ಹಾಲ್ ಟಿಕೆಟ್ ನೀಡಿ ಪರೀಕ್ಷೆ ಬರೆಯಲು ಅವಕಾಶ ಮಾಡಿಕೊಡದ ಕಾಲೇಜು ವಿರುದ್ಧ ವಿದ್ಯಾರ್ಥಿಗಳು, ಪಾಲಕರ ಆಕ್ರೋಶ

ಭಟ್ಕಳ:  ಬಿ.ಎ. ಮತ್ತು ಬಿ.ಕಾಂ.ನ 18 ವಿದ್ಯಾರ್ಥಿಗಳು ಅವರ ಸೆಮಿಸ್ಟರ್ ಪರೀಕ್ಷೆ ಬರೆಯಲು ಹಾಲ್ ಟಿಕೆಟ್ ಪಡೆದು ಶನಿವಾರದಂದು ಪರೀಕ್ಷೆ ಬರೆಯಲು ಅವಕಾಶ ನೀಡದೆ ಪರೀಕ್ಷಾ ಕೇಂದ್ರದಿಂದ ಹೊರಗೆ ಹಾಕಿ ವಿದ್ಯಾರ್ಥಿಗಳ ಭವಿಷ್ಯದ ಜೊತೆ ಚೆಲ್ಲಾಟವಾಡಿದ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರ ವರ್ತನೆಗೆ ವಿದ್ಯಾರ್ಥಿಗಳು ಹಾಗೂ ಅವರ ಪಾಲಕರಿಂದ ಆಕ್ರೋಶ ವ್ಯಕ್ತಪಡಿಸಿದ ಘಟನೆ ನಡೆದಿದೆ.

