ಯುವ ಸಂಸತ್ತಿನಲ್ಲಿ ಮಾರ್ದನಿಸಿದ ಮಲ್ಟಿ ಸ್ಪೆಶಾಲಿಟಿ ಆಸ್ಪತ್ರೆ ಮತ್ತು ಸುರಂಗ ಮಾರ್ಗ ಸಮಸ್ಯೆ.

ಅಂಕೋಲಾ : ಜಿಲ್ಲೆಯ ಬಹು ವರ್ಷಗಳ ಬೇಡಿಕೆಯಾದ ಮಲ್ಟಿ ಸ್ಪೆಶಾಲಿಟಿ ಆಸ್ಪತ್ರೆ ಮತ್ತು ಸುರಂಗ ಮಾರ್ಗ ತೆರವು ಸಮಸ್ಯೆ ಯುವ ಸಂಸತ್ತಿನಲ್ಲಿ ಮತ್ತೆ ಮಾರ್ದನಿಸಿ ಸರಕಾರವನ್ನು ತೀವ್ರ ತರಾಟೆಗೆ ತೆಗೆದುಕೊಂಡ ಘಟನೆ ಸೋಮವಾರ ನಡೆಯಿತು. ಇದು ನಡೆದಿದ್ದು ತಾಲೂಕಾ ಮಟ್ಟದ ವಿದ್ಯಾರ್ಥಿಗಳ ಯುವ ಸಂಸತ್ತು ಕಾರ್ಯಕ್ರಮದಲ್ಲಿ. ಜಿಲ್ಲಾ ಪಂಚಾಯತ ಉ.ಕ. ಶಾಲಾ ಶಿಕ್ಷಣ ಇಲಾಖೆ, ತಾಲೂಕು ಪಂಚಾಯಕ ಅಂಕೋಲಾ, ಕ್ಷೇತ್ರ ಶಿಕ್ಷಣಾಧಿಕಾರಿ ಕಾರ್ಯಾಲಯ ಅಂಕೋಲಾ, ಹಾಗೂ ಸಮಾಜ ವಿಜ್ಞಾನ ಶಿಕ್ಷಕರ ಸಂಘ ಇವರ ಸಂಯುಕ್ತ ಆಶ್ರಯದಲ್ಲಿ ಪಟ್ಟಣದ ತಾಲೂಕು ಪಂಚಾಯತ ಸಭಾಭವನದಲ್ಲಿ ನಡೆದ ಸರಕಾರಿ ಪ್ರೌಢಶಾಲಾ ವಿದ್ಯಾರ್ಥಿಗಳ ತಾಲೂಕು ಮಟ್ಟದ ಯುವ ಸಂಸತ್ತು ಕಾರ್ಯಕ್ರಮದಲ್ಲಿ ಭಾಗವಹಿಸಿದ ತಾಲೂಕಿನ ಸರಕಾರಿ ಪ್ರೌಢಶಾಲೆಗಳ ವಿದ್ಯಾರ್ಥಿಗಳು ನಿಜವಾಗಿಯೂ ಅಧಿವೇಶನ ನಡೆಯುತ್ತಿದೆಯೋ ಎನ್ನುವ ರೀತಿಯಲ್ಲಿ ಆಡಳಿತಾರೂಢ ಸರಕಾರ ಮತ್ತು ವಿರೋಧ ಪಕ್ಷದ ಸದಸ್ಯರಾಗಿ ತಮ್ಮ ಸಾಮರ್ಥ್ಯವನ್ನು ಪ್ರದರ್ಶಿಸಿದರು. ಪ್ರಶ್ನೋತ್ತರ ವೇಳೆಯಲ್ಲಿ ವಿರೋಧ ಪಕ್ಷದವರು ಸರಕಾರದ ಮೇಲೆ ಹರಿಹಾಯ್ದರೆ ಸರಕಾರದ ಪರವಾಗಿ ಸಚಿವರೂ ಅಷ್ಟೇ ಪರಿಣಾಮಕಾರಿಯಾಗಿ ಉತ್ತರ ನೀಡಿದರು. ವಿವಿಧ ಯೋಜನೆಗಳಿಗೆ ಹಣ ಬೇಕಾಗಿರುವದರಿಂದ ಸದ್ಯ ಆಸ್ಪತ್ರೆ ನಿರ್ಮಾಣ ಸಾಧ್ಯವಿಲ್ಲ ಎಂಬ ಉತ್ತರದಿಂದ ತೃಪ್ತರಾಗದ ವಿರೋಧ ಪಕ್ಷದವರು ಜಿಲ್ಲೆಯಲ್ಲಿ ಮಲ್ಟಿ ಸ್ಪೆಶಾಲಿಟಿ ಆಸ್ಪತ್ರೆ ಮಾಡಲು ಸಾಧ್ಯವಾಗದಿದ್ದರೆ ರಾಜೀನಾಮೆ ಕೊಡಿ ಎಂದು ಆಗ್ರಹಿಸಿದರು. ಹಾಗೂ ಕಾರವಾರದ ಸುರಂಗ ಮಾರ್ಗ ತೆರೆಯದಿದ್ದರೆ ಉಗ್ರ ಹೋರಾಟ ಮಾಡುವ ಎಚ್ಚರಿಕೆಯನ್ನೂ ನೀಡಿದರು. ಶಕ್ತಿ ಯೋಜನೆ, ಗೃಹಲಕ್ಷ್ಮೀ ಯೋಜನೆಗಳಲ್ಲಿನ ನ್ಯೂನತೆ, ವೈದ್ಯರ ಕೊರತೆ, ಸರಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳ ಕೊರತೆ, ಶಿಕ್ಷಕರ ಕೊರತೆ, ವಿತರಣೆಯಾಗದ ಸೈಕಲ್ಲುಗಳು, ಸಮಯಕ್ಕೆ ಸಿಗದ ವಿದ್ಯಾರ್ಥಿ ವೇತನ ಮುಂತಾದ ವಿಷಯಗಳ ಮೇಲೆ ಜಟಾಪಟಿ ನಡೆಯಿತು. ಕೆಲವು ವಿದ್ಯಾರ್ಥಿಗಳು ಮಂತ್ರಿಗಳನ್ನೇ ಮೀರಿಸುವಂತೆ ವಿಷಯ ಮಂಡಿಸಿ ಗಮನ ಸೆಳೆದರು. ಪ್ರಶ್ನೋತ್ತರ ವೇಳೆಯಲ್ಲಿ ದೀಪ್ತಿ ಸಭಾಪತಿ ಸ್ಥಾನವನ್ನು ನಿರ್ವಹಿಸಿದರೆ ಶೂನ್ಯ ವೇಳೆಯಲ್ಲಿ ಅಮಿತ್ ಸಭಾಪತಿ ಸ್ಥಾನವನ್ನು ನಿರ್ವಹಿಸಿದರು.
