ಹೊನ್ನಾವರ: ಕೇವಲ ಸರ್ಕಾರಿ, ಉದ್ಯೋಗಕ್ಕಾಗಿ ಸೀಮಿತವಾಗಿ ಪದವಿಶಿಕ್ಷಣ ಹೊಂದುವ ಬದಲಿಗೆ ಸ್ವಾವಲಂಬಿ ಜೀವನ ನಡೆಸಲು ಅಗತ್ಯವಿರುವ ಕೌಶಲ್ಯದ ಬಗ್ಗೆ ತರಬೇತಿ ಹೊಂದುವುದು ಹೆಚ್ಚು ಉಪಯುಕ್ತವಾಗುತ್ತದೆ ಎಂದು ಅಳ್ಳಂಕಿಯ ಸ್ಪಂದನ ಸಮಾಜ ಸೇವಾ ಬಳಗದ ಅಧ್ಯಕ್ಷ ಚಂದ್ರಕಾಂತ ಕೊಚರೇಕರ ಅವರು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು .
ಅವರು ಕೆನರಾ ಬ್ಯಾಂಕ್ ಗ್ರಾಮೀಣ ಸ್ವ ಉದ್ಯೋಗ ತರಬೇತಿ ಸಂಸ್ಥೆಯವರು ಅಳ್ಳಂಕಿಯ ಸ್ಪಂದನ ಸಮಾಜ ಸೇವಾ ಬಳಗ, ಮರಿಯಾ ನಿಲಯ ಹೊನ್ನಾವರ ಮತ್ತು ಅಳ್ಳಂಕಿಯ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಜಂಟಿ ಸಹಯೋಗದಲ್ಲಿ ಅಳ್ಳಂಕಿಯಲ್ಲಿ ಶನಿವಾರ ಆಯೋಜಿಸಿದ ಉದ್ಯೋಗ ಮಾಹಿತಿ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು.ವಿದ್ಯಾರ್ಥಿಗಳು ಮುಂದೆ ತಮ್ಮ ಬದುಕನ್ನು ರೂಪಿಸಿಕೊಳ್ಳಲು ಗುರು ಹಿರಿಯರ ಮಾರ್ಗದರ್ಶನ ಪಡೆಯಬೇಕು. ಜೀವನದಲ್ಲಿ ಏನನ್ನಾದರೂ ಉತ್ತಮವಾದುದನ್ನು ಸಾಧಿಸುವ ಛಲವನ್ನು ಹೊಂದಬೇಕು. ಪರಾವಲಂಬಿಯಾಗದೇ ಸ್ವಾವಲಂಬನೆಯ ಬದುಕನ್ನು ಕಟ್ಟಿಕೊಳ್ಳಲು ಸಾಕಷ್ಟು ಅವಕಾಶಗಳಿದ್ದು ಸಿಕ್ಕ ಅವಕಾಶವನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಡಾ. ಜಿ. ಎಸ್. ಹೆಗ್ಡೆ ಮಾತನಾಡಿ ಪ್ರತಿಯೊಬ್ಬ ವಿದ್ಯಾರ್ಥಿಯು ತಮ್ಮ ಜೀವನವನ್ನು ಹೇಗೆ ರೂಪಿಸಿಕೊಳ್ಳಬೇಕು ಮುಂದೆ ತಮ್ಮ ಬದುಕು ಹೇಗಿರಬೇಕು ಎಂಬುದನ್ನು ವಿದ್ಯಾರ್ಥಿಯು ಪಿ. ಯು. ಸಿ ಹಂತದಲ್ಲಿ ತಾನು ತೆಗೆದುಕೊಳ್ಳುವ ನಿರ್ಧಾರವನ್ನು ಅವಲಂಬಿಸಿರುತ್ತದೆ. ಸಾಧಿಸುವ ಛಲ – ಶ್ರದ್ಧೆ, ಸತತ ಪ್ರಯತ್ನ ವಿದ್ದರೆ ಆತ ತನ್ನ ಬದುಕನ್ನು ಉತ್ತಮವಾಗಿ ರೂಪಿಸಿಕೊಳ್ಳಲು