ಸೆಪ್ಟೆಂಬರ 1 ರಿಂದ ಕವಿವಿ ಪದವಿ ಕಾಲೇಜಿನ ವಿದ್ಯಾರ್ಥಿಗಳಿಗೆ ಸೆಮಿಸ್ಟರ್ ಪರೀಕ್ಷೆ ಆರಂಭವಾಗಿದ್ದು, ಇದರಲ್ಲಿ ಭಟ್ಕಳ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕಲಿಯುತ್ತಿರುವ  ಬಿ.ಎ., ಬಿ.ಕಾಂ. ಮತ್ತು ಬಿ.ಬಿ.ಎ.ನ ಒಟ್ಟು 18 ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಯಲು ಅಲ್ಲಿನ  ಪ್ರಾಂಶುಪಾಲರು  ಹಾಗೂ ಯು.ಯು.ಸಿ.ಎಂ.ಸಿ. ಪ್ರಭಾರಿ ನಾಗೇಶ ಶೆಟ್ಟಿ ಹಾಜರಾತಿ ಕಡಿಮೆ ಇದೆ ಎಂದು ಅವಕಾಶ ನೀಡಲಿಲ್ಲ. ಇದನ್ನು ಪ್ರಶ್ನಿಸಿದ
ವಿದ್ಯಾರ್ಥಿಗಳ ಪಾಲಕರು ಹಾಗೂ ವಿದ್ಯಾರ್ಥಿಗಳು ಸ್ಥಳದಲ್ಲಿ ಪ್ರತಿಭಟನೆ ನಡೆಸಿದ್ದಾರೆ. ಪಾಲಕರು ಹಾಗೂ ವಿದ್ಯಾರ್ಥಿಗಳ ಪ್ರಶ್ನೆಗೆ ಸಮರ್ಪಕವಾದ ಉತ್ತರ ನೀಡದ ಪ್ರಾಂಶುಪಾಲರ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈಗಾಗಲೇ ಕವಿವಿಯಿಂದ ಬಂದ ಓಎಮ್.ಆರ್. ಶೀಟ್ ಭರ್ತಿ ಮಾಡಿ ಅದನ್ನು ಕಾಲೇಜು ವಿಶ್ವವಿದ್ಯಾಲಯಕ್ಕೆ ಕಳುಹಿಸಿ ಆ ಬಳಿಕ ನಮಗೆಲ್ಲ ಪರೀಕ್ಷಾ ಪ್ರವೇಶ ಪತ್ರ ನೀಡಲಾಗಿತ್ತು. ಅದನ್ನು ಸಹ ಕೆಲ ವಿದ್ಯಾರ್ಥಿಗಳಿಗೆ ಶುಕ್ರವಾರದಂದು ಹಾಗೂ ಶನಿವಾರದಂದು ಪರೀಕ್ಷೆ ಅವಧಿಯಲ್ಲಿಯೇ ನೀಡಿದ್ದಾರೆ ಎಂದು ಪರೀಕ್ಷೆಯಿಂದ ವಂಚಿತರಾದ ವಿದ್ಯಾರ್ಥಿಗಳು ಪ್ರಾಂಶುಪಾಲರಿಗೆ ತಿಳಿಸಿದ್ದಾರೆ. ಹಾಗೂ ಕ.ವಿ.ವಿ.ಯ ಯುಯುಸಿಎಂಎಸ್ ಎನ್ನುವ ವೆಬ್ ಸೈಟಿನಲ್ಲಿ ಪರೀಕ್ಷೆ ಬರೆಯಲು ಈ ಎಲ್ಲಾ ವಿಧ್ಯಾರ್ಥಿಗಳು ಅರ್ಹರು ಎಂದು ಸಹ ಬಂದಿದ್ದಲ್ಲದೇ ಈಗಾಗಲೇ ಪರೀಕ್ಷಾ ಪ್ರವೇಶ ಪತ್ರ ಕೂಡ ನೀಡಲಾಗಿದೆ. ಒಂದು ವೇಳೆ ಪರೀಕ್ಷೆ ಬರೆಯಲು ಅರ್ಹತೆ ಇಲ್ಲದಿದ್ದಲ್ಲಿ ಪರೀಕ್ಷಾ ಪ್ರವೇಶ ಪತ್ರ ವಿದ್ಯಾರ್ಥಿಗಳಿಗೆ ವಿತರಿಸುವುದಿಲ್ಲ. ಪ್ರವೇಶ ಪತ್ರ ಬಂದ ಮೇಲೂ ಅಲ್ಲದೇ ಯುಯುಸಿಎಂಎಸ್ ವೆಬ್ ಸೈಟ್‌ನಲ್ಲಿ ಪರೀಕ್ಷೆ ಬರೆಯಲು ಅರ್ಹ ಎಂದಿದ್ದರೂ ಅವಕಾಶ ನೀಡದ ಪ್ರಾಂಶುಪಾಲರ ವರ್ತನೆಗೆ ತೀವ್ರವಾದ ಟೀಕೆ ವ್ಯಕ್ತವಾಯಿತು.

ಇದಕ್ಕೆ ಪ್ರಾಂಶುಪಾಲೆ ಡಾ. ಉಷಾದೇವಿ ಅವರು ಹಾಜರಾತಿಯ ಬಗ್ಗೆ ನಮ್ಮ ಕಾಲೇಜಿನಲ್ಲಿ ಉಪನ್ಯಾಸಕ ಹಾಗೂ ಯುಯುಸಿಎಂಸಿ ಪ್ರಭಾರಿಯಾಗಿರುವ ನಾಗೇಶ ಶೆಟ್ಟಿ ಅವರಿಗೆ ನೀಡಲಾಗಿದ್ದು ಈ ಬಗ್ಗೆ ನಾನು ಏನು ಮಾಡಲು ಸಾಧ್ಯವಿಲ್ಲ. ವಿಶ್ವವಿದ್ಯಾಲಯದಿಂದ ಕಾಲೇಜಿಗೆ ಸಮರ್ಪಕವಾದ ಆದೇಶ ಬಂದಿದ್ದಲ್ಲಿ ಪರೀಕ್ಷೆ ಬರೆಯಲು ಅವಕಾಶ ಮಾಡಿಕೊಡಲಿದ್ದೇವೆ ನಮಗೆ ಇನ್ನು ಯಾವುದೇ ಸೂಚನೆ ಬಂದಿಲ್ಲ ಮತ್ತು ವಿಶ್ವವಿದ್ಯಾಲಯದ ಸೂಚನೆಯಂತೆ ಪರೀಕ್ಷೆಗೆ ಅವಕಾಶ ನೀಡಲಾಗುವುದಿಲ್ಲ ಎಂದ ಅವರು ನಾನು ಕಾಲೇಜಿನಲ್ಲಿ ಆಯಾ ವಿಭಾಗಕ್ಕೆ ಓರ್ವ ಉಪನ್ಯಾಸಕರನ್ನು ನೇಮಿಸಿದ್ದು ಅವುಗಳಿಗೆ ಅವರೇ ಹೊಣೆಗಾರರು ಎಂದು ಉದ್ದಟತನದ ಉತ್ತರ ಪಾಲಕರಿಗೆ ನೀಡಿದರು.

