ಭಟ್ಕಳದಲ್ಲಿ ಹದಗೆಟ್ಟ ವಾತಾವರಣ : ವೈರಲ್ ಫಿವರನಿಂದ ಕಂಗೆಟ್ಟ ಜನರು

ಭಟ್ಕಳ: ದಿನನಿತ್ಯದ ವಾತಾವರಣದ ಏರುಪೇರಿನಿಂದಾಗಿ ಜನರ ಆರೋಗ್ಯವು ಹದಗೆಟ್ಟು ಆಸ್ಪತ್ರೆಯತ್ತ ಮುಖ ಮಾಡುತ್ತಿದ್ದು ಸದ್ಯ ತಾಲೂಕಾಸ್ಪತ್ರೆಯಲ್ಲಿ ರೋಗಿಗಳು ವೈದ್ಯರಿಂದ ತಪಾಸಣೆ ಮಾಡಿಸಿಕೊಳ್ಳಲು ಸರದಿ ಸಾಲಿನಲ್ಲಿ ನಿಂತಿದ್ದಾರೆ.

ಭಟ್ಕಳದಲ್ಲಿ ಅಗಸ್ಟ -ಸೆಪ್ಟೆಂಬರ್ ತಿಂಗಳು ಸಂಪೂರ್ಣವಾಗಿ ಬದಲಾಗಿದೆ. ಕಾರಣ ಮುಂಜಾನೆ ಬಿರು ಬಿಸಿಲಿನ ವಾತಾವರಣವಿದ್ದರೆ ಮಧ್ಯಾಹ್ನದ ವೇಳೆ ಮೋಡ ಕವಿದು ಮಳೆ ಶುರುವಾಗಲಿದೆ. ಮತ್ತೆ ಸಂಜೆ ಮೇಲೆ ಸಹಜ ಸ್ಥಿತಿಯತ್ತ ಬರುವ ವಾತಾವರಣ ರಾತ್ರಿ ವೇಳೆ ಮತ್ತೆ ಮಳೆ ಬಂದು ಮಾರನೇ ದಿನ ಮುಂಜಾನೆ ದಟ್ಟ ಚಳಿ ಉಂಟಾಗಿಲಿದ್ದು ಹಿಮದಿಂದ ಕೂಡಿರುವ ವಾತಾವರಣ ಸಹಜವಾಗಿದೆ. ಈ ರೀತಿಯ ಅಸಹಜ ಪರಿಸ್ಥಿತಿಯಿಂದ ಜನರು ಕಂಗಾಲಾಗಿದ್ದಾರೆ‌.

ಅತ್ತ ಎಚ್1ಎನ್1, ಇಲಿ ಜ್ವರ ಮತ್ತು ಢೆಂಘ್ಯು ಜ್ವರ ಬಾಧಿಸುತ್ತಲಿದ್ದು ಈಗಾಗಲೇ ಎಚ್ 1ಎನ್1 ಗೆ ಓರ್ವ ಮಹಿಳೆ ಮ್ರತಪಟ್ಟಿದ್ದು ಭಟ್ಕಳದ ಜನರು ಆಸ್ಪತ್ರೆಯ ಕಡೆ ಮುಖ ಮಾಡಿ ತಪಾಸಣೆ ಮಾಡಿಸಿಕೊಳ್ಳಲು ಮುಗಿ ಬಿದ್ದಿದ್ದಾರೆ.

