ಕಾರ್ಮಿಕ ಇಲಾಖೆಯಿಂದ ನೀಡುವ ಸೌಲಭ್ಯಕ್ಕೆ ಸಂಭಂದಿಸಿದಂತೆ ವಿವಿಧ ಬೇಡಿಕೆ ಈಡೆರಿಕೆಗೆ ಆಗ್ರಹಿಸಿ ಕಾರ್ಮಿಕ ನಿರೀಕ್ಷಕರ ಮೂಲಕ ಕಾರ್ಮಿಕ ಸಚಿವರಿಗೆ ಮನವಿ

ಹೊನ್ನಾವರ; ಕಟ್ಟಡ ನಿರ್ಮಾಣ ಕಾರ್ಮಿಕರಿಗೆ ಕಲ್ಯಾಣ ಮಂಡಳಿಯಿಂದ ಕಾನೂನು ಪ್ರಕಾರ ಪ್ರತಿವರ್ಷ ನೀಡಬೇಕಾದ ಶೈಕ್ಷಣಿಕ ಸಹಾಯಧನವನ್ನು ಬಿಡುಗಡೆ ಮಾಡಿಲ್ಲ. 2022-23 ನೇ ಸಾಲಿನಲ್ಲಿ ಶೈಕ್ಷಣಿಕ ಸಹಾಯಧನಕ್ಕಾಗಿ ಅರ್ಜಿ ಸಲ್ಲಿಸಿದ ಕಾರ್ಮಿಕರಿಗೆ ಈವರೆಗೂ ಹಣ ಬಿಡುಗಡೆ ಮಾಡಿಲ್ಲ. 2023-24 ನೇ ಸಾಲಿನ ಶೈಕ್ಷಣಿಕ ವರ್ಷ ಆರಂಭವಾಗಿ, ಅರ್ಧ ವರ್ಷ ಕಳೆಯುತ್ತಿದ್ದರೂ ಈವರೆಗೂ ಸಹಾಯಧನಕ್ಕಾಗಿ ಆರ್ಜಿಯನ್ನೇ ಆಹ್ವಾನಿಸಿಲ್ಲ. ಹಾಗೆಯೇ 2021-22 ನೇ ಸಾಲಿನಲ್ಲಿ ಶೈಕ್ಷಣಿಕ ಸಹಾಯಧನಕ್ಕಾಗಿ ಅರ್ಜಿ ಸಲ್ಲಿಸಿದ ಸುಮಾರು ಒಂದುವರೆ ಲಕ್ಷ ಜನ ಕಾರ್ಮಿಕರಿಗೆ ಸಹಾಯಧನ ಕೊಡದೇ ಬಾಕಿ ಉಳಿಸಿಕೊಳ್ಳಲಾಗಿದೆ. ಶೈಕ್ಷಣಿಕ ಸಹಾಯಧನ ಬಿಡುಗಡೆ ಮಾಡಲು ‘ಹಣದ ಕೊರತೆ ಇದೆ’ ಎಂದು ಹೇಳಲಾಗುತ್ತಿದೆ. ಸದ್ಯ 5ರಿಂದ 6 ಸಾವಿರ ಕೋಟಿ, ಹಣ ಇದೆ. ಪ್ರತಿವರ್ಷ ಸುಮಾರು 1 ಸಾವಿರ ಕೋಟಿ ಸೆಸ್ ಸಂಗ್ರಹವಾಗುತ್ತದೆ. ಹೀಗಾಗಿ ಕಲ್ಯಾಣ ಮಂಡಳಿಯಲ್ಲಿ ಹಣವಿಲ್ಲ ಎಂಬುದು ಸತ್ಯಕ್ಕೆ ದೂರವಾದ ಮಾತು, ಹಣವಿಲ್ಲ ಎನ್ನುವಾಗಲೇ ಈ ಹಿಂದೆಯೂ ಟ್ಯಾಬ್, ಲ್ಯಾಪ್‌ ಟಾಪ್ ಮತ್ತು ಸ್ಕೂಲ್ ಕಿಟ್‌ಗಳನ್ನು ಖರೀದಿಸಿ ನೀಡಲಾಗಿತ್ತು. ಈಗಲೂ 10 ಸಾವಿರ, ಲ್ಯಾಪ್‌ ಟಾಪ್ ಖರೀದಿಸಲಾಗಿದೆ.