ಭಟ್ಕಳ ಸರ್ಕಾರಿ ಕಾಲೇಜಿನಲ್ಲಿ ಹಲವು ವಿದ್ಯಾರ್ಥಿಗಳ ಹಾಜರಾತಿ ಕಡಿಮೆ ಇದೆ. ಇಲ್ಲಿ ದಾಖಲಾತಿ ಪಡೆದು ಕೆಲವರು ಬೆಂಗಳೂರಿನಲ್ಲಿ ಉದ್ಯೋಗ ಮಾಡುತ್ತಿದ್ದಾರೆ. ಅವರು ಕೇವಲ ಪರೀಕ್ಷೆ ಬರೆಯಲು ಮಾತ್ರ ಬರುತ್ತಿದ್ದಾರೆ. ಹಾಜರಾತಿ ಇಲ್ಲದೇ ಅವರಿಗೆ ಹೇಗೆ ಅರ್ಹತೆ ದೊರೆಯಿತು ಎಂದು ಪರೀಕ್ಷೆಯಿಂದ ವಂಚನೆಗೊಳಗಾದ ವಿದ್ಯಾರ್ಥಿಗಳ ಪಾಲಕರ ಪ್ರಶ್ನಿಸಿದ್ದಾರೆ.

ಕೆಲ ವಿದ್ಯಾರ್ಥಿಗಳ ಟಾರ್ಗೆಟ್ : ಈ ಬಗ್ಗೆ ಪರೀಕ್ಷೆ ಬರೆಯಲು ಅವಕಾಶ ಸಿಗದ ಪದವಿ ವಿದ್ಯಾರ್ಥಿ ಪವನ ಮಾತನಾಡಿ ಬಿ.ಎ. 4 ನೇ ಸೆಮಿಸ್ಟರನಲ್ಲಿ ಒಟ್ಟು 24 ವಿದ್ಯಾರ್ಥಿಗಳಿದ್ದು ಈ ಪೈಕಿ 16 ವಿದ್ಯಾರ್ಥಿಗಳ ಹಾಜರಾತಿ ಕಡಿಮೆ ಇದೆ ಎಂದು ಪರೀಕ್ಷಾ ಪತ್ರದ ನೀಡುವ ಪೂರ್ವದಲ್ಲಿ ಕಾಲೇಜು ಉಪನ್ಯಾಸಕ ಹಾಗೂ ಯುಯುಸಿಎಂಸಿ ಪ್ರಭಾರಿ ನಾಗೇಶ ಶೆಟ್ಟಿ ಅವರು ವಾಟ್ಸಾಪ್ ಗ್ರೂಪನಲ್ಲಿ ವಿದ್ಯಾರ್ಥಿಗಳ ಗಮನಕ್ಕೆ ಬರುವಂತೆ ಹಾಕಲಾಗಿತ್ತು. ಅದರಲ್ಲಿ 8 ಮಂದಿ ವಿದ್ಯಾರ್ಥಿಗಳು ಹಾಜರಾತಿ ಕಡಿಮೆ ಇದ್ದರು ಸಹ ಪರೀಕ್ಷೆ ಬರೆದಿದ್ದು ಉಳಿದ 8 ಮಂದಿಗೆ ಪರೀಕ್ಷೆ ಬರೆಯಲು ಕಾಲೇಜು ನಿರಾಕರಿಸಿ ಹೊರಗೆ ಹಾಕಿರುವುದಕ್ಕೆ ಕಾರಣವಾಗಿದೆ. ಕಾಲೇಜಿನ ವಿದ್ಯಾರ್ಥಿಗಳಲ್ಲಿ ಈ ರೀತಿಯ ತಾರತಮ್ಯ ಮಾಡಿದ್ದು ಯಾಕೆ ಎಂಬ ಪ್ರಶ್ನೆಗೆ ಪ್ರಾಂಶುಪಾಲರು ಉತ್ತರಿಸಬೇಕು. ಕೆಲವು ವಿದ್ಯಾರ್ಥಿಗಳನಷ್ಟೆ ಟಾರ್ಗೆಟ್ ಮಾಡಿ ಅವರ ಭವಿಷ್ಯದ ಜೊತೆ ಚೆಲ್ಲಾಟವಾಡುತ್ತಿದ್ದಾರೆ ಎಂದು ವಿದ್ಯಾರ್ಥಿ ಪವನ ನಾಯ್ಕ ಆರೋಪಿಸಿದ್ದಾರೆ.