ತಾಲೂಕು ಪಂಚಾಯತ ಯೋಜನಾಧಿಕಾರಿ ನಾಗಭೂಷಣ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ಇಂದಿನ ವಿದ್ಯಾರ್ಥಿಗಳು ಮುಂದಿನ ಪ್ರಜೆಗಳು ಶಾಲಾ ದಿನಗಳಲ್ಲೇ ಅವರಿಗೆ ರಾಜಕೀಯ ಮತ್ತು ಆಡಳಿತ ಪ್ರಜ್ಞೆ ಮೂಡಿಸುವದು ಉತ್ತಮ ಬೆಳವಣಿಗೆ ಎಂದರು. ಕ್ಷೇತ್ರ ಶಿಕ್ಷಣಾಧಿಕಾರಿ ಕಾರ್ಯಾಲಯದ ಸಮನ್ವಯಾಧಿಕಾರಿ ಹರ್ಷಿತಾ ನಾಯಕ ಮಾತನಾಡಿ ಮಕ್ಕಳಲ್ಲಿ ಸ್ಪರ್ಧಾತ್ಮಕ ಮನೋಭಾವನೆ ಇದ್ದರೆ ರಾಜ್ಯ ಮಟ್ಟದ ಯುವ ಸಂಸತ್ತನ್ನು ಪ್ರತಿನಿಧಿಸಬಹುದು. ರಾಜಕೀಯ ವಿದ್ಯಮಾನಗಳ ಅರಿವು ಮೂಡಿಸಿಕೊಂಡರೆ ಸಮಾಜದ ನ್ಯೂನತೆಗಳ ಬಗ್ಗೆ ತಿಳಿದುಕೊಳ್ಳಬಹುದು, ರಾಜಕೀಯ ಸೂಕ್ಷ್ಮತೆಗಳನ್ನು ಅರಿಯಬಹುದು. ಹರ್ಷಿತಾ ನಾಯಕ ಮಾತನಾಡಿ ವಿದ್ಯಾರ್ಥಿ ಸಂಸತ್ತಿನ ಪ್ರಾಮುಖ್ಯತೆಯ ಕುರಿತು ವಿವರಿಸಿದರು. ನಗರದ ಸರಕಾರಿ ಪ್ರೌಢಶಾಲೆಯ ಮುಖ್ಯಾಧ್ಯಾಪಕ ಭಾಸ್ಕರ ಗಾಂವಕರ ಮಾತನಾಡಿ ಸರಕಾರದ ರಚನೆ ಹೇಗೆ ಆಗುತ್ತದೆ ನಿರ್ಣಯಗಳು ಹೇಗೆ ನಡೆಯುತ್ತದೆ, ಕಾರ್ಯಾಂಗ, ನ್ಯಾಯಾಂಗ ಮತ್ತು ಶಾಸಕಾಂಗ ಹೇಗೆ ಕಾರ್ಯ ನಿರ್ವಹಿಸುತ್ತದೆ ಎಂದು ವಿವರಿಸಿದರು. ವೇದಿಕೆಯಲ್ಲಿ ಅಕ್ಷರ ದಾಸೋಹ ತಾಲೂಕಾ ನಿರ್ದೇಶಕ ವಿ ಟಿ ನಾಯಕ, ರಚನಾ ನಾಯ್ಕ ಉಪಸ್ಥಿತರಿದ್ದು ಮಾತನಾಡಿದರು.
ಶಿಕ್ಷಣ ಸಂಯೋಜಕ ಹಾಗೂ ಸಂಘಟಕ ಬಿ ಎಲ್ ನಾಯಕ ಸ್ವಾಗತಿಸಿದರು. ಗುರುದಾಸ ಪ್ರೌಢಶಾಲೆಯ ಮುಖ್ಯಾಧ್ಯಾಪಕ ಮಂಜುನಾಥ ನಾಯ್ಕ ವಂದಿಸಿದರು. ಉತ್ತಮ ಪ್ರದರ್ಶನ ನೀಡಿದ ವಿದ್ಯಾರ್ಥಿಗಳನ್ನು ಜಿಲ್ಲಾ ಮಟ್ಟಕ್ಕೆ ಆಯ್ಕೆ ಮಾಡಲಾಯಿತು.
ಈ ಸಂದರ್ಭದಲ್ಲಿ ಸರಕಾರಿ ಪ್ರೌಢಶಾಲೆಗಳ ಶಿಕ್ಷಕರು ಇದ್ದರು.