ಕಲ್ಯಾಣ ಮಂಡಳಿಯಲ್ಲಿ ಸೆಸ್ ಮೂಲಕ ಸುಮಾರು 12 ಸಾವಿರ ಕೋಟಿ ರೂಪಾಯಿ ಸಂಗ್ರಹವಾಗಿತ್ತು. ಕಳೆದ ಬಿಜೆಪಿ ಸರಕಾರದ ಅವಧಿಯಲ್ಲಿ ಸುಮಾರು 8 ಸಾವಿರ ಕೋಟಿ ರೂಪಾಯಿಗಳನ್ನು ಖರ್ಚು ಮಾಡಲಾಗಿದೆ. ಖರ್ಚು ಮಾಡಲಾದ ಈ ಬೃಹತ್ ಮೊತ್ತದ ಹಣ, ಕಾರ್ಮಿಕರ ಕೈಗೆ ಹೋಗುವ ಬದಲು ಅಂದಿನ ಕಾರ್ಮಿಕ ಸಚಿವ ಮತ್ತು ಮೇಲ್ಮಟ್ಟದ ಅಧಿಕಾರಿಗಳ ಪಾಲಾಗಿದೆ. ರೇಶನ್ ಕಿಟ್, ಬೂಸ್ಟರ್ ಕಿಟ್, ವಿವಿಧ ಟ್ರೇಡ್‌ವಾರು ಟೂಲ್ ಕಿಟ್‌ಗಳು, ಸೇಫ್ಟಿ ಕಿಟ್, ಕಲಿಕಾ ಕಿಟ್, ಲ್ಯಾಪ್‌ಟಾಪ್, ಟ್ಯಾಬ್, ಇನ್ನೋವಾ ಕಾರುಗಳು, ಟಿ.ವಿಗಳು, ಕಂಪ್ಯೂಟರ್‌ಗಳು ಇತ್ಯಾದಿಯಾಗಿ ಬೇಕಾಬಿಟ್ಟಿ ಖರೀದಿಸಲಾಯಿತು. ತೀರಾ ಕಳಪೆ ಗುಣಮಟ್ಟದ, ಉಪಯೋಗಿಸಲು ಸಾಧ್ಯವಿಲ್ಲದ ಕಿಟ್‌ಗಳನ್ನು ದುಬಾರಿ ಬೆಲೆ ತೆತ್ತು ಖರೀದಿಸಲಾಯಿತು, ಇಂತಹ ಯಾವುದನ್ನೂ ಕಾರ್ಮಿಕರು ಕೇಳಿರಲಿಲ್ಲ, ಕಾರ್ಮಿಕರು ಕೇಳದಿದ್ದರೂ ನೀಡಲಾಯಿತು. ಜೊತೆಗೆ ಕಚೇರಿಯನ್ನು ಐಷಾರಾಮಿಯಾಗಿ ವಿನ್ಯಾಸಗೊಳಿಸಲು ಹತ್ತಾರು ಕೋಟಿ ರೂಪಾಯಿ ವ್ಯಯಿಸಲಾಯಿತು. ಈ ರೀತಿಯಾಗಿ 8 ಸಾವಿರ ಕೋಟಿ ರೂಪಾಯಿಗಳನ್ನು ನುಂಗಿ ನೀರು ಕುಡಿಯಲಾಯಿತು. ಈಗ ಹಣವಿಲ್ಲ ಎಂದು ಹೇಳಲಾಗುತ್ತಿದೆ. ಹಾಗೊಂದು ವೇಳೆ ಸಹಾಯಧನ ಬಿಡುಗಡೆ ಮಾಡಲು ಹಣವಿಲ್ಲದಿದ್ದಲ್ಲಿ ರಾಜ್ಯ ಸರಕಾರದ ಖಜಾನೆಯಿಂದ ಹಣ ಪಡೆದು ಸಹಾಯಧನ ಬಿಡುಗಡೆ ಮಾಡಬೇಕೆಂದು ಒತ್ತಾಯಿಸಿದರು. ಆಗಸ್ಟ್ 20 ರಂದು ಮಂಡಳಿ ಸಿಇಓ ಅವರು ಕಾರ್ಮಿಕ ಸಂಘಗಳ ಜತೆ ನಡೆಸಿದ ಸಭೆಯಲ್ಲಿ ಕೂಡ ಶೈಕ್ಷಣಿಕ ಸಹಾಯಧನ ಬಿಡುಗಡೆಗೆ ಕ್ರಮ ವಹಿಸುವುದಾಗಿ ಭರವಸೆ ನೀಡಿದ್ದರು. ಆದರೆ ಇದುವರೆಗೂ ಬೇಡಿಕೆ ಈಡೇರಿಲ್ಲ. ಆಕ್ಟೋಬರ್ 21 ಹಾಗೂ 27 ರಂದು ಜಿಲ್ಲಾ ಕಾರ್ಮಿಕಾಧಿಕಾರಿಗಳ ಕಚೇರಿ ಎದುದು ಅಹೋರಾತ್ರಿ ಧರಣಿಯನ್ನು ಹಾಗೂ ಅಂತಿಮವಾಗಿ ನವೆಂಬರ್ 24 ರಿಂದ ಬೆಂಗಳೂರಿನ ಕಲ್ಯಾಣ ಮಂಡಳಿ ಮುಂಭಾಗ ಅನಿರ್ದಿಷ್ಟ ಹೋರಾಟವನ್ನು ಹಮ್ಮಿಕೊಳ್ಳುದಾಗಿ ಎಚ್ಚರಿಸಿದರು.
ಕಾರ್ಮಿಕ ನಿರೀಕ್ಷಕ ಗುರು ಪ್ರಸಾದ್ ಮೂಲಕ ಕಾರ್ಮಿಕ ಸಚಿವ ಸಂತೋಷ್ ಲಾಡ್ ಅವರಿಗೆ ಮನವಿ ಸಲ್ಲಿಸಲಾಯಿತು.
ಈ ವೇಳೆ ಸಿ.ಐ.ಟಿಯು ಜಿಲ್ಲಾಧ್ಯಕ್ಷ ತಿಲಕ್ ಗೌಡ, ರಾಜ್ಯ ಸಮಿತಿ ಸದಸ್ಯೆ ಯಮುನಾ ಗಾಂವ್ಕರ್, ತಾಲೂಕ ಅಧ್ಯಕ್ಷ ತಿಮ್ಮಪ್ಪ ಗೌಡ, ಖಜಾಂಚಿ ಮಂಜುನಾಥ ಗೌಡ, ಸವಿತಾ ದೇವಳಿ, ನೇತ್ರಾವತಿ ನಾಯ್ಕ, ವಿನಯ ನಾಯ್ಕ, ಬೀರ ಗೌಡ ಗೋವಿಂದ ಮುಕ್ರಿ ಉಪಸ್ಥಿತರಿದ್ದರು.