ವಿದ್ಯಾರ್ಥಿ ಪಾಲಕ ಮಾದೇವ ನಾಯ್ಕ ಮಾತನಾಡಿ
ನನ್ನ ಆರ್ಥಿಕ ಪರಿಸ್ಥಿತಿ ಹಾಗೂ ಆರೋಗ್ಯ ಸರಿ ಇಲ್ಲ. ನನ್ನ ಮಗ ಬೇರೆ ಕಡೆ ಕೆಲಸ ಮಾಡಿ ಪದವಿ ವ್ಯಾಸಾಂಗ ಮಾಡುತ್ತಿದ್ದಾನೆ. ಹೀಗಿರುವಾಗ ಅವನ ಹಾಜರಾತಿ ಸ್ವಲ್ಪ ಕಡಿಮೆ ಆಗಿದೆ. ಆದರೆ ವಿಶ್ವವಿದ್ಯಾಲಯದವರು ಹಾಲ್ ಟಿಕೇಟ್ ಹಾಗೂ ವೆಬ್ ಸೈಟ್‌ನಲ್ಲಿ ಅರ್ಹತೆ ಇದೆ ಎಂದಾಗಲೂ ಪರೀಕ್ಷೆ ಬರೆಯಲು ಅವಕಾಶ ನೀಡದೆ ಪರೀಕ್ಷೆ ಬರೆಯಲು ಅವಕಾಶ ನೀಡದೇ ಮಗನ ಭವಿಷ್ಯದ ಜೊತೆ ಚೆಲ್ಲಾಟವಾಡುವದು ಸರಿಯಲ್ಲ. ಮುಂದೆ ಇರುವ ಉಳಿದ ಪರೀಕ್ಷೆಗೆ ಅವಕಾಶ ಮಾಡಿಕೊಡದಿದ್ದಲ್ಲಿ ಸಾರ್ವಜನಿಕವಾಗಿ ಹೋರಾಟ ಮಾಡಲಿದ್ದೇವೆ. ಕಾಲೇಜಿನ ಪ್ರಾಂಶುಪಾಲರಾದವರು ರಾಜಕೀಯ ಪಕ್ಷದ ಮಾತುಗಳನ್ನಾಡಿದ್ದು ಕಾಂಗ್ರೆಸ್ ಸರಕಾರ ನಮ್ಮದು ಎಂಬ ಮಾತು ಕಾಲೇಜಿನ ಆವರಣದಲ್ಲಿ ಹೇಳಿರುವದಕ್ಕೆ ಪೋಲೀಸರು ಹಾಗೂ ಪಾಲಕರಿಗೆ ಆಶ್ಚರ್ಯಕರವಾಗಿದೆ.

