲಿ ನಡೆದ ಪ್ರತಿಭಟನಾ ರ‍್ಯಾಲಿ ಬಂದ್ ಯಶಸ್ವಿಯಾಗಲು ಕಾರಣವಾಯಿತು. ಗಂಗಾಂಬಿಕ ದೇವಾಲಯದ ಎದುರಿನಿಂದ ಹೊರಟ ಪ್ರತಿಭಟನೆ ರ‍್ಯಾಲಿ ತಿಮ್ಮಪ್ಪ ನಾಯಕ ಸರ್ಕಲ್, ಹೊಸ ಬಸ್ ನಿಲ್ದಾಣ, ರಾಜಮಾರ್ಗ,ಬಿ ಎಸ್ ಸರ್ಕಲ್ ಮೂಲಕ ಸಾಗಿ ತಹಶೀಲ್ದಾರ್ ಕಚೇರಿಗೆ ತಲುಪಿತು ಅಲ್ಲಿ ತಹಶೀಲ್ದಾರ್ ಮೂಲಕ ಮುಖ್ಯಮಂತ್ರಿಗಳಿಗೆ, ರಾಜ್ಯಪಾಲರಿಗೆ, ಪ್ರಧಾನ ಮಂತ್ರಿ ಗೆ ಮನವಿ ನೀಡಿದರು. ಮುಖಂಡ ಅನಿಲ್ ಕೊಠಾರಿ, ರೈತ ಮುಖಂಡ ವೀರಭದ್ರನಾಯ್ಕ್, ಉತ್ತರ ಕನ್ನಡ ಜಿಲ್ಲಾ ರೈತ ಸಂಘದ ಇಲಿಯಾಸ್, ಕೆರಿಯಪ್ಪ, ಲಕ್ಷ್ಮಣ್ ನಾಯ್ಕ್, ವಿನಾಯಕ ಕೊಂಡ್ಲಿ, ಸತೀಶ್ ಹೆಗಡೆ ಸರ್ಕಾರದ ನೀತಿಯನ್ನು ಖಂಡಿಸಿ ಆಕ್ರೋಶ ವ್ಯಕ್ತಪಡಿಸಿದರು. ದಿನನಿತ್ಯ ಜನರಿಂದ ಕೂಡಿರುತ್ತಿದ್ದ ಪಟ್ಟಣ ಸ್ತಬ್ಧವಾಗಿತ್ತು, ವರ್ತಕರು ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಿ ಬಂದ್ ಗೆ ಸಹಕಾರ ನೀಡಿದರು. ಬೆಳಗಿನ ವೇಳೆ ದ್ವಿಚಕ್ರ ವಾಹನ ಕೆಲ ಖಾಸಗಿ ವಾಹನ ಸಂಚರಿಸುತ್ತಿರುವುದು ಬಿಟ್ಟರೆ ಉಳಿದೆಲ್ಲ ವಾಹನ ಸಂಚಾರ ವಿರಳವಾಗಿತ್ತು. ಪ್ರತಿಭಟನೆಯಲ್ಲಿ ಶಂಕರ್ ಮೂರ್ತಿ ಆಕಾಶ, ಸೋಮು ಕಾನಗೂಡು, ದೇವಾನಂದ ಹೊಸೂರು, ಜಿಸಿ ನಾಯ್ಕ್ ಕಡೆಕೇರಿ, ಗೀತಾ ಹೆಗಡೆ ಮುಂತಾದವರು ಉಪಸ್ಥಿತರಿದ್ದರು.