ಆಗಸ್ಟ್‌ನಲ್ಲಿ ತೀವ್ರವಾಗಿದ್ದ ಮದ್ರಾಸ್ ಐ (ಕಣ್ಣು ಬೇನೆ) ಈಗ ಹತೋಟಿಗೆ ಬಂದಿದೆ. ಆದರೆ ನೆಗಡಿಯಂಥ ಕೇಸ್‌ಗಳು ಹೆಚ್ಚಾಗುತ್ತಿವೆ. ಇದರಿಂದ ಆಸ್ಪತ್ರೆಗಳಲ್ಲಿ ರೋಗಿಗಳ ಸರತಿ ಸಾಲು ಕಂಡುಬರುತ್ತಿದೆ. ಮದ್ರಾಸ್ ಐ (ಕಣ್ಣು ಬೇನೆ) ವ್ಯಾಪಕವಾಗಿ ಕಾಣಿಸಿಕೊಂಡು ಮಕ್ಕಳು, ವೃದ್ಧರು, ಮಹಿಳೆಯರು ಸೇರಿದಂತೆ ಎಲ್ಲರೂ ಹೈರಾಣಾಗಿದ್ದರು. ಕಣ್ಣು ಬೇನೆ ಸಂಪೂರ್ಣವಾಗಿ ಗುಣವಾಗುವ ಪೂರ್ವದಲ್ಲಿಯೇ ಇದೀಗ ತಾಲೂಕಿನಲ್ಲಿ ಎಚ್1ಎನ್1, ಇಲಿ ಜ್ವರ ಹಾಗೂ ಡೆಂಘೀ ಕಾಣಿಸಿಕೊಂಡಿರುವುದು ಜನರ ಭಯಕ್ಕೆ ಕಾರಣವಾಗಿದೆ.

ತಾಲೂಕಿನಲ್ಲಿ ಗ್ರಾಮಾಂತರ ಭಾಗದಲ್ಲಿ 80 ವರ್ಷದ ಮಹಿಳೆಯೋರ್ವಳು ಎಚ್1ಎನ್1ದಿಂದ ಸಾವನ್ನಪ್ಪಿದ ಬಗ್ಗೆ ಆರೋಗ್ಯಾಧಿ ಕಾರಿಗಳು ಇತ್ತೀಚಿನ ಸಚಿವರ ಕೆಡಿಪಿ ಸಭೆ ಯಲ್ಲಿ ಮಾಹಿತಿ ನೀಡಿದ್ದರು ಹಾಗೂ ಈ ಬಗ್ಗೆ ಜನರು ಜಾಗ್ರತೆಯಿಂದ ಇರುವಂತೆ ವೈದ್ಯರ ಸಲಹೆ ಪಡೆದುಕೊಳ್ಳುವಂತೆ ಸಹ ತಿಳಿಸಿದ್ದರು.

ತಾಲೂಕಿನಲ್ಲಿ ಸದ್ಯಕ್ಕೆ ಎಚ್1ಎನ್1 ಏಳು ಜನರಿಗೆ, ಇಲಿ ಜ್ವರ 4 ಜನರಿಗೆ ಹಾಗೂ ಡೆಂಘೀ 5 ಜನರಿಗೆ ಬಂದಿದ್ದು ಎಲ್ಲರೂ ಗುಣಮುಖರಾಗಿದ್ದು ಓರ್ವ ಮಹಿಳೆ ಎಚ್1ಎನ್1 ಗೆ ಬಲಿಯಾಗಿದ್ದಾಳೆ.

ತಾಲೂಕಿನಲ್ಲಿ ವಿವಿಧ ರೀತಿಯ ವೈರಲ್ ಜ್ವರ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಇದನ್ನು ಗಂಭೀರ ವಾಗಿ ಪರಿಗಣಿಸಿರುವ ಆರೋಗ್ಯ ಇಲಾಖೆ ಅಗತ್ಯ ಮುಂಜಾಗ್ರತಾ ಕ್ರಮಕೈಗೊಳ್ಳುವ ಜತೆಗೆ ಸಾರ್ವಜನಿಕರಲ್ಲಿ ಸೂಕ್ತ ಜಾಗೃತಿ ಮೂಡಿಸುತ್ತಿದೆ.

ಇನ್ನು ಕಾಡುತ್ತಿದೆಯಾ ಕೋವಿಡ್ .?