ಈ  ಬಗ್ಗೆ ನಾಗೇಶ ಶೆಟ್ಟಿ – ಕಾಲೇಜು ಉಪನ್ಯಾಸಕ, ಯುಯುಸಿಎಂಸಿ ಪ್ರಭಾರಿ ದೂರವಾಣಿ ಮೂಲಕ ಮಾತನಾಡಿ ಯುನಿವರ್ಸಿಟಿಯ ನಿಯಮದ ಪ್ರಕಾರ ಒಂದು ವಿಷಯದಲ್ಲಿ ಹಾಜರಾತಿ ಕಡಿಮೆ ಇದ್ದರೂ ಪರೀಕ್ಷೆ ಬರೆಯಲು ಅರ್ಹತೆ ಕಳೆದುಕೊಳ್ಳುತ್ತಾರೆ. ಅದೆ ನಿಯಮವನ್ನು ನಾವು ಪಾಲಿಸಿದ್ದೇವೆ. ಅದರ ಪ್ರಕಾರ 16 ವಿದ್ಯಾರ್ಥಿಗಳ ಪರೀಕ್ಷೆ ಬರೆಯಲು ಅರ್ಹತೆ ಕಳೆದುಕೊಂಡಿದ್ದಾರೆ ಎಂದಿದ್ದಾರೆ

ಘಟನೆಯ ಬಗ್ಗೆ ತಿಳಿದು ಸ್ಥಳಕ್ಕೆ ಭಟ್ಕಳ ಶಹರ ಠಾಣೆ ಪಿಎಸ್‌ಐ ಶಿವಾನಂದ, ಎಎಸ್‌ಐ ಗೋಪಾಲ ನಾಯ್ಕ, ರಾಮಚಂದ್ರ ವೈದ್ಯ ಹಾಗೂ ಸಿಬ್ಬಂದಿ ಸ್ಥಳಕ್ಕೆ ಬಂದಿದ್ದು ವಿದ್ಯಾರ್ಥಿಗಳನ್ನು ಸಮಾಧಾನ ಪಡಿಸಿದ್ದಾರೆ. ಪೋಲೀಸರ ನೇತ್ರತ್ವದಲ್ಲಿ
ಪರೀಕ್ಷೆ ಬರೆಯಲು ಯಾಕೆ ಅವಕಾಶ ನೀಡಿಲ್ಲ ಎಂದು ಪ್ರಾಂಶುಪಾಲರ ಬಳಿ ಲಿಖಿತವಾಗಿ ನೀಡುವಂತೆ ಸೂಚಿಸಿದ್ದಾರೆ. ಇದಕ್ಕೆ ಕಾಲೇಜಿನ ಪ್ರಾಂಶುಪಾಲರು ಕಾರಣ ಹೇಳಿ ವಿದ್ಯಾರ್ಥಿಗಳು ಪರೀಕ್ಷೆ ಬರೆಯಲು ಅವಕಾಶವಿಲ್ಲ ಎಂದು‌ ಲಿಖಿತ ಪತ್ರ ನೀಡಿದ್ದಾರೆ.

ಒಟ್ಟಾರೆ ಪ್ರಾಂಶುಪಾಲರು ಹಾಗೂ ಯುಯುಸಿಎಂಸಿ ಪ್ರಭಾರಿ ಅವರು ವಿದ್ಯಾರ್ಥಿಗಳಲ್ಲಿ ಮಾಡಿದ ತಾರತಮ್ಯದಿಂದ ಸೆಮಿಸ್ಟರ ಪರೀಕ್ಷೆಯಿಂದ ವಂಚಿತರಾಗುವಂತಾಯಿತು ಎಂದು ಹಿಡಿಶಾಪ ಹಾಕಿದ್ದಾರೆ.