ಅಸ್ವಚ್ಚತೆಯ ಆಗರವಾದ ಹಳಿಯಾಳ ಪಟ್ಟಣದ ಮೋತಿ‌ ಕೆರೆ : ಸಾಮಾಜಿಕ ಜವಾಬ್ದಾರಿ ಮರೆತ ಸಾರ್ವಜನಿಕರು

ಹಳಿಯಾಳ : ಪಟ್ಟಣದ ಪ್ರಮುಖ ಆಕರ್ಷಣೆಯಾಗಿರುವ ಮೋತಿಕೆರೆಯು ಅಸ್ವಚ್ಚತೆಯ ಆಗರವಾಗಿ ಸಾರ್ವಜನಿಕರ ಆಕ್ರೋಶಕ್ಕೆ ಗುರಿಯಾಗಿದೆ.

ಇಲ್ಲಿ ಪುರಸಭೆಯ ಪೌರಕಾರ್ಮಿಕರು ಕಾಲಕಾಲಕ್ಕೆ ಸ್ವಚ್ಚತೆ ಕಾರ್ಯವನ್ನು ಕೈಗೊಂಡರೂ ಪುಂಡ, ಪೋಕರಿಗಳು ಅಸ್ವಚ್ಚತೆಯ ತಾಣವನ್ನಾಗಿಸಿದ್ದಾರೆ. ಕುಡುಕರಿಗೆ ಈ ಕೆರೆ ಮೋಜು ಮಸ್ತಿಯ ತಾಣವಾಗತೊಡಗಿದೆ. ಅಲ್ಲಲ್ಲಿ ಕುಡಿದು ಬಿಸಾಕಿದ ಮದ್ಯದ ಖಾಲಿ ಬಾಟಲಿಗಳು, ಪ್ಲಾಸ್ಟಿಕ್ ಲಕೋಟೆಗಳು ಸ್ವಚ್ಚತೆಗೆ ಮಾರಕವಾಗತೊಡಗಿದೆ. ಇನ್ನೂ ಕೆಲವರು ಇಲ್ಲೇ ಮಲ‌ ವಿಸರ್ಜನೆ ಮಾಡುವ‌ ಮೂಲಕ ಸಾಮಾಜಿಕ ಪ್ರಜ್ಞೆಯನ್ನು ಮರೆತಂತಿದೆ.

ಎಲ್ಲದಕ್ಕೂ ಪುರಸಭೆಯ ಮೇಲೆ ಬೆರಳು ತೋರಿಸುವ ಮುನ್ನ ಪ್ರಜ್ಞಾವಂತ ನಾಗರಿಕರು ಸ್ವಚ್ಛತೆಯ ಕಡೆಗೆ ಹೆಚ್ಚಿನ ಗಮನವಿಟ್ಟಲ್ಲಿ ಈ ರೀತಿಯ ಅಸ್ವಚ್ಚತೆ ನಿರ್ಮಾಣವಾಗುವುದನ್ನು ತಪ್ಪಿಸಬಹುದು. ಊರಿನ ಸ್ವಚ್ಛತೆಗಾಗಿ ದೇಹವನ್ನು ದಂಡಿಸುವ ಪುರಸಭೆಯ ಪೌರಕಾರ್ಮಿಕರ ಮೇಲೆ ಅಸ್ವಚ್ಛತೆಯ ಗೂಬೆ ಕೂರಿಸುವ ಮುನ್ನ ಸಾರ್ವಜನಿಕರು ತಮ್ಮ ಜವಾಬ್ದಾರಿಗಳೇನು ಎನ್ನುವುದನ್ನು ಅರಿತು ನಡೆದುಕೊಳ್ಳಬೇಕಾಗಿದೆ.