ಭಟ್ಕಳದಲ್ಲಿ ಸದ್ಯ ವಾತಾವರಣ ಹಾಳಾಗಿರುವ ಹಿನ್ನೆಲೆ ಜನರಲ್ಲಿ ವೈರಲ್ ಜ್ವರ ಬಾದಿಸುತ್ತಿದ್ದು, ಗ್ರಾಮಾಂತರ ಹಾಗೂ ನಗರ ಭಾಗದಲ್ಲಿ ಇದು ಹೆಚ್ಚಾಗುತ್ತಿವೆ. ಇನ್ನು ಈ ವೈರಲ್ ಫೀವರ್ ಜನರಲ್ಲಿ ಕೋವಿಡ ಭಯವನ್ನು ಹುಟ್ಟಿಸುತ್ತಿದ್ದು, ಕೆಲವೊಂದು ಕ್ಲಿನಿಕಗಳಲ್ಲಿ ಇದು ಕೋವಿಡ ಲಕ್ಷಣ ಎಂದು ಜನರಿಗೆ ತಿಳಿಸುತ್ತಿದ್ದಾರೆಂಬ ವದಂತಿಗಳು ಕೇಳಿ ಬರುತ್ತಿದೆ. ಈ ಬಗ್ಗೆ ತಾಲೂಕಾಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ, ತಾಲೂಕಾ ಆರೋಗ್ಯಾಧಿಕಾರಿ ಡಾ. ಸವಿತಾ ಕಾಮತ ಅವರು ವೈರಲ್ ಫಿವರಗಳು 3-4 ದಿನಗಳ ಕಾಲ ವ್ಯಕ್ತಿಯನ್ನು ಬಾದಿಸಿ ಆ ಬಳಿಕ ಜ್ವರ ಕಡಿಮೆಯಾಗುತ್ತದೆ. ವೈರಲ್ ಫಿವರಗಳೆಲ್ಲವು ಕೋವಿಡ ಆಗಿರುವುದಿಲ್. ನಮ್ಮಲ್ಲಿ ತಪಾಸಣೆಗೊಳಗಾದ ವ್ಯಕ್ತಿಗಳಿಗೆ ಕೋವಿಡ್ ಲಕ್ಷಣಗಳಿದ್ದರೆ ಮಾತ್ರ ವೈದ್ಯರು ಕೋವಿಡ್ ಪರೀಕ್ಷೆ ಮಾಡಲು ತಿಳಿಸಲಿದ್ದು ಇಲ್ಲವಾದಲ್ಲಿ ಯಾವುದೇ ಕೋವಿಡ ಪರೀಕ್ಷೆಯ ಅಗತ್ಯ ಇರುವುದಿಲ್ಲ. ಸದ್ಯಕ್ಕೆ ಭಟ್ಕಳದಲ್ಲಿ ಯಾವುದೇ ಕೋವಿಡ್ ಪ್ರಕರಣ ಇಲ್ಲವಾಗಿದ್ದು ಈ ಬಗ್ಗೆ ಆರೋಗ್ಯ ಇಲಾಖೆಯ ನಿಗಾದಲ್ಲಿದೆ ಎಂದು ಸ್ಪಷ್ಟಪಡಿಸಿದರು.

ಜ್ವರ, ಮೈಕೈ ನೋವು, ತಲೆ ನೋವು, ಕೆಮ್ಮು, ಜ್ವರ ಸೇರಿದಂತೆ ಯಾವುದೇ ಅನಾರೋಗ್ಯ ಸಮಸ್ಯೆಗಳು ಕಾಣಿಸಿಕೊಂಡರೂ ಆಸ್ಪತ್ರೆಗೆ ತೆರಳಿ ವೈದ್ಯರಲ್ಲಿ ತಪಾಸಣೆ ಮಾಡಿಸಿಕೊಳ್ಳುವುದು ತೀರಾ ಅಗತ್ಯವಾಗಿದೆ. ಜ್ವರ ಬಂದವರು ಆಸ್ಪತ್ರೆಗೆ ಹೋಗದೇ ಮನೆಯಲ್ಲೇ ಇದ್ದು ಇದರ ಬಗ್ಗೆ ನಿರ್ಲಕ್ಷ್ಯ ಮಾಡಬೇಡಿ. ಸದ್ಯ ವೈರಲ್ ಜ್ವರದ ಬಗ್ಗೆ ಹಾಗೂ ವಿವಿಧ ರೀತಿಯ ಜ್ವರಗಳ ಬಗ್ಗೆ ಜಾಗೃತಿ ಹಾಗೂ ರೋಗಗಳು ಹರಡದಂತೆ ಮುನ್ನೆಚ್ಚರಿಕೆಕ್ರಮ ಕೈಗೊಳ್ಳುವ ಬಗ್ಗೆಯೂ ಅರಿವು ಮೂಡಿಸಲಾಗುತ್ತಿದೆ.