ವ್ಯಸನಮುಕ್ತ ಸಮಾಜ ನಿರ್ಮಿಸಲು ಯುವಕರಿಗೆ ಕರೆ

ಹೊನ್ನಾವರ: ತಾಲೂಕಾ ಆಡಳಿತ, ತಾಲೂಕಾ ಪಂಚಾಯತ್ ಹಾಗೂ ಪಟ್ಟಣ ಪಂಚಾಯತ ಹೊನ್ನಾವರ, ಎಸ್. ಡಿ.ಎಂ ಮಹಾವಿದ್ಯಾಲಯ ಮತ್ತು ರೋಟರಿ ಕ್ಲಬ್ ಆಶ್ರಯದಲ್ಲಿ ಶ್ರಿ ಮ. ನಿ. ಪ್ರ. ಡಾ. ಮಹಾಂತ ಶಿವಯೋಗಿಗಳ ಜನ್ಮ ದಿನಾಚರಣೆ ಪ್ರಯುಕ್ತ ಸೋಮವಾರ ವ್ಯಸನ ಮುಕ್ತ ದಿನಾಚರಣೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.

ಗ್ರೇಡ್ 2 ತಹಶೀಲ್ದಾರ್ ಉಷಾ ಪಾವಸ್ಕರ್ ಶಿವಯೋಗಿಗಳ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಪುಷ್ಪ ನಮನಗಳ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು. ನಂತರ ಮಾತನಾಡಿ ಸಮಾಜದಲ್ಲಿ ಪ್ರತಿಭಾವಂತ ಯುವಕರು ವ್ಯಸನಗಳಿಗೆ ದಾಸರಾಗಿ ತಮ್ಮ ಭವಿಷ್ಯವನ್ನು ಕತ್ತಲೆಯಲ್ಲಿ ದೂಡುತ್ತಿದ್ದಾರೆ. ವಿದ್ಯಾರ್ಥಿಗಳು ಕೆಟ್ಟ ವ್ಯಸನ ಇರುವವರಿಂದ ದೂರವಾಗಿ ವ್ಯಸನಗಳು ಬಿಡಿಸುವಲ್ಲಿ ಸಹಾಯ ಮಾಡಿ ತಮ್ಮ ಸಾಮಾಜಿಕ ಜವಾಬ್ದಾರಿಯನ್ನು ನಿರ್ವಹಿಸುವಂತೆ ಕರೆ ನೀಡಿದರು.

ಇಂಡಿಯನ್ ಮೆಡಿಕಲ್ ಅಸೋಸಿಯೇಷನ್ ಅಧ್ಯಕ್ಷ ಡಾ. ವಿಶಾಲ್ ಮಾತನಾಡಿ ದೇಶದಲ್ಲಿ 100 ಜನರಿಗೆ ಕ್ಯಾನ್ಸರ್ ಬಂದಿದೆ ಎಂದರೆ ಅವರಲ್ಲಿ 30% ತಂಬಾಕು ಕಾರಣವಾಗಿರುತ್ತದೆ. ತಂಬಾಕು ತ್ಯಜಿಸಲು ಮೊದಲು ದೃಢ ಸಂಕಲ್ಪ ಮಾಡಬೇಕು ಎಂದರು.

ಹೊನ್ನಾವರ ರೋಟರಿ ಕ್ಲಬ್ ಅಧ್ಯಕ್ಷ ಮಹೇಶ್ ಕಲ್ಯಾಣಪುರ್ ಮಾತನಾಡಿ ರೋಟರಿ ಕ್ಲಬ್ ವತಿಯಿಂದ ಪ್ರತಿ ವರ್ಷ ಡ್ರಗ್ಸ್ ವಿರುದ್ಧ ಹೊರಡಲು ಡ್ರಗ್ಸ್ ಡಿ ಅಡಿಕ್ಷನ್ ಕ್ಯಾಂಪ್ ಕಾರ್ಯಕ್ರಮ ಆಯೋಜಿಸುತ್ತಿದೆ. ಎಲ್ಲಾ ವಿದ್ಯಾರ್ಥಿಗಳು ತಮ್ಮ ಜವಾಬ್ದಾರಿಯನ್ನು ಅರಿತು ವ್ಯಸನಗಳಿಂದ ದೂರವಿದ್ದು ದೇಶದ ಶ್ರೇಷ್ಠ ನಾಗರಿಕರಾಗಿ ಎಂದು ಸಲಹೆ ನೀಡಿದರು.

ತಾಲೂಕಾ ಆಡಳಿತದ ವತಿಯಿಂದ ಹೈಸ್ಕೂಲ್ ಮಕ್ಕಳಿಗಾಗಿ ವ್ಯಸನ ಮುಕ್ತ ಸಮಾಜ ಈ ವಿಷಯದ ಕುರಿತು ಚಿತ್ರಕಲಾ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು. ಕಾರ್ಯಕ್ರಮದಲ್ಲಿ ಡಾ. ವಿಜಯಲಕ್ಷ್ಮಿ ಭಟ್, ಪ್ರೊ ಎಂ ಎಚ್ ಭಟ್, ಪ್ರೊ ವಿನಾಯಕ ಭಟ್, ಎನ್.ಎಸ್ ಎಸ್ ಅಧಿಕಾರಿಗಳು ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.