ಸಾಧ್ಯವಿದೆ. ಪದವಿ ಶಿಕ್ಷಣ ಹೊಂದಿದ ಮಾತ್ರಕ್ಕೆ ಎಲ್ಲರೂ ಸರ್ಕಾರಿ ನೌಕರರಾಗಲು ಸಾಧ್ಯವಿಲ್ಲ. ಬೇರೆ ಬೇರೆ ಕ್ಷೇತ್ರಗಳಲ್ಲಿ ಸ್ವಾವಲಂಬಿ ಬದುಕನ್ನು ರೂಪಿಸಿಕೊಳ್ಳಲು ಸಾಧ್ಯವಿದೆ. ಆ ನಿಟ್ಟಿನಲ್ಲಿ ನಮ್ಮ ಯುವ ಜನಾಂಗ ಚಿಂತನೆ ಮಾಡಬೇಕು.ಕೆನರಾ ಬ್ಯಾಂಕ್ ರುಡ್ ಸೆಟ್ ನಂತಹ ಸಂಸ್ಥೆಗಳಿಂದ ಆಸಕ್ತಿ ಇರುವ ವಿಷಯದಲ್ಲಿ ತರಬೇತಿ ಪಡೆದು ಲಭ್ಯವಿರುವ ಅವಕಾಶಗಳನ್ನು ಬಳಸಿಕೊಂಡು ಗ್ರಾಮೀಣ ಭಾಗದಲ್ಲಿ ಗುಡಿಕೈಗಾರಿಕೆ ಸಹಿತ ವಿವಿಧ ಉದ್ದಿಮೆಗಳನ್ನು ಸ್ಥಾಪಿಸಿ ಸ್ವಉದ್ಯೋಗವನ್ನು ನಡೆಸಿ ಸ್ವಾವಲಂಬಿ ಜೀವನ ನಡೆಸಲು ಸಾಧ್ಯ. ನೀವೇ ಹಲವರಿಗೆ ಉದ್ಯೋಗವನ್ನು ನೀಡಬಹುದು ಎಂದು ಹೇಳಿದರು.ಕೆನರಾ ಬ್ಯಾಂಕ್ ಗ್ರಾಮೀಣ ಸ್ವ ಉದ್ಯೋಗ ತರಬೇತಿ ಸಂಸ್ಥೆಯ ಗೌರಿಶ ನಾಯ್ಕ ಮತ್ತು ಗಿರೀಶ ಭಂಡಾರಿಯವರು ವಿದ್ಯಾರ್ಥಿಗಳಿಗೆ ಸ್ವ ಉದ್ಯೋಗ ಕೈಗೊಳ್ಳಲು ಇರುವ ವಿಪುಲ ಅವಕಾಶಗಳ ಬಗ್ಗೆ ಮತ್ತು ತಾವು ನೀಡುವ ತರಬೇತಿಗಳ ಬಗ್ಗೆ ಹಾಗೂ ಬ್ಯಾಂಕುಗಳಿಂದ ಲಭ್ಯವಿರುವ ಆರ್ಥಿಕ ನೆರವು, ಸರಕಾರದ ಸಹಾಯ, ಮೊಬೈಲ್ ಬ್ಯಾಂಕಿಂಗ್ ವ್ಯವಹಾರ ದಲ್ಲಿ ಸಾರ್ವಜನಿಕರು ವಹಿಸಬೇಕಾದ ಎಚ್ಚರಿಕೆ, ಇಂಟರ್‌ನೆಟ್ ಬ್ಯಾಂಕಿಂಗ್ ಹಾಗೂ ಎಟಿಎಂ ವ್ಯವಹಾರದಲ್ಲಿ ಹ್ಯಾಕಿಂಗ್ ಇತ್ಯಾದಿಗಳಿಂದ ಮೋಸ ಹೋಗದಂತೆ ವಹಿಸಬೇಕಾದ ಎಚ್ಚರಿಕೆ ಇತ್ಯಾದಿಗಳ ಕುರಿತು ಕಾರ್ಯಾಗಾರದಲ್ಲಿ ಉಪಯುಕ್ತ ಮಾಹಿತಿ ನೀಡಿದರು ಮರಿಯಾ ನಿಲಯದ ಸಿಸ್ಟರ್ ಮೇರಿ ರೊಡ್ರಗೀಸ ಮತ್ತು ಸರಿತಾ ಪಿಂಟೋ, ಉಪನ್ಯಾಸಕ ಪ್ರಕಾಶ ನಾಯ್ಕ, ಮಾಧವ ನಾಯ್ಕ ಮತ್ತಿತರರು ಉಪಸ್ಥಿತರಿದ್ದರು. ಉಪನ್ಯಾಸಕ ಮಹೇಶ್ ಹೆಗಡೆ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಸ್ಪಂದನದ ಎಂ. ಟಿ ನಾಯ್ಕ ವಂದಿಸಿದರು.