ದಾಂಡೇಲಿ : ನಗರದ ಅಂಬೇವಾಡಿಯಲ್ಲಿರುವ ತಾಲ್ಲೂಕು ಆಡಳಿತ ಸೌಧದಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳ ಜಯಂತಿ ಹಾಗೂ ನುಲಿಯ ಚಂದಯ್ಯ ಜಯಂತಿಯನ್ನು ಇಂದು ಗುರುವಾರ ಆಚರಿಸಲಾಯಿತು.
ತಹಶೀಲ್ದಾರ್ ಶೈಲೇಶ್ ಪ್ರಮಾನಂದ್ ಅವರು ಶ್ರೀ.ನಾರಾಯಣ ಗುರುಗಳ ಮತ್ತು ನುಲಿಯ ಚಂದಯ್ಯ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ದೀಪ ಬೆಳಗಿಸಿ ಮಾತನಾಡುತ್ತಾ, ಜಾತಿ ದ್ವೇಷದ ಗೋಡೆಯನ್ನು ಒಡೆದು ಎಲ್ಲರಲ್ಲಿ ಭಾತೃತ್ವ ಮತ್ತು ಸಮಾನತೆಯ ಪರಿಕಲ್ಪನೆಯನ್ನು ಬಿತ್ತಿದ ಬ್ರಹ್ಮಶ್ರೀ ನಾರಾಯಣ ಗುರುಗಳ ಜೀವನ ಮತ್ತು ಹೋರಾಟ ಮಾನವಕುಲಕ್ಕೆ ಸದಾ ಆದರ್ಶವಾಗಿದೆ. ಎಲ್ಲರಲ್ಲೂ ಮಾನವೀಯತೆಯ ಸದಾಶಯವನ್ನು ಬೆಳೆಸುವಲ್ಲಿ ಗುರುವಿನ ಪಾತ್ರ ಮಹತ್ವಪೂರ್ಣವಾಗಿದೆ ಎಂದರು.ನಗರ ಸಭೆಯ ಪೌರಾಯುಕ್ತರಾದ ಆರ್.ಎಸ್.ಪವಾರ್ ಅವರು ಮಾತನಾಡಿ 12ನೇ ಶತಮಾನದಲ್ಲಿ ಶ್ರೇಷ್ಠ ವಚನಕಾರರಲ್ಲಿ ನುಲಿಯ ಚಂದಯ್ಯ ಸಹ ಒಬ್ಬರಾಗಿದ್ದಾರೆ. ಸಮಾಜದ ಅಂಕುಡೊಂಕು ತಿದ್ದುವಲ್ಲಿ ಅವರ ವಚನಗಳು ಸಹಕಾರಿಯಾಗಿವೆ ಎಂದರು. ಕೆನರಾ ವೆಲ್ಪೇರ್ ಟ್ರಸ್ಟ್ ಇದರ ಬಿಎಡ್ ಕಾಲೇಜಿನ ಉಪನ್ಯಾಸಕರಾದ ನಾಗೇಶ್ ನಾಯ್ಕ ಅವರು ಬ್ರಹ್ಮಶ್ರೀ ನಾರಾಯಣ ಗುರುಗಳ ಬಗ್ಗೆ ಉಪನ್ಯಾಸ ನೀಡಿದರು. ಶಿಕ್ಷಕ ಪ್ರವೀಣ್ ನಾಯ್ಕ ಅವರು ನಾರಾಯಣ ಗುರುಗಳ ಸಂದೇಶವನ್ನು ತಿಳಿಸಿದರು. ಸಮಾಜದ ಹಿರಿಯರಾದ ಆರ್.ಎಂ.ನಾಯ್ಕ ಹಾಗೂ ಮೋಹನ್ ನಾಯ್ಕ ಅವರನ್ನು ತಾಲ್ಲೂಕಾಡಳಿತದಿಂದ ಸನ್ಮಾನಿಸಲಾಯ್ತು.
ಈ ಸಂದರ್ಭದಲ್ಲಿ ನಗರದ ನಾಮಧಾರಿ ಸಮಾಜದ ಅಧ್ಯಕ್ಷರಾದ ಆರ್.ಎಸ್.ನಾಯ್ಕ್, ಗ್ರಾಮ ಪಂಚಾಯತ್ ಸದಸ್ಯರಾದ ರಮೇಶ್ ನಾಯ್ಕ, ಮಾಜಿ ನಗರ ಸಭಾ ಸದಸ್ಯರಾದ ಮಾರುತಿ ನಾಯ್ಕ, ಪ್ರಮುಖರಾದ ಜಿ.ಪಿ ನಾಯ್ಕ, ಕುಸುಮ ನಾಯ್ಕ, ಪ್ರಮೋದ್ ನಾಯ್ಕ,ಸುಧೀರ್ ನಾಯ್ಕ ಹಾಗೂ ಸಮಾಜ ಬಾಂಧವರು ಉಪಸ್ಥಿತರಿದ್ದರು.
ನಂದಿನಿ ನಾಯ್ಕ ಪ್ರಾರ್ಥನೆ ಹಾಡಿದರು. ಸೀತಾರಾಮ್ ನಾಯ್ಕ ಸ್ವಾಗತಿಸಿದ ಕಾರ್ಯಕ್ರಮಕ್ಕೆ ಸರಸ್ವತಿ ನಾಯ್ಕ ವಂದಿಸಿದರು. ಕಾರ್ಯಕ್ರಮದಲ್ಲಿ ತಹಶೀಲ್ದಾರ್ ಕಚೇರಿಯ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಭಾಗವಹಿಸಿದ್ದರು